ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಪಾತಕ ಲೋಕ ತೊರೆದ ನಂತರ ಜಯ ಕರ್ನಾಟಕ ಸಂಘಟನೆ, ಸಮಾಜ ಸೇವೆ ಎನ್ನುತ್ತಿದ್ದ ರೈಗೆ ಇಬ್ಬರು ಮಕ್ಕಳು ಇದ್ದಾರೆ.
ಮೂರು ದಶಕಗಳಿಗೂ ಅಧಿಕ ಕಾಲ ಭೂಗತ ಜಗತ್ತಿನಲ್ಲಿ ಅಧಿಪತ್ಯ ಸಾಧಿಸಿದ್ದ ರೈ, ಹತ್ತಾರು ಕೊಲೆ, ಸುಲಿಗೆ, ಪ್ರಾಣ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಆಯಿಲ್ ಕುಮಾರ್ ಜತೆ ಸೇರಿಕೊಂಡು ಬೆಂಗಳೂರು ಡಾನ್ ಜಯರಾಜ್ ನನ್ನು ಹತ್ಯೆಗೈದಿದ್ದ. ಅನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ದುಬೈನಲ್ಲಿ ತಲೆಮರೆಸಿಕೊಂಡು ಎನ್.ಎಂ.ರೈ ಎಂಬ ಹೆಸರಿನಲ್ಲಿ ಖಾಸಗಿ ಕಂಪನಿ ನಡೆಸಿಕೊಂಡಿದ್ದ. 2002 ರಲ್ಲಿ ಅಲ್ಲಿನ ಸರ್ಕಾರ ರೈ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಬಳಿಕ ಸಿಬಿಐ, ರಾ ಸೇರಿದಂತೆ ದೇಶದ ಹಲವು ತನಿಖಾ ಸಂಸ್ಥೆಗಳು ರೈಯನ್ನು ವಿಚಾರಣೆ ನಡೆಸಿದ್ದವು.
ಆ ಬಳಿಕ ಕರ್ನಾಟಕದಲ್ಲಿ ಇದ್ದುಕೊಂಡು, ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯದ ಮೂಲಕವೇ ಕ್ಲೀನ್ ಚೀಟ್ ಪಡೆದುಕೊಂಡಿದ್ದರು. ಬಳಿಕ ಜಯಕರ್ನಾಟಕ ಸಂಘಟನೆ ಕಟ್ಟಿಕೊಂಡು ಸಮಾಜ ಸೇವೆಗೆ ಮುಂದಾಗಿದ್ದರು.
ಈ ಮಧ್ಯೆ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಜತೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾನೂನು ಬಾಹಿರ ಚಟುವಟಿಕೆ ಹಾಗೂ ಹಣ ವಸೂಲಿ, ಪ್ರಾಣ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರೈ ಅವರನ್ನು ಅವರ ಮನೆಯಲ್ಲೇ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದರು.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಮುತ್ತಪ್ಪ ರೈ ಪಾರ್ಥೀವ ಶರೀರವನ್ನು ಮಾಗಡಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗಿದೆ. ಮೊದಲ ಪತ್ನಿ ಸಮಾಧಿ ಪಕ್ಕದಲ್ಲೇ ನೆರವೇರಿಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.