ಮುಂಬಯಿ: ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಏರಿಕೆಯ ನಾಗಾಲೋಟ ಮುಂದುವರಿದಿದ್ದು, ಶುಕ್ರವಾರ (ಸೆಪ್ಟೆಂಬರ್ 24) ಸಂವೇದಿ ಸೂಚ್ಯಂಕ 163.11 ಅಂಕಗಳ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಐತಿಹಾಸಿಕ ಗರಿಷ್ಠ ದಾಖಲೆಯ 60,000 ಅಂಕಗಳ ಮಟ್ಟ ದಾಟಿದೆ.
ಇದನ್ನೂ ಓದಿ:ನಿತ್ಯ ಸ್ನಾನ ಮಾಡದ ಹೆಂಡತಿಗೆ ತಲಾಖ್ ನೀಡಲು ಮುಂದಾದ ಪತಿ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 163.11 ಅಂಕಗಳ ಏರಿಕೆಯೊಂದಿಗೆ 60,048.47 ಅಂಕಗಳ ಸಾರ್ವಕಾಲಿಕ ಗರಿಷ್ಠ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ 30.20 ಅಂಕ ಏರಿಕೆಯಾಗಿದ್ದು, 17,853.20 ಅಂಕಗಳ ದಾಖಲೆ ಮಟ್ಟ ತಲುಪಿದೆ.
ನಿಫ್ಟಿ, ಸೆನ್ಸೆಕ್ಸ್ ಏರಿಕೆಯ ಪರಿಣಾಮ ಏಷ್ಯನ್ ಪೇಂಟ್ಸ್, ಈಚರ್ ಮೋಟರ್ಸ್, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ ಬ್ಯಾಂಕ್, ಭಾರ್ತಿ ಏರ್ ಟೆಲ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ವಿಪ್ರೊ, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಬಜಾಜ್ ಆಟೋ, ಕೋಟಕ್ ಮಹೀಂದ್ರ ಷೇರುಗಳು ಲಾಭಗಳಿಸಿದೆ.
ಟಾಟಾ ಸ್ಟೀಲ್, ಆ್ಯಕ್ಸಿಸ್ ಬ್ಯಾಂಕ್, ಶ್ರೀ ಸಿಮೆಂಟ್ಸ್, ಐಟಿಸಿ, ಎನ್ ಟಿಪಿಸಿ, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್, ಎಚ್ ಯುಎಲ್, ಟಾಟಾ ಕನ್ ಸ್ಯೂಮರ್ ಪ್ರೊಡಕ್ಟ್ಸ್ ಷೇರುಗಳು ನಷ್ಟ ಕಂಡಿವೆ.
ಬರೋಬ್ಬರಿ 31 ವರ್ಷಗಳ ಕಾಲಾವಧಿಯಲ್ಲಿ ಸೆನ್ಸೆಕ್ಸ್ ಒಂದು ಸಾವಿರದಿಂದ ಐತಿಹಾಸಿಕ 60,000 ಅಂಕಗಳ ಮಟ್ಟಕ್ಕೆ ತಲುಪಿದಂತಾಗಿದೆ. 1990ರ ಜುಲೈ 25ರಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1000 ಅಂಕಗಳ ಮಟ್ಟಕ್ಕೆ ಏರಿಕೆಯಾಗಿತ್ತು. ಆ ನಂತರ 2015ರ ಮಾರ್ಚ್ 4ರಂದು ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಐತಿಹಾಸಿಕ 30,000 ಅಂಕಗಳ ಮಟ್ಟಕ್ಕೆ ತಲುಪಿತ್ತು. ಇದೀಗ ಆರು ವರ್ಷಗಳ ಅಂತರದಲ್ಲಿ ಸೆನ್ಸೆಕ್ಸ್ 30,000 ದಿಂದ ದಾಖಲೆಯ 60,000 ಸಾವಿರಕ್ಕೆ ತಲುಪಿದಂತಾಗಿದೆ.