Advertisement

ಯುಪಿಎಸ್‌ ಸಿಯಲ್ಲಿ ಅನುತ್ತೀರ್ಣ ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ನಿಪುಣ

05:35 PM Dec 19, 2022 | Team Udayavani |

ದೇಶದ ಅತ್ಯುನ್ನತ ನಾಗರಿಕ ಸೇವೆಯಲ್ಲಿ ಒಂದಾದ ಯುಪಿಎಸ್‌ಸಿಯಲ್ಲಿ ಹುದ್ದೆ ಪಡೆಯುವುದು ಹಲವು ಯುವಕರ ಕನಸಾಗಿದೆ, ಅದರಲ್ಲಿ ಕೆಲವರು ಯಶಸ್ಸು ಕಂಡರೂ ಅನೇಕರಿಗೆ ಅದು ಕನಸಾಗಿಯೇ ಉಳಿಯುತ್ತದೆ. ತಮ್ಮ ಗುರಿಯಲ್ಲಿ ಸೋಲುಕಂಡರೆ ನಿರುತ್ಸಾಹ ತಾಳುವ ಅಸಂಖ್ಯಾತ ಯುವಕರ ಮಧ್ಯೆ  ಹಳ್ಳಿ ಹೈದ ಇಂದು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿ ಮಾದರಿಯಾಗಿದ್ದಾರೆ.

Advertisement

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೋಬಳಿ ಬ್ರಹ್ಮಪುರ ಗ್ರಾಮದ ಚಂದನ್ ಎಂಬ ಸ್ನಾತಕೋತ್ತರ ಪದವಿಧರನ ಯಶಸ್ಸಿನ ಜೀವನ ಇದು. ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ನಂತರ ಮೂರು ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಯಶಸ್ಸು ಫಲಿಸದ ಕಾರಣ ಮುಂದೇನು ಎಂದಾಗ ಬಾಲ್ಯದ ಕೃಷಿಯ ಅನುಭವ ಕೈ ಹಿಡಿಯಿತು. ಹೀಗೆ ಚಂದನ್ ಹೈನುಗಾರಿಕೆ ಕಡೆ ಮುಖ ಮಾಡಿದರು.

ಮೊದಲು ಮೂರು ಹಸುಗಳೊಂದಿಗೆ ಆರಂಭಗೊಂಡ ಇವರ ಹೈನುಗಾರಿಕೆ ಪಯಣ ಇಂದು ಸುಮಾರು ನಲವತ್ತಕ್ಕೂ ಹೆಚ್ಚು ವಿವಿಧ ಮಿಶ್ರ ತಳಿಯ ರಾಸುಗಳಿರುವ ದೊಡ್ಡ ಫಾರ್ಮ್ ಆಗಿ ಬೆಳೆದಿದೆ. ಪ್ರತಿದಿನ ಬರೊಬ್ಬರಿ 280 ರಿಂದ 300 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ, ಇದು ನನ್ನ 15 ವರ್ಷದ ಫಲ ಎನ್ನುತ್ತಾರೆ ಚಂದನ್.

ನನ್ನ ಪೋಷಕರಿಬ್ಬರು  ಕೆಎಎಸ್ ಸರ್ಕಾರಿ ಅಧಿಕಾರಿಗಳು. ಇವರ ಪ್ರೇರಣೆಯಿಂದ, ಉನ್ನತ ಶಿಕ್ಷಣ ಮುಗಿದ ಕೂಡಲೇ ಐಎಎಸ್ ಆಗಬೇಕು ಎಂಬ ಕನಸು ಚಿಗುರಿತು. ಅದಕ್ಕಾಗಿ ಒಂದಷ್ಟು ವರ್ಷಗಳ ಕಾಲ ತಯಾರಿ ನಡೆಸಿ ಮೂರು ನಾಲ್ಕು ಬಾರಿ ಪರೀಕ್ಷೆ ತೆಗೆದುಗೊಂಡೆ. ಆದರೆ, ಪರೀಕ್ಷೆಯಲ್ಲಿ ನಿರಿಕ್ಷಿತ ಯಶಸ್ಸು ಲಭಿಸದ ಕಾರಣ ಏನಾದರೂ ಉದ್ಯಮ ಆರಂಭಿಸಬೇಕು ಎಂದು ನಿರ್ಧರಿಸಿದೆ. ಈ ವೇಳೆ ನನ್ನ ಗುರುಗಳಾದ ಡಾ.ಎಚ್.ಕೆ ಚನ್ನೇಗೌಡ ಅವರ ಮಾರ್ಗದರ್ಶನ ಮಾಡಿದರು. ನಮ್ಮದು ಕೃಷಿ ಹಿನ್ನೆಲೆಯುಳ್ಳ ಕುಟುಂಬವಾದ್ದರಿಂದ ಹೈನುಗಾರಿಕೆ ಸೂಕ್ತ ಎಂದು ಭಾವಿಸಿ ಕೃಷಿಯ ಉಪ ಕುಸುಬಿನತ್ತ ಮುಖ ಮಾಡಿದೆ. ನನ್ನ ಕನಸಿನ ಉದ್ಯಮಕ್ಕೆ ಪೋಷಕರು ಮತ್ತು ಮಡದಿ ಸದಾ ಬೆಂಬಲವಾಗಿ ನಿಂತಿರುವುದರಿಂದ ಇಷ್ಟು ದೊಡ್ಡ ಮಟ್ಟದಲ್ಲಿ ನನಗೆ ಇದನ್ನು ಮಾಡಲು ಸುಲಭವಾಯಿತು ಎಂದರು.

