Advertisement
Related Articles
Advertisement
ಅದೇನಾಯೊ¤à ಏನೋ, ಇದ್ದಕ್ಕಿದ್ದಂತೆ ವರುಣ ಮುನಿಸಿಕೊಂಡ. ಕಾಲಕ್ರಮೇಣ ನನ್ನ ಒಡಲು ಬರಿದಾಗುತ್ತಾ ಬಂತು. ಅಕ್ಕಪಕ್ಕದಲ್ಲಿದ್ದ ಹೊಲ ಗದ್ದೆಗಳು ಬತ್ತಿಹೋದವು. ಅಡಕೆ, ತೆಂಗು, ಹಲಸು, ನೇರಳೆ ಮತ್ತು ಮಾವಿನ ಮರಗಳು ನೆಲಕಚ್ಚಿದವು. ಪಕ್ಕದಲ್ಲೇ ಇದ್ದ ಅದೆಷ್ಟೋ ಬಾವಿಯೊಳಗಿನ ಅಂತರಗಂಗೆ ಪಾತಾಳ ಸೇರಿದಳು. ನನ್ನ ಒಡಲು ಸಂಪೂರ್ಣ ಒಣಗಿ ಹೋಯಿತು. ವರ್ಷ ಕಾದೆ, ಎರಡು ವರ್ಷ ಕಾದೆ ವರುಣನ ಆಗಮನಕ್ಕಾಗಿ… ಐದು, ಹತ್ತು ಹದಿನೈದು ಇಪ್ಪತ್ತು ವರ್ಷವಾದರೂ, ಮುನಿಸಿಕೊಂಡ ವರುಣ, ಒಲಿಯಲೇ ಇಲ್ಲ. ನನ್ನ ಸಂಕಟ, ನೋವು ಯಾರೊಬ್ಬರಿಗೂ ಅರ್ಥವಾಗಲಿಲ್ಲ. ಸ್ವತ್ಛವಾಗಿದ್ದ ನನ್ನ ಒಡಲನ್ನು ಒಂದಷ್ಟು ಕಿಡಿಗೇಡಿಗಳು ಬಗೆದರು. ಬಗೆಯುತ್ತಲೇ ಇದ್ದರು. ಸಾವಿರಾರು ಮಂದಿಗೆ ನೀರುಣಿಸುತ್ತಿದ್ದ ನನಗೆ ದಾಹ ಹೆಚ್ಚಾಗಿತ್ತು. ದಾಹ ತಡೆಯಲಾಗದೆ ದುಃಖೀಸಿದೆ. ನನ್ನ ಅಳುವಿನ ದನಿ ಯಾರೊಬ್ಬರಿಗೂ ಕೇಳಿಸಲಿಲ್ಲ. ನನ್ನೊಡಲಲ್ಲಿ ಗಿಡ-ಗಂಟೆಗಳು ಬೆಳೆದವು. ನಿತ್ಯವೂ ನನ್ನನ್ನು ನೋಡಲು ಬರುತ್ತಿದ್ದ ಮಂದಿ, ನನ್ನ ಕಡೆ ಮುಖ ಕೂಡ ತಿರುಗಿ ನೋಡದೆ ಹೋಗುತ್ತಿದ್ದರು. ನನ್ನ ಸಮೀಪದಲ್ಲೇ ಜನ ವಾಸ ಮಾಡಿದರೂ, ನನ್ನ ಬಗ್ಗೆ ಯಾರೂ ಕಾಳಜಿ ತೋರಲಿಲ್ಲ. ನನ್ನೊಡಲನ್ನು ಬಗೆದು ಬಗೆದು ದೊಡ್ಡ ದೊಡ್ಡ ಗುಂಡಿ ಮಾಡಿದರೇ ಹೊರತು, ನನ್ನ ನೋವು ಸಂಕಟ, ಯಾತನೆ ಯಾರಿಗೂ ಗೊತ್ತಾಗಲಿಲ್ಲ. ನನ್ನಿಂದ ಅದೆಷ್ಟೋ ಒಳಿತನ್ನ ಕಂಡವರು, ನನ್ನ ಸಮಸ್ಯೆ ಅರಿಯಲೇ ಇಲ್ಲ. ನಾನು ಪಡಕೊಂಡು ಬಂದದ್ದು ಇಷ್ಟೇ ಇರಬೇಕು ಅಂದುಕೊಂಡು ಸುಮ್ಮನೆ ಮಲಗಿಬಿಟ್ಟೆ…
ಒಳ್ಳೆಯ ಕಾಲಕ್ಕಾಗಿ ನಾನು ಕಳೆದ ವರ್ಷಗಳನ್ನು ನೆನಪಿಸಿಕೊಂಡರೆ ಈಗ ಕಣ್ಣೀರು ಉಕ್ಕಿಬರುತ್ತೆ. ರಾತ್ರಿ, ಹಗಲು, ಮಳೆ, ಚಳಿ, ಬಿಸಿಲು ಏನೇ ಬಂದರೂ, ನನ್ನ ಪಾಡಿಗೆ ನಾನು ಮೂಕವೇದನೆಯಲ್ಲೇ ನರಳುತ್ತ ದಿನ ಕಳೆಯುತ್ತಿದ್ದೆ. ಹೀಗಿದ್ದಾಗಲೇ, ಕೆಲವರಿಗೆ ನನ್ನ ಬಗ್ಗೆ ಕರುಣೆ ಬಂತು. ಆ ಅನುಕಂಪದಿಂದಲೇ ನಾನೀಗ ಮೈ ಒದ್ದೆ ಮಾಡಿಕೊಂಡಿದ್ದೇನೆ. ತುಸು ದಾಹ ತೀರಿಸಿಕೊಂಡು ಚೇತರಿಸಿಕೊಂಡಿದ್ದೇನೆ. ನನ್ನ ಬಗ್ಗೆ ಕಾಳಜಿ ತೋರಿದ ಮಹಾನುಭಾವರಿಗೆ ಕೃತಜ್ಞತೆಗಳು. ನನ್ನಿಂದ ಮೊದಲಿನಂತೆ ಎಲ್ಲರ ದಾಹ ತೀರಿಸಲು ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಹೀಗೇ ಕಾಳಜಿಯಿಂದ, ಅಕ್ಕರೆ ತೋರಿ ಪ್ರೀತಿಸಿದರೆ, ಖಂಡಿತವಾಗಿಯೂ ಎಲ್ಲರ ಒಳಿತಿಗೆ ಮುಂದಾಗಬಲ್ಲೆ. ನನ್ನ ಹಳೆಯ ವೈಭವ ಮರುಕಳಿಸದಿದ್ದರೂ “ಸಾಗರ’ದಂತಿರುವ ನಾನು, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸುವ ಭರವಸೆ ಕೊಡಬಲ್ಲೆ. ನನ್ನೊಡಲಲ್ಲೇ ಹುಲುಸಾಗಿ ಬೆಳೆದು ನಿಂತವರು ನನ್ನನ್ನು ಅರ್ಥ ಮಾಡಿಕೊಂಡರೆ, ವರುಣ ಮತ್ತೆ ದಯೆ ತೋರಿದರೆ ಭರಮಣ್ಣ ನಾಯಕನಾಣೆಗೂ ನಾನು ಮತ್ತದೇ “ಸಾಗರ’ವಾಗುತ್ತೇನೆ.
