Advertisement

ಕಥೆ ವಾಚನ, ಶ್ರವಣ: ಸಮಯದ ಸದ್ಬಳಕೆ

02:49 AM Apr 04, 2021 | Team Udayavani |

ಅಂದಿನ ಸಂಜೆಗಳು ಇಂದಿನಂತಲ್ಲ. ಅದರ ಮಜವೇ ಬೇರೆಯಾಗಿತ್ತು. ಕತ್ತಲಾದೊಡನೆ ಮನೆಯಲ್ಲಿ ಕಥೆಗಾಗಿ ಚಿಣ್ಣರು ಹಿರಿಯರನ್ನು ಎಡತಾಕುತ್ತಿದ್ದರು. ಹಿರಿಯರೂ ಜಾಣರಾಗಿದ್ದರು. ಮೊದಲು ದೇವರಿಗೆ ನಮಸ್ಕರಿಸಿ, ಹಲವು ಸ್ತೋತ್ರ, ಭಜನೆಗಳನ್ನು ಕಲಿಸಿ, ಕೊನೆಗೆ ಕಥೆಯ ಆಮಿಷವೊಡ್ಡುತ್ತಿದ್ದರು. ದಿನವೂ ಪೀಡಿಸುವಾಗ ಎಷ್ಟೆಂದು ಕಥೆಗಳನ್ನು ಹೇಳಿಯಾರು? ಕಥೆಗಳ ಕಣಜವೂ ಬರಿದಾಗುತ್ತಿತ್ತು. ಆದರೆ ಅವೇ ಹಳೆಯ ಕಥೆಗಳು ಅದೆಷ್ಟು ಬಾರಿ ಪುನರಾವರ್ತನೆಯಾದರೂ ಅಷ್ಟು ಹೊಸ ರೋಚಕ ತಿರುವುಗಳು. ಕಥೆಯಲ್ಲಿನ ರಾಜ- ರಾಣಿಯರೇ ತಾವಾಗಿ ಮಕ್ಕಳ ಮನದಲ್ಲೊಂದು ಬಣ್ಣದಲೋಕ ಸೃಷ್ಟಿಯಾಗುತ್ತಿತ್ತು. ಕಥೆ ಕೇಳುತ್ತಾ ನಿದ್ರೆಗೆ ಜಾರಿದರೆ, ಕನಸಲ್ಲೂ ಅದೇ ಕನವರಿಕೆ. ಇನ್ನು ನೆಂಟರಿಷ್ಟರು ರಾತ್ರಿಯಲ್ಲಿ ತಂಗುವರೆಂದರೆ ಬೋನಸ್‌ ಕಥೆಗಳು.

Advertisement

ಇಂದಿಗೂ ಕಥೆಗೆ ಕಣ್ಣರಳಿಸದ ಮಕ್ಕಳಿದ್ದಾರೆಯೇ? ಆದರೆ ಕಥೆ ಹೇಳುವವರೇ ಇಲ್ಲವಾಗಿದ್ದಾರೆ. ಸಮಯವೆನ್ನುವುದು ಮರೀಚಿಕೆಯಾಗಿದೆ. ಇಂದಿನ ವಿಭಕ್ತ ಕುಟುಂಬಗಳಲ್ಲಿ ಕಥೆ ಹೇಳಲು ಪುರುಸೊತ್ತಿರುವ ಅಜ್ಜ-ಅಜ್ಜಿಯಂದಿರು ವಿರಳ. ಅಪ್ಪ-ಅಮ್ಮ ಇಬ್ಬರೂ ದುಡಿದು ಮನೆ ಸೇರುವಾಗ ಮನೆಯ ಕೆಲಸಗಳು ಕಾಯುತ್ತಿರುತ್ತವೆ. ಮಕ್ಕಳು ಸಹ ಶಾಲೆ, ಟ್ಯೂಶನ್‌, ಮನೆಗೆಲಸ ಮುಗಿಸುವಷ್ಟರಲ್ಲಿ ಬಳಲಿ ಬೆಂಡಾಗಿ ಮಲಗುವುದನ್ನೇ ಕಾಯುತ್ತಿರುತ್ತಾರೆ.

