Advertisement

ಇನ್ನೂ ವಿತರಣೆ ಆಗದ ಬಿಸಿಯೂಟ ಪಡಿತರ

02:15 PM Oct 27, 2020 | Suhan S |

ಕೋಲಾರ: ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಶಾಲಾ ಮಕ್ಕಳಿಗೆ ಎರಡನೇ ತ್ತೈಮಾಸಿಕದಲ್ಲಿ ವಿತರಿಸಲು 7,647ಕ್ವಿಂಟಲ್‌ ಆಹಾರ ಧಾನ್ಯ ಕಾಯುತ್ತಿದ್ದು, ಸರ್ಕಾರದಆದೇಶಕ್ಕಾಗಿ ಕಾಯಲಾಗುತ್ತಿದೆ.

Advertisement

ಸರ್ಕಾರದ ಆದೇಶದ ಮೇರೆಗೆ ಮೇ ತಿಂಗಳವರೆಗೂ ಕೋಲಾರ ಜಿಲ್ಲೆಯ 2025 ಶಾಲೆಗಳಲ್ಲಿ ಬಿಸಿಯೂಟಕ್ಕೆ ಅರ್ಹರಾಗಿರುವ 1.08 ಲಕ್ಷ ಮಕ್ಕಳಿಗೆ ಆಹಾರ ಧಾನ್ಯಗಳನ್ನು ನಿಗದಿತ ಪ್ರಮಾಣದಲ್ಲಿ ಶೇ.95 ರಷ್ಟು ಪ್ರಮಾಣದಲ್ಲಿ ವಿತರಿಸಲಾಗಿದ್ದು, ಜೂನ್‌ ಹಾಗೂ ಇನ್ನುಳಿದ ಮೂರು ತಿಂಗಳ ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿಗಾಗಿ ಕೋಲಾರ ಜಿಲ್ಲೆಗೆ7,647 ಕ್ವಿಂಟಲ್‌ ಅಕ್ಕಿ ಮತ್ತು ಗೋಧಿ ಮಂಜೂರಾಗಿದ್ದು, ವಿತರಣೆಗೆ ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಇದರಿಂದ 1 ಲಕ್ಷ ಮಕ್ಕಳು ಮೂರ್ನಾಲ್ಕು ತಿಂಗಳಿನಿಂದಲೂ ಆಹಾರ ಧಾನ್ಯಗಳಿಂದ ವಂಚಿತರಾಗಬೇಕಾಗಿದೆ.

ಎಲ್ಲಿದೆ ಮಂಜೂರಾದ ಆಹಾರ ಪದಾರ್ಥ: ಬಿಸಿ ಯೂಟಕ್ಕೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಕೆಎಫ್ಸಿಎಸ್‌ಸಿ ಗೋದಾಮಿನಲ್ಲಿ ಇಡಲಾಗುತ್ತದೆ. ಆದರೆ, ಬಿಸಿಯೂಟ ಯೋಜನೆಗೆ ಶಾಲೆಗಳು ಆರಂಭವಾಗದೇ ಇರು ವುದರಿಂದ ಮತ್ತು ಆಹಾರ ಪದಾರ್ಥಗಳ ವಿತರಣೆಗೆ ಸರ್ಕಾರದ ಆದೇಶ ಇಲ್ಲದೇ ಇರುವುದರಿಂದಈ ಆಹಾರ ಪದಾರ್ಥ ಗಳ ಮಂಜೂರಾತಿ ಪತ್ರದ ಮೇಲೆ ಮಾತ್ರವೇ ಇದೆ. ಯಾವುದೇ ಆಹಾರ ಪದಾರ್ಥ ಮಂಜೂರಾಗಿ ಬಂದು ಗೋದಾಮಿನಲ್ಲಿ ದಾಸ್ತಾನಿರುವುದಿಲ್ಲ. ಕೆಎಫ್ ಸಿಎಸ್‌ಸಿ ಗೋದಾಮಿನಿಂದಲೇ ಪಡಿ ತರ ಡಿಪೋಗಳಿಗೆ ಆಹಾರ ಪೂರೈಕೆಯಾಗುವುದ ರಿಂದ ಆಯಾ ಕಾಲಘಟ್ಟದಲ್ಲಿ ಪೂರೈಕೆಯಾಗುವ ಜಿಲ್ಲೆಗೆ ಬರುವ ಆಹಾರ ಧಾನ್ಯಗಳನ್ನು ಮಾತ್ರವೇ ಬಿಸಿಯೂಟದ ವಿದ್ಯಾರ್ಥಿಗಳಿಗೂ ವಿತರಿಸಲಾಗುವುದ ರಿಂದ ಕೋಲಾರ ಜಿಲ್ಲೆಯ ಮಟ್ಟಿಗೆ ಆಹಾರ ಪದಾರ್ಥಗಳ ದಾಸ್ತಾನು, ಹಾಳಾಗುವ ಭೀತಿ ಎದುರಾಗಿಲ್ಲ.

ಬಿಸಿಯೂಟದ ಶಾಲೆ-ಮಕ್ಕಳೆಷ್ಟು?: ಕೋಲಾರ ಜಿಲ್ಲೆಯಲ್ಲಿ ಒಟ್ಟು 2025 ಶಾಲೆಗಳ 1,08,917 ಮಕ್ಕಳು ಬಿಸಿಯೂಟ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಈ ಪೈಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 1,185 ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 617, ಅನುದಾನಿತ 42 ಶಾಲೆಗಳು, ಸರ್ಕಾರಿ ಪ್ರೌಢಶಾಲೆಗಳು 122 ಮತ್ತು ಅನುದಾನಿತ ಪ್ರೌಢ ಶಾಲೆಗಳು 59 ಇವೆ. ಒಂದರಿಂದ ಐದರವರೆಗೂ 51,058 ಮಕ್ಕಳು, 6 ರಿಂದ 8ರವರೆಗೂ 34971 ಮಕ್ಕಳು ಮತ್ತು 9ರಿಂದ10ರ ವರೆವಿಗೂ 23846 ಮಕ್ಕಳು ಬಿಸಿಯೂಟದ ಫ‌ಲಾನುಭವಿಗಳಾಗಿದ್ದಾರೆ.

ಕೋವಿಡ್ ಬೇಸಿಗೆ ಅವಧಿ ಹಂಚಿಕೆ: ಕೋಲಾರ ಜಿಲ್ಲೆಯಲ್ಲಿ ಆರು ತಾಲೂಕುಗಳಲ್ಲಿ ಕೋವಿಡ್  ಅವಧಿಯಲ್ಲಿ 3,465 ಕ್ವಿಂ ಅಕ್ಕಿ, 720 ಕ್ವಿಂ ಗೋಧಿ, 1947 ಕ್ವಿಂ ತೊಗರಿ ಬೇಳೆ, 28,969 ಲೀ.ಎಣ್ಣೆ, 38,557 ಕೆ.ಜಿ. ಹಾಲಿನ ಪುಡಿಯನ್ನು ಶೇ.95 ಪ್ರಮಾಣದ ಮಕ್ಕಳಿಗೆ ವಿತರಣೆ ಮಾಡಲಾಗಿದೆ. ಹಂಚಿಕೆಯಾದ ಆಹಾರ ಧಾನ್ಯಗಳನ್ನು ಮಾರ್ಚ್‌14 ರಿಂದ ಏಪ್ರಿಲ್‌ 9 ರ 21 ದಿನಗಳ ಅವಧಿಗೆ 1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ತಲಾ 100 ಗ್ರಾಂಅಕ್ಕಿ, 50 ಗ್ರಾಂ ಬೇಳೆ, 6 ರಿಂದ 10 ನೇ ತರಗತಿಯ ಮಕ್ಕಳಿಗೆ 150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆಯನ್ನು ಹಂಚಿಕೆ ಮಾಡಲಾಗಿದೆ.

Advertisement

ಆನಂತರ ಏಪ್ರಿಲ್‌ 11 ರಿಂದ ಮೇ.28 ರವರೆಗೂ ಬರಗಾಲ ಮತ್ತು ಬೇಸಿಗೆ ಕಾಲದಲ್ಲಿ 1 ರಿಂದ 5 ರವರೆಗೂ 3 ಕೆ.ಜಿ. 700 ಗ್ರಾಂ ಅಕ್ಕಿ, ಅರ್ಧ ಕೆ.ಜಿ. ಹಾಲು, 250 ಗ್ರಾಂ ತೊಗರಿಬೇಳೆ ವಿತರಣೆ ಮಾಡಲಾಗಿದೆ. ಇದೇ ಅವಧಿಗೆ 6 ರಿಂದ 10 ರವರೆಗಿನ ಮಕ್ಕಳಿಗೆ ತಲಾ 5.5 ಕೆ.ಜಿ. ಅಕ್ಕಿ, ಅರ್ಧ ಕೆ.ಜಿ. ಹಾಲು, 1 ಲೀ. ಎಣ್ಣೆ ವಿತರಿಸಲಾಗಿದೆ.