ಸೋದರ ಸೋದರಿಯರೇ ಈವರೆಗೂ ಓದಿದಿರಲ್ಲ; ಇದು ಭರಮಸಾಗರ ಎಂಬ ದೊಡ್ಡ ಕೆರೆಯ ಕಥೆ!! ಸುಮಾರು 864 ಎಕರೆಯಷ್ಟು ವಿಶಾಲವಾಗಿರುವ ಕೆರೆ ಇದು. ಆಗಿನ ಭರಮಣ್ಣ ನಾಯಕ ಕಟ್ಟಿಸಿದ ಕೆರೆ. ಸಾಗರದಂತೆ ಕಟ್ಟಿಸಿದ್ದರಿಂದ, ಭರಮಣ್ಣ ನಾಯಕನ ಸಾಗರದಂಥ ಕೆರೆ ಎಂಬ ಮಾತು ಜನಜನಿತವಾಯಿತು. ಆ “ಸಾಗರ’ದ ಮಡಿಲಲ್ಲಿರುವ ಊರಿಗೆ “ಭರಮಸಾಗರ’ ಅಂತಲೂ ಹೆಸರು ಬಂತು ಎಂಬ ಪ್ರತೀತಿ ಇದೆ. ಸರಿ ಸುಮಾರು ಮೂರು ದಶಕಗಳಿಂದಲೂ ಬರಿದಾಗಿದ್ದ ಕೆರೆಗೆ ಕಳೆದ 2009ರಲ್ಲಿ ಸಣ್ಣ ಪ್ರಮಾಣದ ನೀರು ಬಂದಿತ್ತು. ಅದು ಬಿಟ್ಟರೆ, ಒಂದು ಕಾಲದಲ್ಲಿ ಮೈದುಂಬಿಕೊಂಡಿದ್ದ ಕೆರೆ ಬತ್ತಿ, ಬಣಗುಟ್ಟುತ್ತಿತ್ತು. ಇಂಥ ಅದೆಷ್ಟೋ ಬತ್ತಿದ ಕೆರೆಗಳಿಗೆ ನೀರುಣಿಸಬೇಕೆಂಬ ಕಾಯಕಲ್ಪಕ್ಕೆ ಮುಂದಾಗಿದ್ದು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ರಾಜನಹಳ್ಳಿ ಏತನೀರಾವರಿ ಯೋಜನೆಯಡಿ, ಪೈಪ್‌ಲೈನ್ ಮೂಲಕ ದಾವಣಗೆರೆ ಜಿಲ್ಲೆಯ 22 ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಮುಂದುವರಿಸಿ, ಅದನ್ನು ಭರಮಸಾಗರ ಸುತ್ತಮುತ್ತಲ ಕೆರೆಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದರು. ಮೂರು ವರ್ಷಗಳ ಹಿಂದೆ ಶ್ರೀಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ, ಅನುದಾನ ಬಿಡುಗಡೆ ಮಾಡಿತು. ಆಗ ಸಚಿವರಾಗಿದ್ದ ಎಚ್.ಆಂಜನೇಯ, ಕಾಳಜಿ ವಹಿಸಿದರು. ಪರಿಣಾಮ, ಭರಮಸಾಗರ ಹಾಗೂ ಇತರೆ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಜಯ ಸಿಕ್ಕಿತು. ಇದರ ಹಿಂದೆ ಸ್ಥಳೀಯ ಮುಖಂಡರ ಪಾಲು ದೊಡ್ಡದಿದೆ. ಶ್ರೀಗಳ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ.
ಈಗ ಪೈಪ್ ಮೂಲಕ ತುಂಗಭದ್ರಾ ನದಿ ನೀರನ್ನು ಒಂದೆಡೆ ಸಂಗ್ರಹಿಸಿ, ಆ ನೀರನ್ನು ಸದ್ಯ ಕೆರೆಗೆ ಹರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದು ಪ್ರಾಯೋಗಿಕವಾಗಿ ಸಫಲವಾಗಿದೆ. ಸದ್ಯ, ಅಲ್ಲಲ್ಲಿ ದುರಸ್ತಿಯಾಗಬೇಕಿದೆ. ಪ್ರಯೋಗ ಎಂಬಂತೆ ನೀರು ಕೆರೆಗೆ ಬಂದಿದೆ. ಮುಂದಿನ ದಿನಗಳಲ್ಲಿ, ತುಂಗಭದ್ರಾ ನದಿ ನೀರು, ಭರಮಸಾಗರ ಕೆರೆಗೆ ಹರಿಯಲಿದೆ.