Advertisement

ಒಂದು ಚಿಪ್ಪಿನ ಕಥೆ: ಇದು ಕರಾವಳಿಯ ಚಿನ್ನ!

06:15 PM Apr 13, 2020 | |

ಉತ್ತರ ಕನ್ನಡ ಜಿಲ್ಲೆಯ ತದಡಿ ಗೊತ್ತಿರಬೇಕಲ್ಲ.  ಒಂದು ಕಾಲದಲ್ಲಿ ಉಷ್ಣ ಸ್ಥಾವರ ಸ್ಥಾಪನೆಯಿಂದಾಗಿ ಸುದ್ದಿಯಾದಾಗ ತೀವ್ರ ಪ್ರತಿಭಟನೆಯ ಮೂಲಕ ಅದನ್ನು ದೂರಕ್ಕೆ ಓಡಿಸಿದ ಊರು. ಅಭಿವೃದ್ಧಿಯ ದೃಷ್ಟಿಯಿಂದ ಅಲ್ಲಿ ತುಂಬ ಅನುಕೂಲಗಳಿಲ್ಲದಿದ್ದರೂ ಜಗತ್ತಿನ ನಕಾಶೆಯಲ್ಲಿ ಅದಕ್ಕೆ ಗಮನ ಸೆಳೆಯುವ ಸ್ಥಾನವಿದೆ. ಕಾರಣ, ಅಲ್ಲಿ ಅಘನಾಶಿನಿ ನದಿಯ ಹರಿವಿನಲ್ಲಿ ಸಾಗಿ ಬರುವ ಮೊದಲ ದರ್ಜೆಯ ಸುಣ್ಣದ ಚಿಪ್ಪು ಎಂಬ ನಿಕ್ಷೇಪ. ವಾರ್ಷಿಕ ಒಂದು ಲಕ್ಷ ಟನ್ನಿಗಿಂತಲೂ ಅಧಿಕ ಚಿಪ್ಪಿನ ಮಾರಾಟದಿಂದ ಕೋಟಿ ಕೋಟಿ ರೂಪಾಯಿಗಳ ವ್ಯವಹಾರ ಇಲ್ಲಿ ನಡೆಯುತ್ತಿರುವುದು ತದಡಿಯ ಹಿರಿಮೆಗೆ ಕಾರಣ. ಕೇರಳ, ಗೋವಾ, ತಮಿಳುನಾಡುಗಳಲ್ಲಿ ನಡೆಯುವ ಒಟ್ಟು ಚಿಪ್ಪಿನ ಉತ್ಪಾದನೆ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲ.

Advertisement

ಚಿಪ್ಪಿಗೆ ಬೆಳಚು ಎಂಬ ಹೆಸರೂ ಇದೆ. ನದಿಯಲ್ಲಿ ವಿಫ‌ುಲವಾಗಿರುವ ಈ ಮೃದ್ವಂಗಿಯ ಜೀವಿತ ಒಂದರಿಂದ ಎರಡು ವರ್ಷ ಮಾತ್ರ. ಅದರ ಮೈಯ ಹೊರಕವಚವೇ ಕ್ಯಾಲ್ಸಿಯಮ್‌ ತುಂಬಿರುವ ಚಿಪ್ಪು. 1970ರ ವರೆಗೆ ನದಿಯಿಂದ ಇದನ್ನು ಆರಿಸಲು ಮುಕ್ತ ಸ್ವಾತಂತ್ರ್ಯವಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಚಿಪ್ಪನ್ನು ಪ್ರಧಾನ ಖನಿಜಗಳ ಸಾಲಿಗೆ ಸೇರಿಸಿತು. ಚಿಪ್ಪು ಆರಿಸುವ ಏಕಸ್ವಾಮ್ಯವನ್ನು ಗಾಂವ್ಕರ್‌ ಕಂಪೆನಿಗೆ ಗುತ್ತಿಗೆ ನೀಡಿತು. ಈಗಲೂ ಅದೇ ಕಂಪೆನಿ ಅದನ್ನು ನಿರ್ವಹಿಸುತ್ತಿದೆ. ಮಾತ್ರವಲ್ಲ, ಕಾಳಿ ಮತ್ತು ನೇತ್ರಾವತಿ ನದಿಗಳಿಂದಲೂ ಈ ಕಂಪೆನಿಯೇ ಚಿಪ್ಪು ಸಂಗ್ರಹಿಸುತ್ತದೆ.

ಗಾಂವ್ಕರ್‌ ಕಂಪೆನಿಯಲ್ಲಿ ಚಿಪ್ಪಿನ ಸಂಗ್ರಹಕ್ಕಾಗಿ ಐನೂರಕ್ಕಿಂತ ಅಧಿಕ ದೋಣಿಗಳಿವೆ. ಸ್ಥಳೀಯರಾದ ಹರಿಕಾಂತ ಜನಾಂಗದ ಒಂದು ಸಾವಿರಕ್ಕಿಂತ ಹೆಚ್ಚು ಪುರುಷರು ಮತ್ತು ಅವರಷ್ಟೇ ದುಡಿಯಬಲ್ಲ ಮಹಿಳೆಯರು ಅದರ ಸಂಗ್ರಹ ಮಾಡುವಲ್ಲಿ ನಿರತರು. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಚಿಪ್ಪನ್ನು ಸಂಗ್ರಹಿಸುವ ಕಲೆಯಲ್ಲಿ ಇವರು ಕುಶಲಿಗರು. ಡಿಸೆಂಬರ್‌ನಿಂದ ಮೇ ತನಕ ಭರಾಟೆಯ ಕೆಲಸ. ಜೂನ್‌, ಜುಲೈ ತಿಂಗಳುಗಳಲ್ಲಿ ನೀರಿನ ಸೆಳವು ತೀವ್ರವಿರುವುದರಿಂದ ಚಿಪ್ಪಿನ ಸಂಗ್ರಹವಿಲ್ಲ. ಆಗಸ್ಟ್‌ ತಿಂಗಳಲ್ಲಿ ಶೇ. 20ರಷ್ಟು ಕೆಲಸ ನಡೆಯುತ್ತದೆ. ಚಳಿಗಾಲದಲ್ಲಿ ಮೂಡು ಗಾಳಿಗೆ ದೋಣಿಗಳು ಹೊಯ್ದಾಡುತ್ತವೆ. ಆಗಲೂ ಕೆಲಸ ನಿಧಾನ. ಎಲ್ಲ ಸಮಯದಲ್ಲೂ ಮಧ್ಯಾಹ್ನದ ತನಕ ಕೆಲಸ ಮಾಡುತ್ತಾರೆ. ನೀರಿನ ಅಬ್ಬರ ಕಡಮೆ ಇರುವ ಬೆಳಗಿನ ಸಮಯವೇ ಅದಕ್ಕೆ ಅನುಕೂಲ.

