Advertisement

ಬೀದಿ ದೀಪ ಸಮಸ್ಯೆ: ಉರ್ವಸ್ಟೋರ್ ಕತ್ತಲಲ್ಲಿ!

10:59 AM Aug 20, 2018 | Team Udayavani |

ಮಹಾನಗರ: ಒಂದು ಸಣ್ಣ ಮಳೆ ಬಂದರೆ ನಗರದ ಅನೇಕ ರಸ್ತೆಗಳಲ್ಲಿ ಕೃತಕ ನೆರೆ ಉಂಟಾಗುವುದು ಒಂದು ಸಮಸ್ಯೆಯಾದರೆ, ಮೇ ತಿಂಗಳಲ್ಲಿ ಸುರಿದಂತಹ ಜೋರಾದ ಮಳೆಗೆ ನಗರದ ಕೆಲವು ರಸ್ತೆಗಳಲ್ಲಿ ಕೆಟ್ಟು ಹೋದಂತಹ ಬೀದಿ ದೀಪಗಳು ಇನ್ನೂ ದುರಸ್ತಿಯಾಗಲಿಲ್ಲ…! ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸದಾ ಚಟುವಟಿಕೆಗಳಿಂದ ಕೂಡಿದ ನಗರದ ಪ್ರಮುಖ ಪ್ರದೇಶಗಳ ಪೈಕಿ ಉರ್ವಸ್ಟೋರ್‌ ಕೂಡ ಒಂದು. ಆದರೆ ಕೆಲವು ದಿನಗಳಿಂದ ರಾತ್ರಿ ವೇಳೆ ಈ ರಸ್ತೆಯಲ್ಲಿ ಅಳವಡಿಸಲಾದ ಬೀದಿ ದೀಪ ದೀಪಗಳು ಉರಿಯುತ್ತಿಲ್ಲ. ಇದರಿಂದಾಗಿ ಉರ್ವಸ್ಟೋರ್‌ ಸುತ್ತಮುತ್ತಲಿನ ಪ್ರದೇಶಗಳು ಕತ್ತಲಲ್ಲಿವೆ.

Advertisement

ಉರ್ವಸ್ಟೋರ್‌ ಪ್ರದೇಶದಲ್ಲಿನ ಮುಖ್ಯ ರಸ್ತೆಗಳಿಗೆ ಅಳವಡಿಸಲಾದ ಡಿವೈಡರ್‌ ನಲ್ಲಿರುವ ಅನೇಕ ಬೀದಿ ದೀಪಗಳು ಕೆಟ್ಟು ಹೋಗಿವೆ. ಉರ್ವಸ್ಟೋರ್‌ ಸುತ್ತಮುತ್ತ ಅನೇಕ ಪ್ರಮುಖ ಕಚೇರಿಗಳಿವೆ. ಇಲ್ಲೇ ಪಕ್ಕದಲ್ಲಿ ಜಿಲ್ಲಾ ಪಂಚಾಯತ್‌, ಪೊಲೀಸ್‌ ಠಾಣೆ, ಇನ್ಫೋಸಿಸ್‌ ಸೇರಿದಂತೆ ಪ್ರಮುಖ ಕಚೇರಿ ಇದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೇ ಬೀದಿ ದೀಪ ಉರಿಯುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. 

ಸುತ್ತಮುತ್ತಲೂ ಇದೇ ಸಮಸ್ಯೆ
ಅಂದಹಾಗೆ ಕೇವಲ ಉರ್ವಸ್ಟೋರ್‌ ಬಳಿ ಮಾತ್ರ ಬೀದಿ ದೀಪ ಕೆಟ್ಟು ಹೋಗಿಲ್ಲ. ಇನ್ಫೋಸಿಸ್‌ ಹಿಂಭಾಗದ ಸಂಕೇಶ ಮೊದನೇ ಕ್ರಾಸ್‌ ಬಳಿ ಕೆಲವು ತಿಂಗಳುಗಳಿಂದ ಬೀದಿ ದೀಪ ಉರಿಯುತ್ತಿಲ್ಲ. ಸಣ್ಣ ಮಳೆ ಗಾಳಿ ಬಂದರೆ ಸಾಕು ನಗರದ ಕೊಟ್ಟಾರ ಕ್ರಾಸ್‌, ಲಾಲ್‌ಬಾಗ್‌, ಬಿಜೈ, ಚಿಲಿಂಬಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿನ ಬೀದಿ ದೀಪಗಳು ಕೆಟ್ಟು ಹೋಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಈ ಹಿಂದೆಯೇ ಪಾಲಿಕೆಗೆ ಅಳಲು ತೋಡಿಕೊಂಡರೂ ಬೀದಿ ದೀಪ ದುರಸ್ತಿಯಾಗಲಿಲ್ಲ.

‘ಸುದಿನ’ ವರದಿ ಮಾಡಿತು
ನಗರದ ಅನೇಕ ಕಡೆಗಳಲ್ಲಿ ಬೀದಿ ದೀಪ ಉರಿಯುತ್ತಿಲ್ಲ ಎಂಬ ವಿಷಯದ ಕುರಿತು ‘ಸುದಿನ’ ಈ ಹಿಂದೆಯೇ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಪಾಲಿಕೆ ಕೆಲವು ಕಡೆಗಳಲ್ಲಿ ದೀಪ ದುರಸ್ತಿ ಕಾರ್ಯಕೂಡ ಆರಂಭಿಸಿತು. ಆದರೂ ಇನ್ನೂ ಅನೇಕ ಕಡೆಗಳಲ್ಲಿ ಸಮಸ್ಯೆ ಅದೇ ರೀತಿ ಹಾಗೇ ಉಳಿದಿದೆ.

ಕೇಬಲ್‌ ಸಮಸ್ಯೆ
ಉರ್ವಸ್ಟೋರ್‌, ಚಿಲಿಂಬಿ ಪರಿಸರದಲ್ಲಿ ಬೀದಿ ದೀಪ ಉರಿಯದಿರುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದೇನೆ. ವಿದ್ಯುತ್‌ ಕೇಬಲ್‌ಗ‌ಳಿಗೆ ಹಾನಿಯಿಂದಾಗಿ ಈ ಸಮಸ್ಯೆಯಿಂದ ಉಂಟಾಗಿದೆ. ಅಧಿಕಾರಿಗಳ ಜತೆ ಮತ್ತೊಮ್ಮೆ ಚರ್ಚಿಸಿ ಕೂಡಲೇ ದುರಸ್ತಿ ಕಾರ್ಯ ನಡೆಸಲಾಗುವುದು.
 - ನಾಗವೇಣಿ, ಸ್ಥಳೀಯ
    ಕಾರ್ಪೊರೇಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next