ಕೋರಾಪತ್, ಒಡಿಶಾ : ಕೋರಾಪತ್ ಜಿಲ್ಲೆಯ ಜೇಪೋರ್‌ನಲ್ಲಿನ ಉಪ ವಿಭಾಗೀಯ ಆಸ್ಪತ್ರೆಯ ಆವರಣದೊಳಗೆ ಗಂಡು ಮಗುವಿನ ಮೃತ ದೇಹವನ್ನು ಬೀದಿ ನಾಯಿಯೊಂದು ಎಳೆದಾಡಿ ತಿನ್ನುತ್ತಿದ್ದ ಅತ್ಯಂತ ಆಘಾತಕಾರಿ ದೃಶ್ಯವನ್ನು ಕಂಡು ಜನರು ದಂಗಾದರು.
ಆಸ್ಪತ್ರೆ ಆವರಣದೊಳಗೆ ಕೆಲವು ಜನರ ಗುಂಪೊಂದು ಈ ದೃಶ್ಯವನ್ನು ಮೊದಲಾಗಿ ಕಂಡಿತು. ವಿಚಿತ್ರವೆಂದರೆ ಯಾರೊಬ್ಬರೂ ನಾಯಿಯನ್ನು ಆಚೆಗೆ ಅಟ್ಟಿ ಮಗುವಿನ ಮೃತ ದೇಹವನ್ನು ಕಾಪಾಡುವ ಕೆಲಸಕ್ಕೆ ಮುಂದಾಗಲಿಲ್ಲ. ಹಾಗಿದ್ದರೂ ಕೆಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ನಾಯಿಯು ಮಗುವಿನ ಮೃತ ದೇಹವನ್ನು ಎಳೆದಾಡಿ ತಿನ್ನುವ ದೃಶ್ಯವನ್ನು ಸೆರೆಹಿಡಿಯಲು ಮುಂದಾದರು.
ಆಸ್ಪತ್ರೆ ಅಧಿಕಾರಿಗಳಿಗೆ ಈ ಬಗ್ಗೆ ಕೇಳಲಾದಾಗ ಅಂತಹ ಘಟನೆ ನಡೆದ ಬಗ್ಗೆ ತಮಗೇನೂ ತಿಳಿಯದು ಎಂದು ತಮ್ಮ ಅಜ್ಞಾನವನ್ನು ಪ್ರದರ್ಶಿಸಿದರು.
ಘಟನೆಯ ಬಗ್ಗೆ ಉಪ ವಿಭಾಗೀಯ ವೈದ್ಯಾಧಿಕಾರಿ (ಜೇಪೋರ್) ಸಿತಾಂಶು ಶತಪತಿ ಅವರು “ಸುದ್ದಿ ತಿಳಿದು ನಾನು ಖುದ್ದಾಗಿ ನನ್ನ ಸಿಬಂದಿಗಳೊಂದಿಗೆ ಸ್ಥಳಕ್ಕೆ ಹೋದೆ; ಅಲ್ಲಿ ನಾಯಿಯೂ ಇರಲಿಲ್ಲ, ಮಗುವಿನ ಶವವೂ ಇರಲಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಯಾವುದೇ ರೋಗಿ ಕಾಣೆಯಾದದ್ದೂ ಇಲ್ಲ, ಹಾಗಿದ್ದರೂ ನಾವು ಪೊಲೀಸರಲ್ಲಿ ದೂರು ದಾಖಲಿಸಿದ್ದೇವೆ’ ಎಂದು ಹೇಳಿದರು.
ಕೇಸು ದಾಖಲಿಸಿಕೊಂಡಿರುವ ಪೊಲೀಸರು ತಾವೀಗ, ಜನರು ತಮ್ಮ ಮೊಬೈಲಿನಲ್ಲಿ ದಾಖಲಿಸಿಕೊಂಡಿರುವ ಚಿತ್ರಿಕೆಗಳನ್ನು ಪರಾಮರ್ಶಿಸುತ್ತಿದ್ದೇವೆ; ಪ್ರಕರಣದ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.