ಚಿಪ್ಪಿನ ಅಗಾಧ ಸಂಗ್ರಹವಿರುವಲ್ಲಿಗೆ ದೋಣಿಗಳು ಸಾಗುತ್ತವೆ. ಮುಳುಗುಗಾರರು ಒಂದೂವರೆಯಿಂದ ಹನ್ನೆರಡು ಅಡಿಗಳ ವರೆಗೂ ಮುಳುಗಿ ರಾಶಿ ಬಿದ್ದ ಚಿಪ್ಪನ್ನು ಮರಳಿನೊಂದಿಗೇ ಕುಟಾರಿಯಿಂದ ತೆಗೆದು ಬಲೆಗೆ ತುಂಬುತ್ತಾರೆ. ದೋಣಿ ಭರ್ತಿ ಆದಮೇಲೆ ದಡಕ್ಕೆ ತರುತ್ತಾರೆ. ಮಕ್ಕಳು, ಹೆಂಗಸರು ಮತ್ತು ವೃದ್ಧರು ಅದರಿಂದ ಕಸಕಡ್ಡಿ, ಮರಳು ಬೇರ್ಪಡಿಸಿ ಉತ್ತಮ ಇತ್ತೀಚೆನವರೆಗೆ ಕಾಗದ ಕಾರ್ಖಾನೆಗಳಿಗೆ ಅತ್ಯವಶ್ಯವಾದ ಉತ್ತಮ ಗುಣಮಟ್ಟದ ಕ್ಯಾಲ್ಸಿಯಮ್‌ ಕಾಬೋìನೇಟನ್ನು ಜರ್ಮನಿಯಿಂದ ತರಿಸಿಕೊಳ್ಳಬೇಕಾಗಿತ್ತು. ತದಡಿಯ ಶ್ರೇಷ್ಠ ದರ್ಜೆಯ ಚಿಪ್ಪು ಅದರ ಕೊರತೆಯನ್ನು ನೀಗಿದೆ. ಕೋಳಿಗಳ ಜೀರ್ಣಶಕ್ತಿಗೆ ಅಗತ್ಯವಾದ ಲೈಮ್‌ ಷೆಲ್‌ಗ್ರಿಟ್‌ ಮತ್ತು ಮೂಳೆಗಳ ಸವೆತ ತಡೆಯುವ ಮಾತ್ರೆಗಳ ತಯಾರಿಕೆಗೆ ತದಡಿಯ ಸುಣ್ಣ ಬಳಕೆಯಾಗುತ್ತದೆ. ಪಶು ಆಹಾರ, ರಸಗೊಬ್ಬರ, ಕೃಷಿ ಸಿಂಪಡಣೆಗೂ ಅಗತ್ಯವಾದ ಗುಣಮಟ್ಟದ ಸುಣ್ಣ ತದಡಿಯದು. ಆದರೆ ಬೇಡಿಕೆ ಇರುವಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗಾಂವ್ಕರ್‌.

ಅಘನಾಶಿನಿಯ ಮೇಲ್ಭಾಗದಲ್ಲಿ ಆಗಿರುವ ಅಣೆಕಟ್ಟುಗಳಿಂದಾಗಿ ಸಸ್ಯಾಹಾರಿಗಳಾದ ಬೆಳಚುಗಳಿಗೆ ಆಹಾರವಾಗಿರುವ ಡಯೋಟಂ ಎಂಬ ಪಾಚಿ ಹರಿದು ಬರುವುದಿಲ್ಲ. ಆಹಾರದ ಕೊರತೆಯಿಂದಾಗಿ ಅವು ಅರ್ಧವಯಸ್ಸಿನಲ್ಲೇ ಸಾಯುವ ಸಂಖ್ಯೆ ಹೆಚ್ಚಿದೆ. ಎಷ್ಟು ತೆಗೆದರೂ ಬರಡಾಗದ ಈ ನಿಕ್ಷೇಪ ಇದರಿಂದಾಗಿ ಇನ್ನು ಕೆಲವೇ ವರ್ಷಗಳಲ್ಲಿ ನಶಿಸಿ ಹೋಗಬಹುದೆ?  ಕನ್ನಡದ ಕರಾವಳಿಯ ಪಾಲಿಗೆ ಚಿನ್ನದ ನಿಧಿಯಾಗಿರುವ ಚಿಪ್ಪಿನ ರಕ್ಷಣೆಗೆ ಕಾಳಜಿ ವಹಿಸಬೇಕಾಗಿದೆ.

Advertisement

ಪ. ರಾಮಕೃಷ್ಣ ಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next