Advertisement

‘ಕೈ’ಶಾಸಕರ ಹಾಜರಾತಿ ಆಧರಿಸಿ ಕಾರ್ಯತಂತ್ರ

01:27 AM Feb 06, 2019 | Team Udayavani |

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದಲ್ಲಿ ಮೈತ್ರಿ ಪಕ್ಷಗಳ ಶಾಸಕರ ಹಾಜರಾತಿ ಆಧರಿಸಿ ಮುಂದಿನ ಕಾರ್ಯತಂತ್ರ ಹೆಣೆಯಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

Advertisement

ಕಾಂಗ್ರೆಸ್‌ನ ಅತೃಪ್ತ ಶಾಸಕರು ಸೇರಿ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡ ಶಾಸಕರ ಹಾಜರಾತಿಯ ಮೇಲೆ ನಿಗಾ ಇಡಲು ಬಿಜೆಪಿ ನಿರ್ಧರಿಸಿದೆ. ಕಾಂಗ್ರೆಸ್‌ ಪಕ್ಷ ‘ವಿಪ್‌’ ಜಾರಿ ಮಾಡಿದ ನಂತರವೂ ಶಾಸಕರು ಗೈರಾದರೆ ಆ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ಮೈತ್ರಿ ಸರ್ಕಾರದ ವಿರುದ್ಧ ಮುಗಿ ಬೀಳಬೇಕು ಎಂದು ಪ್ರಮುಖ ನಾಯಕರ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

ಹಲವು ದಿನಗಳಿಂದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದ ಬಿಜೆಪಿಯ ಹಲವು ನಾಯಕರು ದಿಢೀರ್‌ ‘ರಾಗ’ ಬದಲಿಸಿದ್ದು, ಆ ರೀತಿಯ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ ಎನ್ನುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಹಳಷ್ಟು ಶಾಸಕರು ಈ ಬಗ್ಗೆ ಮಾತನಾಡಲೇ ಇಲ್ಲ. ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ತೆರೆಮರೆಯಲ್ಲೇ ಪ್ರಯತ್ನ ನಡೆಯುತ್ತಿದೆ ಎನ್ನುತ್ತಿದ್ದ ನಾಯಕರು ಸಹ ದಿಢೀರ್‌ ಮಾತು ಬದಲಿಸಿದ್ದಾರೆ.

ಗೌರ್ನರ್‌ ಭಾಷಣ ಔಚಿತ್ಯ ಪ್ರಶ್ನಿಸಲು ಚಿಂತನೆ: ವಿಧಾನಮಂಡಲ ಜಂಟಿ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಆರಂಭದಲ್ಲೇ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಗಮನ ಸೆಳೆದು ರಾಜ್ಯಪಾಲರ ಜಂಟಿ ಅಧಿವೇಶನದ ಭಾಷಣದ ಔಚಿತ್ಯವನ್ನು ಪ್ರಶ್ನಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಬಿಜೆಪಿ ಸಜ್ಜಾಗಿದೆ ಎನ್ನಲಾಗಿದೆ. ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಮಂಗಳವಾರ 22ಕ್ಕೂ ಹೆಚ್ಚು ಶಾಸಕರೊಂದಿಗೆ ನಡೆದ ಸಭೆಯಲ್ಲಿ ವಿಧಾನಮಂಡಲ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯ ಕಾರ್ಯ ನಿರ್ವಹಣೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದು, ಈ ವೇಳೆ ಮೇಲ್ಕಂಡ ವಿಚಾರವೂ ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ

Advertisement

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮಲಾಲ್‌ ಅವರು ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಿ, ಸಿದ್ಧತಾ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಪುದುಚೇರಿಯಿಂದ ಆಗಮಿಸಿದ್ದ ಆಯ್ದ ನಾಯಕರು, ಮುಖಂಡರೊಂದಿಗೆ ಬೆಳಗ್ಗೆಯಿಂದ ಸಂಜೆವರೆಗೆ ಸಭೆ ನಡೆಸಿದರು. ಕೇಂದ್ರ ಬಿಜೆಪಿ ನೀಡಿರುವ 21 ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದರು. ಜತೆಗೆ, ಸಂಜೆ ರಾಜ್ಯ ಬಿಜೆಪಿ ಶಾಸಕಾಂಗ ಸಭೆಯಲ್ಲೂ ಚುನಾವಣಾ ತಯಾರಿ ಬಗ್ಗೆ ನಿರ್ದೇಶನ ನೀಡಿದರು ಎನ್ನಲಾಗಿದೆ.

