ಬೆಂಗಳೂರು: ಮತ್ತು ಬರುವ ಔಷಧ ನೀಡಿ ಮೈಮೇಲಿದ್ದ, ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಮಹಿಳಾ ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದ ಗೀತಾ (37) ಹಾಗೂ ಆಕೆಯ ಸ್ನೇಹಿತೆ ಭಾರತಿ ಭಾಯ್ (30) ಬಂಧಿತರು.
ಆರೋಪಿಗಳಿಂದ 82 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೊರಕೆರಹಳ್ಳಿಯ ನಿವಾಸಿ ಸೌಭಾಗ್ಯ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿ ಶ್ರೀನಗರದ ಗೀತಾ ಹಾಗೂ ಕತ್ರಿಗುಪ್ಪೆಯ ಮೊದಲನೇ ಹಂತದ ಹೊಸಕೆರಹಳ್ಳಿಯ ನಿವಾಸಿ ಸೌಭಾಗ್ಯ ಸ್ನೇಹಿತರಾಗಿದ್ದು, ಸೌಭಾಗ್ಯ 18 ತಿಂಗಳಿನಿಂದ ಹೊಸಕೆರಹಳ್ಳಿಯನ್ನು ವಾಸಿಸುತ್ತಿದ್ದು, ಮನೆಕೆಲಸ ಮಾಡಿಕೊಂಡಿದ್ದಾರೆ. ಆಕೆಯ ಪತಿ ಕುಮಾರ್ ಗಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಳೇಯ ಸಹೋದ್ಯೋಗಿ ಹಾಗೂ ಗೆಳತಿಯಾದ ಗೀತಾ ಏ.26 ರಂದು ಭಾರತಿ ಬಾಯ್ ಎಂಬ ಮಹಿಳೆಯ ಜತೆ ಸೌಭಾಗ್ಯ ಮನೆಗೆ ಬಂದಿದ್ದಳು. ಈ ವೇಳೆ, ಎಲ್ಲಿಯಾದರೂ ಕೆಲಸವಿದ್ದರೆ ತಿಳಿಸು ಎಂದು ಹೇಳಿ ಕೆಲ ಕಾಲ ಮಾತನಾಡಿ ವಾಪಸ್ ಹೋಗಿರುತ್ತಾಳೆ.
ಇದನ್ನೂ ಓದಿ:ಭಾರಿ ಖಾರ…; 120 ರೂ. ದಾಟಿದ ಹಸಿ ಮೆಣಸಿನಕಾಯಿ
ಮರುದಿನ ಸೌಭಾಗ್ಯ ಎಂದಿನಂತೆ ಮನೆಗೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಬರುವ ವೇಳೆಗೆ ಗೀತಾ ಸೌಭಾಗ್ಯಗೆ ಕರೆ ಮಾಡಿ ತಾನು ನಿಮ್ಮ ಮನೆ ಮುಂದೆ ಇದ್ದೇನೆ. ಕೆಲವು ಪ್ರಮುಖ ವಿಚಾರ ಮಾತನಾಡಬೇಕು ಮನೆಗೆ ಬಾ ಎಂದು ಕರೆದಿದ್ದರು. ಆದರೆ, ಆಕೆ ತನಗೆ ಬೇರೆ ಕೆಲಸವಿರುವುದಾಗಿ ಹೇಳಿ ಈಗ ಬರಲು ಸಾಧ್ಯವಿಲ್ಲ ಎಂದು ಸೌಭಾಗ್ಯ ಹೇಳಿದರೂ, ಇಲ್ಲ ತುಂಬಾ ದಾಹವಾಗಿದೆ ನೀರು ಕುಡಿಯ ಬೇಕು ಬೇಗ ಮನೆಗೆ ಬಾ ಎಂದು ಕರೆದು, ಸೌಭಾಗ್ಯ ಮನೆಗೆ ಬರುತ್ತಿದ್ದಂತೆ ಆಕೆಗೆ ತಂಪು ಪಾನೀಯ ನೀಡಿ, ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಮೈಮೇಲೆ ಮತ್ತು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.