Advertisement

ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಸರಿಸಿ

09:28 AM Jun 25, 2020 | Suhan S |

ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಜಿಂದಾಲ್‌ ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು ಮತ್ತು ಅನಗತ್ಯ ಅಪಸ್ವರ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್‌. ಆನಂದಸಿಂಗ್‌ ಜಿಂದಾಲ್‌ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆ-ಸ್ವಾನ್‌ ಮೂಲಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮತ್ತು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರೊಂದಿಗೆ ವೀಡಿಯೋ ಸಂವಾದದ ಮೂಲಕ ಚರ್ಚೆ ನಡೆಸುತ್ತಿದ್ದಾಗ ಅವರು ಮಾತನಾಡಿದರು. ಜಿಂದಾಲ್‌ ಕಾರ್ಖಾನೆಯಲ್ಲಿ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಜೇಶನ್‌, ಸೋಂಕು ದೃಢಪಟ್ಟಲ್ಲಿ ಅನುಸರಿಸುವ ಹಾಗೂ ಯಾವುದಾದರೂ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸಿ ಸಂಬಳ ಸಹಿತ ರಜೆ ನೀಡುವುದು ಸೇರಿದಂತೆ ಎಸ್‌ ಒಪಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸಬೇಕು. ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರುತಿಳಿಸಿದಂತೆ ಜೇಮ್‌ಶೇಡ್‌ಪುರದ ಟಾಟಾ ಸ್ಟೀಲ್‌ನಲ್ಲಿ ಕೋವಿಡ್‌ ಸೋಂಕು ವ್ಯಾಪಕವಾದ ಸಂದರ್ಭದಲ್ಲಿ ಅನುಸರಿಸಿದ ನಿಯಮಾವಳಿಗಳನ್ನೇ ಇಲ್ಲಿ ಅನುಸರಿಸುವುದರ ಮೂಲಕ ಅದರ ಕಡಿವಾಣಕ್ಕೆ ಮುಂದಾಗಬೇಕು ಎಂದರು.

ಸಿಬ್ಬಂದಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ: ಜಿಂದಾಲ್‌ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಆರೋಗ್ಯ ಸಮೀಕ್ಷೆಯನ್ನು ಕೂಡಲೇ ನಡೆಸಬೇಕು. ಸಮೀಕ್ಷೆ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆ, ಐಎಲ್‌ಐ ಪ್ರಕರಣ, ಕೋಮೋಹರಿಬಿಡಿಟಿಯಂತ ಲಕ್ಷಣಗಳು ಹಾಗೂ 60 ವರ್ಷಕ್ಕಿಂತ ಹೆಚ್ಚಿನ ವಯೋಮಿತಿ ಹೆಚ್ಚಳ ಇರುವವರನ್ನು ಗುರುತಿಸಿ ಅವರಿಗೆ ವಿಶೇಷ ನಿಗಾವಹಿಸಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸೂಚಿಸಿದರು. ಸಿಸಿಟಿವಿ ಅಳವಡಿಕೆ: ಜಿಂದಾಲ್‌ನ ಎಲ್ಲ 7ಗೇಟ್‌ಗಳನ್ನು ಬಂದ್‌ ಮಾಡಲಾಗಿದ್ದು, ಈ ಗೇಟ್‌ಗಳ ಬಳಿ ಪ್ರತಿ ಶಿಫ್ಟ್ ಗೆ 5 ಪೊಲೀಸ್‌ ಸಿಬ್ಬಂದಿಯಂತೆ ಮೂರು ಶಿಪ್ಟ್ನಡಿ ಕೆಲಸ ನಿರ್ವಹಿಸಲು ನಿಯೋಜಿಸಲಾಗಿದೆ. ಚಲನವಲನ ನಿಗಾಗೆ ಎಲ್ಲ ಗೇಟ್‌ಬಳಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಎಸ್ಪಿ ಸಿ.ಕೆ. ಬಾಬಾ ಹೇಳಿದರು.

ಇದರ ಸಂಪೂರ್ಣ ನಿರ್ವಹಣೆಗಾಗಿ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಲಾವಣ್ಯ ಅವರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು. ಜಿಂದಾಲ್‌ನಲ್ಲಿ ನಾನ್‌ಕೋವಿಡ್‌ ಪ್ರಕರಣಗಳ ತಪಾಸಣೆಗಾಗಿ 2 ಮೊಬೈಲ್‌ ಮೆಡಿಕಲ್‌ ಯೂನಿಟ್‌ಗಳನ್ನು ಅಲ್ಲಿಯೇ ಇಡಲಾಗಿದೆ ಎಂದು ಡಿಸಿ ನಕುಲ್‌ ವಿವರಿಸಿದರು. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದು, ಜನಪ್ರತಿನಿಧಿಗಳು ಈ ವಿಷಯದಲ್ಲಿ ಜನರಿಗೆ ಅರಿವು ಮೂಡಿಸಿ ಸಹಕರಿಸುವಂತೆ ಮನವಿ ಮಾಡಿದರು.

ಸಂಡೂರು ಶಾಸಕ ಇ.ತುಕಾರಾಂ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು. ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಅಲ್ಲಂವೀರಭದ್ರಪ್ಪ, ಜಿಪಂ ಸಿಇಒ ಕೆ.ನಿತೀಶ್‌, ಅಪರ ಜಿಲ್ಲಾಧಿಕಾರಿ ಮಂಜುನಾಥ, ಡಿಎಚ್‌ಒ ಜನಾರ್ದನ್‌, ವಿಮ್ಸ್‌ ನಿರ್ದೇಶಕ ಡಾ| ದೇವಾನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಜಿಂದಾಲ್‌ನ ಉಪವ್ಯವಸ್ಥಾಪಕ ನಿರ್ದೇಶಕ ವಿನೋದ್‌ ನೋವೆಲ್‌, ಉನ್ನತ ಅಧಿಕಾರಿಗಳಾದ ಮಂಜುನಾಥ ಪ್ರಭು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next