ಕೋರ್‌ ಕಮಿಟಿ ರದ್ದು:ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಮಂಗಳವಾರ ಸಂಜೆ ನಿಗದಿಯಾಗಿತ್ತು. ಆದರೆ, ಕೋರ್‌ ಕಮಿಟಿ ಸದಸ್ಯರಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದರಾದ ಪ್ರಹ್ಲಾದ್‌ ಜೋಶಿ, ನಳಿನ್‌ ಕುಮಾರ್‌ ಕಟೀಲ್‌ ಅವರು ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ಕೋರ್‌ ಕಮಿಟಿ ಸಭೆ ರದ್ದುಪಡಿಸಲಾಯಿತು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಯಾರ ಕೈಗೂ ಸಿಗದ ಶಾಸಕ ಸುಧಾಕರ್‌

ಚಿಕ್ಕಬಳ್ಳಾಪುರ: ದೋಸ್ತಿ ಸರ್ಕಾರದ ವಿರುದ್ಧ ಒಳಗೊಳಗೆ ಕುದಿಯುತ್ತಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌, ಕಳೆದ 2 ದಿನಗಳಿಂದ ಕ್ಷೇತ್ರಕ್ಕೆ ಬಾರದೆ ಬೆಂಗಳೂರಿನಲ್ಲಿಯೆ ನೆಲೆಸಿದ್ದಾರೆ. ಈ ಮಧ್ಯೆ, ಸುಧಾಕರ್‌ ಅವರು ಆಪರೇಷನ್‌ ಕಮಲದ ಪಟ್ಟಿಯಲ್ಲಿದ್ದಾರೆಂಬ ವದಂತಿ ಮತ್ತೆ ಜಿಲ್ಲಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ಶನಿವಾರ ಸಾವಯವ ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳಿದ ಸುಧಾಕರ್‌, 4 ದಿನಗಳಿಂದ ಕ್ಷೇತ್ರದಲ್ಲಿನ ಅಧಿಕೃತ ಕಾರ್ಯಕ್ರಮಗಳನ್ನು ದಿಢೀರ್‌ನೆ ರದ್ದುಗೊಳಿಸಿ ಬೆಂಗಳೂರಿನ ತಮ್ಮ ಮನೆಯಲ್ಲಿ ತಂಗಿದ್ದಾರೆ. ಯಾರ ಭೇಟಿಗೂ ಸಿಗದೆ, ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.

ಸರ್ಕಾರ ಕಲ್ಲು ಬಂಡೆ ರೀತಿ ಇದೆ: ಸಿದ್ದು

ಬೆಂಗಳೂರು: ‘ಸಮ್ಮಿಶ್ರ ಸರ್ಕಾರ ಕಲ್ಲು ಬಂಡೆ ಥರಾ ಇದೆ. ಅಧಿವೇಶನ ಸುಗಮವಾಗಿ ನಡೆಯುತ್ತದೆ. ಬಜೆಟ್ ಮಂಡನೆಯಾಗುತ್ತದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬಾಗಲಕೋಟೆ ಜಿಲ್ಲಾ ಮುಖಂಡರೊಂದಿಗೆ ಚರ್ಚೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ಅವರ ಪ್ರಯತ್ನ ವಿಫ‌ಲವಾಗಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಜನ ಅವರನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಬಿಜೆಪಿಯವರು ಭ್ರಮನಿರಸನಗೊಂಡಿದ್ದಾರೆ. ಆದರೂ, ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದರು. ಕಾಂಗ್ರೆಸ್‌ನಲ್ಲಿ ಯಾರೂ ಅತೃಪ್ತ ಶಾಸಕರಿಲ್ಲ. ಎಲ್ಲರೂ ಸಂತೋಷವಾಗಿದ್ದಾರೆ. ಅಧಿವೇಶನಕ್ಕೆ ಎಲ್ಲರೂ ಹಾಜರಾಗುತ್ತಾರೆ ಎಂದು ಹೇಳಿದರು.

ಆನಂದ್‌ ಸಿಂಗ್‌ ಭೇಟಿ ಮಾಡಿದ ನಾಯಕರು

ಬೆಂಗಳೂರು: ಆಸ್ಪತ್ರೆಯಿಂದ ಬಿಡುಗಡೆಗೊಂಡು ವಿಶ್ರಾಂತಿ ಪಡೆಯುತ್ತಿರುವ ಶಾಸಕ ಆನಂದ್‌ಸಿಂಗ್‌ ಅವರನ್ನು ಸಚಿವ ಜಮೀರ್‌ ಅಹಮದ್‌ ಹಾಗೂ ಬಿಜೆಪಿಯ ಸುರಪುರ ಶಾಸಕ ರಾಜು ಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆನಂದ್‌ ಸಿಂಗ್‌ ವಿಶ್ರಾಂತಿಯಲ್ಲಿರುವುದರಿಂದ ಸದನಕ್ಕೆ ಗೈರು ಹಾಜರಾಗಲು ಸ್ಪೀಕರ್‌ರಿಂದ ಅಧಿಕೃತ ಅನುಮತಿ ಪಡೆಯಲು ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next