ಮುಂಬಯಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗ ಭೀಕರ ಹಂತ ತಲುಪಿರುವ ನಡುವೆಯೇ ಸೋಮವಾರ (ಫೆ.28) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕ ಕುಸಿದಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಭಾರತದಲ್ಲಿ 10 ಸಾವಿರಕ್ಕಿಂತ ಕೆಳಕ್ಕಿಳಿದ ಕೋವಿಡ್ ಪ್ರಕರಣ, ಸಾವಿನ ಪ್ರಮಾಣ ಇಳಿಕೆ
ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,004 ಅಂಕ ಇಳಿಕೆಯಾಗಿದ್ದು, 54,854 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 268 ಅಂಕ ಕುಸಿದಿದ್ದು, 16,390 ಅಂಕಗಳಲ್ಲಿ ವಹಿವಾಟು ನಡೆದಿದೆ.
ಎನ್ ಎಸ್ ಇ ವಹಿವಾಟಿನಲ್ಲಿ ಬಹುತೇಕ ಕ್ಷೇತ್ರಗಳ ಷೇರುಗಳ ಮೌಲ್ಯ ಇಳಿಕೆ ಕಂಡಿದ್ದು, ಆಟೋ ಮತ್ತು ಬ್ಯಾಂಕಿಂಗ್ ಸೆಕ್ಟರ್ ಷೇರುಗಳ ಮೌಲ್ಯ ಶೇ.1.99ರಷ್ಟು ಇಳಿಕೆ ಕಂಡಿದೆ. ಟಾಟಾ ಮೋಟಾರ್ಸ್ ಷೇರುಗಳ ಮೌಲ್ಯ ಶೇ.2.99ರಷ್ಟು ನಷ್ಟ ಕಂಡಿದೆ.
ಎಚ್ ಡಿಎಫ್ ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಸ್ ಬಿಐ ಲೈಫ್ ಮತ್ತು ಹೀರೋ ಮೋಟಾರ್ ಷೇರುಗಳು ನಷ್ಟ ಕಂಡಿದೆ. ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿಯೇ ಹೂಡಿಕೆದಾರರಿಗೆ ಬರೋಬ್ಬರಿ 4.09 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು, 245.95 ಲಕ್ಷ ಕೋಟಿ ರೂಪಾಯಿಗೆ ವಹಿವಾಟು ತಲುಪಿದೆ.