ಈ ತರಹದ ಒತ್ತಡಗಳ ನಡುವೆ ಕಥೆ ಹೇಳುವ ಸಂಪ್ರದಾಯ ಮರೆಯಾಗುತ್ತಿದೆ. ಕಥೆ ಹೇಳುವ ಪ್ರಕ್ರಿಯೆ ಬರಿದೆ ಕಥೆಯಲ್ಲ. ಇದು ಮಾತುಕತೆ. ಇದರಿಂದಾಗುವ ಪ್ರಯೋಜನಗಳು ಹಲವು.
- ಕಥೆ ಕೇಳುವುದೊಂದು ಆಹ್ಲಾದಕರ ಅನುಭವ. ಅಧ್ಯಯನವೊಂದರ ಪ್ರಕಾರ ಕಥೆ ಕೇಳುತ್ತಾ ಎಂಡೋರ್ಫಿನ್‌ ಎಂಬ ಆನಂದ ನೀಡುವ ರಸದೂತಗಳು ಬಿಡುಗಡೆಯಾಗುತ್ತವೆ. ಹೀಗೆ ಎಳೆಯ ಮನಗಳು ದುಗುಡ ದುಮ್ಮಾನಗಳನ್ನು ಮರೆಯಲು ಕಥೆಗಳೂ ಕಾರಣ.

- ಹೇಳುವವರು ಮತ್ತು ಕೇಳುಗರ ಮಧ್ಯೆ ಭಾವನಾತ್ಮಕ ಬಾಂಧವ್ಯ ವೃದ್ಧಿಯಾಗುತ್ತದೆ. ಸಂಧಿಸುವ ಕಣ್ಣುಗಳು, ಅಪ್ಯಾಯಮಾನ ಧ್ವನಿ, ಕೆಲವೊಮ್ಮೆ ಬೆಚ್ಚನೆಯ ಸ್ಪರ್ಶ ಇತ್ಯಾದಿ ಅಂಶಗಳು ಹೊಸ ಸಂಬಂಧ ಅಥವಾ ಸಂಬಂಧದಲ್ಲಿ ಹೊಸತನದ ಎಳೆಯನ್ನು ಸೃಷ್ಟಿಸುತ್ತವೆ.

- ಕಥೆಗಳಲ್ಲಿ ಬರುವ ಪಾತ್ರಗಳ ಮೂಲಕ ಮಕ್ಕಳಲ್ಲಿ ಸರಿ-ತಪ್ಪುಗಳ ತಿಳಿವಳಿಕೆ ಬೆಳೆಯತೊಡಗುತ್ತದೆ. ಕಷ್ಟಗಳನ್ನು ಎದುರಿಸುವ ಧೈರ್ಯ ಮೂಡುತ್ತದೆ. ಹೊಸ ಸಂಸ್ಕೃತಿಗಳನ್ನು ಕಥೆಗಳ ಮೂಲಕ ಪರಿಚಯಿಸಬಹುದು.

Advertisement

- ಕಥೆ ಹೇಳುವುದರಿಂದ ಮಕ್ಕಳ ಆಲಿಸುವ ಸಾಮರ್ಥ್ಯದಲ್ಲಿ ಗಣನೀಯ ವೃದ್ಧಿಯಾಗುತ್ತದೆ. ಚಂಚಲ ಮನಸ್ಸಿನ ಮಕ್ಕಳು ಕಥೆಯೆಂದರೆ ಗಮನವಿಟ್ಟು ಕೇಳುತ್ತಾರೆ. ಅವರ ಗಮನ ಕೇಂದ್ರೀಕರಿಸುವ ಅವಧಿಯಲ್ಲಿಯೂ (attention span) ಗಮನೀಯ ಹೆಚ್ಚಳವಾಗುತ್ತದೆ.

- ಕಥೆ ಕೇಳುತ್ತಾ ಮನದಲ್ಲಿ ಮೂಡಿದ ಸಂಶಯ, ಗೊಂದಲಗಳನ್ನು ಪ್ರಶ್ನೆ ಕೇಳಿ ನಿವಾರಿಸಿಕೊಳ್ಳುತ್ತಾರೆ. ಈ ತರಹದ ಮಾತುಗಳ ವಿನಿಮಯದಿಂದ ಸಂವಹನ ಕೌಶಲ ಅಭಿವೃದ್ಧಿಯಾಗುತ್ತದೆ.

- ಘಟನೆಗಳನ್ನು ತಾರ್ಕಿಕವಾಗಿ ಪೋಣಿಸುವ ಕೌಶಲಾಭಿವೃದ್ಧಿ ಕಥೆ ಕೇಳುವುದರಿಂದ ಎಳೆಯ ವಯಸ್ಸಿನಲ್ಲಿಯೇ ಆರಂಭವಾಗುತ್ತದೆ.