Advertisement

ನಮ್ಮಲ್ಲಿ 15 ರಿಂದ 20 ಲೀಟರ್ ಹಾಲು ನೀಡುವ ಜೆರ್ಸಿಯಂತಹ ವಿವಿಧ ಪ್ರಭೇದ ಹಸುಗಳಿವೆ. ಪ್ರೋಟಿನ್, ವಿಟಮಿನ್‌ನಂತಹ ಪೌಷ್ಟಿಕಾಂಶವುಳ್ಳ ಮೇವು ನೀಡಿದರೆ, ಗುಣಮಟ್ಟದ ಹಾಲು ನೀಡುತ್ತವೆ. ಆಧುನಿಕ ತಂತ್ರಜ್ಞಾನದ ಜೊತೆಗೆ ನಮ್ಮ ಪೂರ್ವಿಕರಿನ ಪದ್ಧತಿಯದ ಫ್ರೀ ಸ್ಟೈಲ್ ರೀತಿಯನ್ನು ಅಳವಡಿಸಿಕೊಂಡರೆ ಇನ್ನು ಸುಲಭ, ಬಂಡವಾಳದ ವಿಷಯಕ್ಕೆ ಬಂದರೆ ಅವರ ಆರ್ಥಿಕ ಸಾಮರ್ಥ್ಯದ ಅನುಸಾರವಾಗಿ ಹೂಡಿಕೆ ಮಾಡುವುದು ಒಳ್ಳೆಯದು. ಆರಂಭದಲ್ಲಿ ಎರಡು ಮೂರು ಹಸುಗಳನ್ನು ಇಟ್ಟುಕೊಂಡು ಅದರಿಂದ ಲಾಭದಲ್ಲಿ ಉದ್ಯಮವನ್ನು ವಿಸ್ತರಿಸಿದರೆ ಹೆಚ್ಚು ಉತ್ತಮ. ಮುಖ್ಯವಾಗಿ ನಾವು ನಮ್ಮದೇ ಆದ ಹಸುವಿನ ಸಂತತಿ ವೃದ್ಧಿ ಮಾಡಿದರೆ ಆಗ ರಾಸುಗಳು ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂದು ಸಲಹೆ ನೀಡಿದರು.

ಹೈನುಗಾರಿಕೆ ವ್ಯಕ್ತಿಗೆ ಶಿಸ್ತನ್ನು ಮತ್ತು ಸೃಜನಾತ್ಮಕ ಅಂಶಗಳನ್ನು ಕಲಿಸಿ ಕೊಡುತ್ತದೆ, ಹೈನುಗಾರಿಕೆಯನ್ನು ಬದ್ಧತೆಯಿಂದ ಮಾಡಿದರೆ, ಇದರಲ್ಲಿ ಬದುಕು ಕಟ್ಟಿಕೊಳ್ಳಬಹುದು ಎನ್ನುತ್ತಾರೆ ಈ ಸಾಧಕ.

ಮನೋಷ್ ಕುಮಾರ್ ಎನ್ ಬಸರೀಕಟ್ಟೆ

ಇದರ ವಿಡಿಯೋ ಸ್ಟೋರಿಯನ್ನು ಕೆಳಗೆ ಕ್ಲಿಕ್ ಮಾಡಿ ನೋಡ ಬಹುದು.

Advertisement

Udayavani is now on Telegram. Click here to join our channel and stay updated with the latest news.

Next