ಶೇ.5ರಷ್ಟು ಆಹಾರ ಧಾನ್ಯ ಉಳಿಕೆ: ಬರಗಾಲ ರಹಿತ ಕೆ.ಜಿ.ಎಫ್ ತಾಲೂಕಿಗೆ ಬೇಸಿಗೆ ಕಾಲಾವಧಿಯಲ್ಲಿ 1 ರಿಂದ 5 ರವರೆಗಿನ ಮಕ್ಕಳಿಗೆ 2 ಕೆ.ಜಿ. 250 ಗ್ರಾಂ ಮತ್ತು 6 ರಿಂದ 10 ರವರೆಗಿನ ಮಕ್ಕಳಿಗೆ 3 ಕೆ.ಜಿ. 500 ಗ್ರಾಂ ತೊಗರಿ ಬೇಳೆಯನ್ನು ಮಾತ್ರ ವಿತರಿಸಲಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಗೈರು ಹಾಜರಾತಿಯಿಂದಾಗಿ ಶೇ.5ರಷ್ಟು ಆಹಾರ ಧಾನ್ಯ ವಿತರಣೆಯಾಗದೆ ಉಳಿಕೆಯಾಗಿದೆ. ಬಹುತೇಕ ಶಾಲೆಗಳಲ್ಲಿ ಶಾಲಾಬಿವೃದ್ಧಿ ಸಮಿತಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖ ದಲ್ಲಿಯೇ ಆಹಾರ ಪದಾರ್ಥಗಳ ವಿತರಣೆ ಮಾಡ ಲಾಗಿದೆ. ಇದರಿಂದ ಆರೋಪಗಳು ಕೇಳಿ ಬಂದಿಲ್ಲ.

ಬಿಸಿಯೂಟದ ಪ್ರಯೋಜನಗಳೇನು?: ನ್ಯಾಯಾಲಯದ ಸೂಚನೆ ಮೇರೆಗೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭವಾದ ಮೇಲೆ ಮಕ್ಕಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗಿದೆ. ಇದರಿಂದ ಕಡ್ಡಾಯ ಶಿಕ್ಷಣಕ್ಕೆ ಒತ್ತು ಸಿಕ್ಕಂತಾಗಿದೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಪೌಷ್ಟಿಕತೆ ಕಡಿಮೆಯಾಗಿ ಮಕ್ಕಳ ಆರೋಗ್ಯ ಸುಧಾರಿಸಿದೆ. ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ತೀರಾ ಕಡಿಮೆ ಯಾಗುವಂತಾಗಿದೆ.

ಬಿಸಿಯೂಟ ನೌಕರರೆಷ್ಟು? : ಕೋಲಾರ ಜಿಲ್ಲೆಯಲ್ಲಿ 3,640 ಮಂದಿ ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳ ವರೆಗೂ ನಿಗದಿತ ಗೌರವ ಧನವನ್ನು ಬಿಡುಗಡೆ ಮಾಡಿ ಹಂಚಿಕೆ ಮಾಡಲಾಗಿದೆ. ಉಳಿದಂತೆ ಬಿಸಿ ಯೂಟ ನೌಕರರು ಆಕ್ಟೋಬರ್‌ ಮತ್ತು ಸೆಪ್ಟೆಂ ಬರ್‌ ತಿಂಗಳ ಗೌರವ ಧನಕ್ಕಾಗಿ ಕಾಯುತ್ತಿದ್ದಾರೆ. ವೇತನ ಬಿಡುಗಡೆಗೆ ಬೇಡಿಕೆಯೂ ಹೆಚ್ಚಾಗುತ್ತಿದೆ.

ಕೇಂದ್ರದ ಧಾನ್ಯ ಬಂದಿದೆ, ರಾಜ್ಯದ ಪಾಲಿಲ್ಲ  : ಕೋಲಾರ ಜಿಲ್ಲೆಯಲ್ಲಿ ಬಿಸಿಯೂಟಕ್ಕೆ ಅರ್ಹವಾಗಿರುವ ಮಕ್ಕಳ ಪೈಕಿ 1 ರಿಂದ 8 ನೇ ತರಗತಿಯವರೆಗಿನ ಮಕ್ಕಳಿಗೆ ಕೇಂದ್ರ ಸರ್ಕಾರವು ಅಕ್ಕಿ ಮತ್ತು ಗೋಧಿಯನ್ನು ಬಿಡುಗಡೆ ಮಾಡು ತ್ತಿದ್ದು, ಕೇಂದ್ರದ ಪಾಲಿನ 6,259 ಕ್ವಿಂಟಲ್‌ ಅಕ್ಕಿ ಮತ್ತು 1,388 ಕ್ವಿಂಟಲ್‌ ಗೋಧಿ ಸೇರಿದಂತೆ ಒಟ್ಟು 7,647 ಕ್ವಿಂಟಲ್‌ ಅಕ್ಕಿ ಗೋಧಿ ಮಂಜೂ ರಾಗಿದೆ. ಆದರೆ, 9 ರಿಂದ 10 ನೇ ತರಗತಿಯ ಮಕ್ಕಳಿಗೆ ರಾಜ್ಯ ಸರ್ಕಾರವು ಬಿಸಿಯೂಟ ಒದಗಿಸುವ ಜವಾಬ್ದಾರಿ ಹೊತ್ತುಕೊಂಡಿದ್ದು, 1,868 ಕ್ವಿಂಟಲ್‌ ಅಕ್ಕಿ ಕುರಿತಂತೆ ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಪ್ರಕಟವಾಗಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ಆಹಾರ ಪದಾರ್ಥವಿತರಣೆ ನನೆಗುದಿಗೆ ಬೀಳುವಂತಾಗಿದೆ.