- ಕಥೆ ಕೇಳುವಾಗಿನ ಧ್ವನಿಯ ಏರಿಳಿತ ಹಾಗೂ ಆಂಗಿಕ ಅಭಿನಯಗಳನ್ನು ಮಕ್ಕಳು ಅಪ್ರಯತ್ನಪೂರ್ವಕವಾಗಿ ಮೈಗೂಡಿಸಿಕೊಳ್ಳುತ್ತಾರೆ.

- ಹೊಸ ಶಬ್ದ, ವಾಕ್ಯ ಪ್ರಯೋಗಗಳ ಬಗ್ಗೆ ತಿಳಿವಳಿಕೆ ಕಥೆಗಳಿಂದಾಗಿ ಮೂಡುತ್ತದೆ. ಕಥೆ ಹೇಳಿಸಿಕೊಳ್ಳುವ ಮಕ್ಕಳಲ್ಲಿ ಅರ್ಥೈಸಿಕೊಳ್ಳುವಿಕೆಯ ಸಾಮರ್ಥ್ಯ ಜಾಸ್ತಿ ಇದ್ದರೆ, ಕಥೆ ಓದಿಕೊಳ್ಳುವ ಮಕ್ಕಳಲ್ಲಿ ಭಾಷೆಯ ಪ್ರಯೋಗ ಉತ್ತಮವಾಗಿರುತ್ತದೆ ಎಂದು ಅಧ್ಯಯನವೊಂದು ಶ್ರುತಪಡಿಸಿದೆ. ಹೀಗೆ ಮಕ್ಕಳಲ್ಲಿ ಸೃಜನಶೀಲತೆಯ ಬೆಳವಣಿಗೆಯಲ್ಲಿ ಕಥೆ ಪ್ರಮುಖ ಪಾತ್ರ ವಹಿಸುತ್ತದೆ.

- ಕಥೆಯ ಕೇಳುಗರಲ್ಲಿ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಕಲಿಕೆಯಲ್ಲಿ ಅನಾಸಕ್ತಿ ಅಥವಾ ಹಿಂದಿರುವ ವಿದ್ಯಾರ್ಥಿಗಳೂ ಕಥೆಗಳಿಗೆ ಕಿವಿಯಾಗುತ್ತಾರೆ. ಈ ತೆರನ ಕಥಾ ಕುತೂಹಲ ಹೆಚ್ಚು ಹೆಚ್ಚು ಓದುವ ಹುಮ್ಮಸ್ಸನ್ನು ಸೃಷ್ಟಿಸಬಹುದು. ಹೀಗೆ ಕಲಿಕೆಯಿಂದ ವಿಮುಖರಾದ ಮಕ್ಕಳಲ್ಲೂ ಬಹಳಷ್ಟು ಬದಲಾವಣೆಗಳನ್ನು ತರಬಹುದು.

ಒಟ್ಟಿನಲ್ಲಿ ಬಾಲ್ಯದಲ್ಲಿ ಮಕ್ಕಳಿಗೆ ಕಥೆ ಹೇಳುವುದು ಅವರ ಭವಿಷ್ಯದ ಶೈಕ್ಷಣಿಕ ಪ್ರಗತಿಗೆ ಭದ್ರ ತಳಹದಿಯನ್ನು ಒದಗಿಸುತ್ತದೆ. ನಿಮ್ಮ ಮಕ್ಕಳು ಚತುರರಾಗಬೇಕಾದರೆ ಅವರಿಗೆ ಕಥೆಗಳನ್ನು ಹೇಳಿ, ಅವರು ತೀಕ್ಷ್ಣಮತಿಗಳಾಗಬೇಕಾದರೆ ಅವರಿಗೆ ಮತ್ತೂ ಕಥೆಗಳನ್ನು ಹೇಳಿ ಎಂದಿದ್ದ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟಿನ್‌.

