Advertisement
ಹೊನ್ನಾವರದ ಹಳ್ಳಿ ಖರ್ವಾ ಕೊಳಗದ್ದೆ ಸಿದ್ಧಿವಿನಾಯಕ ವಿದ್ಯಾಮಂದಿರದಲ್ಲಿ ಜಾನಪದ ಕಲಾಪ್ರಕಾರಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಲಾ ವಿದ್ಯಾರ್ಥಿಗಳೊಂದಿಗೆ ಕುಣಿದು, ನಲಿಯುತ್ತಿರುವಾಗಲೇ ತಮಗೆ ಪದ್ಮಶ್ರೀ ಘೋಷಣೆಯಾದ ಸುದ್ದಿ ಬಂದರೂ ಕಾರ್ಯಾಗಾರವನ್ನು ಬಿಟ್ಟೋಡದೆ ಸಮಾರೋಪ ಸಮಾರಂಭದವರೆಗೆ ಉಳಿದುಕೊಂಡಿದ್ದು ಅವರ ಕರ್ತವ್ಯ ನಿಷ್ಠೆಗೆ, ಕಲಾಪ್ರೀತಿಗೆ ದ್ಯೋತಕ. ಮುಕ್ತಾಯ ಸಮಾರಂಭಕ್ಕೆ ಕುರ್ಚಿ ಜೋಡಿಸುತ್ತಿದ್ದ ಅವರು “ಉದಯವಾಣಿ’ಗೆ ತಮ್ಮ ಜೀವನೋತ್ಸಾಹ ಮತ್ತು ಮಾನವೀಯ ಗುಣಗಳಿಗೆ ಕಾರಣವಾದ ಸಂಗತಿಗಳನ್ನು ವಿವರಿಸಿದರು.
Related Articles
Advertisement
ಊಟವಿಲ್ಲದೆ ಮಲಗಿದ, ಬಟ್ಟೆಯಿಲ್ಲದೇ ಸೊರಗಿದ, ಸಮಾಜತಿರಸ್ಕರಿಸಿದ ಬದುಕಿನಲ್ಲಿ ಮೇಲೆದ್ದು ಬರಲು ಹಠಹಿಡಿದೆ. ಜೋಗತಿಯರು ದೇವದಾಸಿಯರಲ್ಲ, ಕಲಾವಿದೆಯರು ಎಂಬುದನ್ನು ಸಿದ್ಧ ಮಾಡಿದೆ. ಯಲ್ಲಮ್ಮನಾಗಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದೆ. ಬಯಲಾಟದಲ್ಲಿ ತಾರಕಾಸುರನಾದೆ.ನನ್ನ ಜೀವನ ಹೋರಾಟದಲ್ಲಿ ಯಶಸ್ವಿಯಾಗುತ್ತಿದ್ದಂತೆ ಗೌರವ ದೊರೆಯತೊಡಗಿತು. ನಾಟಕದಲ್ಲಿ ಅಭಿನಯಿಸಿದ್ದನ್ನು ತಂದೆ ನೋಡಿ ಖುಷಿಪಟ್ಟಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದದ್ದನ್ನು ಅಮ್ಮ ನೋಡಿ ಸಂಭ್ರಮಪಟ್ಟಿದ್ದರು. ದೃಶ್ಯ ಮಾಧ್ಯಮಗಳು ನನ್ನ ಜೀವನದ ಕಥೆ-ವ್ಯಥೆಗಳನ್ನು ಭಿತ್ತರಿಸಿದವು. ಸಾಹಸವನ್ನುವರ್ಣಿಸಿದವು. ಬಾಣೆಲೆಯಿಂದ ಬೆಂಕಿಗೆ ಬಿದ್ದರೂ ಎದ್ದು ಬಂದಿದ್ದೇನೆ. ಕಲಾವಿದೆಯಾಗಿ ಕಲಾಕ್ಷೇತ್ರದ ಹುಳುಕು-ಕೊಳಕು ಕಂಡಿದ್ದೇನೆ. ಅವರ ಕಷ್ಟ ಅರಿತಿದ್ದೇನೆ. ನಾನು ಅಕಾಡೆಮಿ ಅಧ್ಯಕ್ಷಳಾದ ಮೇಲೆ ಅಂತಹ ತೊಂದರೆಗಳು ಬರಬಾರದೆಂದು ನಮ್ಮ ಎಲ್ಲ ಕಾರ್ಯಕ್ರಮಗಳಲ್ಲಿ ಕೊನೆಯತನಕ ಕಲಾವಿದರ ಜತೆಗೇ ಇರುತ್ತೇನೆ.
ಅವರ ಊಟ, ತಿಂಡಿ, ಯೋಗಕ್ಷೇಮ, ಆರೋಗ್ಯ ಎಲ್ಲವನ್ನೂ ವಿಚಾರಿಸಿಕೊಳ್ಳುತ್ತೇನೆ. ನನ್ನ ತಾಯಿ ಕಲಿಸಿದ ಪಾಠ ಇದು. ಮನೆಯಲ್ಲಿ ಅಷ್ಟೊಂದು ಮಕ್ಕಳಿದ್ದರೂ, ಅವರಿಗೆ ಇಲ್ಲವಾದರೂ ಬೀದಿಯಲ್ಲಿ ಹೋಗುವ ಭಿಕ್ಷುಕರನ್ನು, ಬಡವರನ್ನು ಮನೆಯೊಳಗೆ ಕರೆತಂದು ಊಟ ಹಾಕಿ, ಖರ್ಚಿಗೆ ಹಣಕೊಟ್ಟು ಕಳಿಸುತ್ತಿದ್ದಳು. ಅವಳ ಗುಣ ನನ್ನಲ್ಲಿ ಬಂದಿರಬೇಕು, ನನಗೆ ಇದನ್ನು ಯಾರೂ ಹೇಳಿಕೊಟ್ಟಿಲ್ಲ ಎಂದರು. ಕಷ್ಟದ ದಿನಗಳನ್ನು ವಿವರಿಸುವಾಗ ಕಣ್ಣೀರು ಹಾಕದೆ ನಗುನಗುತ್ತ ಹೇಳಿಕೊಂಡ ಮಂಜಮ್ಮ, ಅಮ್ಮನಿಂದ ಕಲಿತ ಮಾನವೀಯ ಗುಣಗಳನ್ನು ಪ್ರಸ್ತಾಪಿಸುವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. 63 ವರ್ಷದ ಇವರ ಬದುಕೇ ಕಷ್ಟದಲ್ಲಿರುವವರ ಪಾಲಿಗೆ ಬೆಳಕು.
ಜೀಯು, ಹೊನ್ನಾವರ