ವಾರ್ಷಿಕ ಬೇಡಿಕೆ :  ಕೋಲಾರ ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಗೆ ಅರ್ಹವಾಗಿರುವ ಎಲ್ಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಹಾಕಲು ವಾರ್ಷಿಕ ಅಂದಾಜು 37,472 ಕ್ವಿಂಟಲ್‌ ಅಕ್ಕಿ, 6,398 ಕ್ವಿಂಟಲ್‌ ಗೋಧಿ, 8,774 ಕ್ವಿಂಟಲ್‌ ತೊಗರಿ ಬೇಳೆ, 2,10,179 ಲೀಟರ್‌ ಎಣ್ಣೆ ಮತ್ತು 5,81,688 ಕೆ.ಜಿ. ಹಾಲಿನ ಪುಡಿಗೆ ಬೇಡಿಕೆ ಇದೆ.

ಕೋಲಾರ ಜಿಲ್ಲೆಯ ಮಕ್ಕಳಿಗೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆಹಾರ ಪದಾರ್ಥಗಳ ವಿತರಣೆಗೆ ಕ್ರಮ ಜೊತೆಗೆ ರಾಜ್ಯದ ಪಾಲಿನ 1868 ಕ್ವಿಂಟಲ್‌ ಅಕ್ಕಿ ಕೂಡಲೇ ಬಿಡುಗಡೆ ಮಾಡಿ ಬಡ ಮಕ್ಕಳಿಗೆ ಹಂಚಿಕೆ ಮಾಡಲು ತುರ್ತು ಕ್ರಮ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕೆ.ಶ್ರೀನಿವಾಸಗೌಡ, ಶಾಸಕರು, ಕೋಲಾರ

ಕೋಲಾರ ಜಿಲ್ಲೆಯಲ್ಲಿ ಜೂನ್‌ ತಿಂಗಳ ನಂತರದಿಂದಲೂ ಆಹಾರ ಪದಾರ್ಥ ಗಳನ್ನು ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಾಗಿ ವಿತರಿಸಲು ಸಿದ್ಧವಾಗಿದ್ದೇವೆ. ಆದರೆ ಸರ್ಕಾರದ ಆದೇಶಕ್ಕಾಗಿ ಕಾಯ ಲಾಗುತ್ತಿದೆ. ಶಾಲೆ ಆರಂಭವಾದಲ್ಲಿ ಬಿಸಿಯೂಟ ಪ್ರಕ್ರಿಯೆ ಆರಂಭವಾಗಲಿದೆ. ಸಿ.ವಿ.ತಿಮ್ಮರಾಯಪ್ಪ, ಜಿಲ್ಲಾ ಬಿಸಿಯೂಟ ಅನುಷ್ಠಾನಾಧಿಕಾರಿ, ಕೋಲಾರ

ಶಾಲೆಗಳಲ್ಲಿ ದಾಸ್ತಾನು ಉಳಿಸಿಕೊಳ್ಳದಂತೆ ಸರ್ಕಾರದ ಆದೇಶದಂತೆ ಮೇ ತಿಂಗಳವರೆವಿಗೂ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ವಿತರಿಸಲು ಸೂಚಿಸಲಾಗಿತ್ತು. ಅದರಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳ ಸಮ್ಮುಖ ದಲ್ಲಿಯೇ ಬಿಸಿಯೂಟ ಆಹಾರ ಪದಾರ್ಥಗಳ ಹಂಚಿಕೆಯೂ ಆಗಿದೆ. ಜಯರಾಮರೆಡ್ಡಿ, ಡಿಡಿಪಿಐ, ಕೋಲಾರ

ಸರ್ಕಾರದ ಸೂಚನೆಯಂತೆ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಆಹಾರ ಪದಾರ್ಥಗಳನ್ನು ನಿಗದಿತ ಅಳತೆಯಂತೆ ನಮ್ಮ ಸಮ್ಮುಖದಲ್ಲಿಯೇ ಮುಖ್ಯೋಪಾ ಧ್ಯಾಯರು, ಶಿಕ್ಷಕರು ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಮುನಿಯಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಅರಾಭಿಕೊತ್ತನೂರು ಸ. ಪ್ರೌಢ ಶಾಲೆ

 

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next