ಮಕ್ಕಳಿಗಿಂದು ಕಥೆ ಹೇಳುವರಾರು?
ಮಕ್ಕಳ ಕಥೆ ಎಂಬುದೊಂದು ಮಾಯಾಜಾಲ. ಮಕ್ಕಳು ಕಥೆಗಳಿಗಾಗಿ ದೂರದರ್ಶನದಲ್ಲಿ ಬರುವ ಕಾಟೂìನುಗಳ ಮೊರೆ ಹೋಗಿ¨ªಾರೆ. ತಮಗೆ ಸಮಯವಿಲ್ಲವೆಂದು ಪೋಷಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕ ಅಥವಾ ಸಿಡಿಗಳನ್ನು ತೆಗೆಸಿಕೊಡುತ್ತಾರೆ. ಆದರೆ ಮುಖತಃ ಹೇಳಿಸಿಕೊಳ್ಳುವ ಕಥೆಗಳು ಪರದೆಯ ಮೇಲೆ ಮೂಡಿಬರುವ ಅಥವಾ ಅಕ್ಷರ ರೂಪದಲ್ಲಿರುವ ಕಥೆಗಳಿಗಿಂತ ಎಳೆಯ ಮನಸ್ಸುಗಳಿಗೆ ಹೆಚ್ಚು ಅಪ್ಯಾಯಮಾನವಾಗಿರುತ್ತವೆ. ಹೇಳಿಸಿಕೊಳ್ಳುವ ಕಥೆಗಳು ಮಕ್ಕಳ ಮೇಲೆ ವಿಭಿನ್ನ ಪ್ರಭಾವ ಬೀರುತ್ತವೆ.

ಕಥೆಗಳು ಪುನರಾವರ್ತನೆಯಾದರೂ ಪ್ರತಿಯೊಂದು ಬಾರಿ ಹೇಳುವಾಗ ಹೊಸ ಹೊಸ ತಿರುವುಗಳು, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಕತೆಯ ಅಂದ, ಹತ್ತು ಮಕ್ಕಳ ಮನಃಪಟಲದಲ್ಲಿ ಹತ್ತು ತೆರನಾದ ಚಿತ್ರಗಳು, ತಾನೇ ರಾಜಕುಮಾರನಂತೆ, ರಾಜಕುಮಾರಿಯಂತೆ, ಚಿಟ್ಟೆಯಂತೆ…

ವಿದ್ಯುನ್ಮಾನ ಮಾಧ್ಯಮದಲ್ಲಿ ಬರುವ ಕಥೆಗಳನ್ನು ಹಲವು ಬಾರಿ ನೋಡಿದರೂ ಅದೇ ವ್ಯಾಖ್ಯಾನ, ಅದೇ ದೃಶ್ಯ. ಈ ತರಹದ ಸಿದ್ಧ ಕಥೆಗಳಲ್ಲಿ ಮಕ್ಕಳ ಕಲ್ಪನೆಯ ಹಕ್ಕಿ ರೆಕ್ಕೆ ಮುರಿದು ಬಿದ್ದಿರುತ್ತದೆ. ರಾಜನೆಂದರೆ ಹೀಗೆಯೇ ಎನ್ನುವ ಎರವಲು ಗ್ರಹಿಕೆ. ರಕ್ಕಸನೆಂದರೆ ಪರದೆಯ ಮೇಲೆ ಬರುವ ದೊಡ್ಡ ಮೀಸೆಯವನಲ್ಲದೇ ಬೇರೆ ಚಿತ್ರ ಮೂಡುವುದಿಲ್ಲ.

ಮಕ್ಕಳ ವ್ಯಕ್ತಿತ್ವದ ಮೇಲೆ ದೂರಗಾಮಿ ಪರಿಣಾಮ àರುವ ಕಥೆ ಹೇಳುವ ಪ್ರಕ್ರಿಯೆ ದಿನಚರಿಯ ಭಾಗವಾಗ
ಬೇಕು. ಎಷ್ಟೇ ದಣಿದಿರಲಿ, ಒತ್ತಡವಿರಲಿ, ಹೆತ್ತವರು ತಮ್ಮ ಮಕ್ಕಳಿಗೆ ಕಥೆ ಹೇಳಲು ಸಮಯ ಮೀಸಲಿಡಬೇಕು. ಎಳೆಯ ಮಕ್ಕಳಿಗೆ ಕಥೆಯನ್ನು ಓದಿಯೂ ಹೇಳಬಹುದು. ಎಳೆಯರೊಂದಿಗೆ ಎಳೆಯರಾಗುವ ಈ ಕಥಾಕಾಲಕ್ಷೇಪ ಕಥೆ ಹೇಳುವ ಅಪ್ಪ-ಅಮ್ಮಂದಿರಿಗೂ ಆನಂದಾನುಭೂತಿಯನ್ನು ನೀಡಬಲ್ಲದು.

– ಸಾಣೂರು ಇಂದಿರಾ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next