Advertisement

ಇನ್ನೂ ಮುಗಿದಿಲ್ಲ ಕಬ್ಬು ಬಾಕಿ ಪಾವತಿ ಗೊಂದಲ

06:10 AM Dec 09, 2018 | |

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 39 ಕೋಟಿ ರೂ.ಮಾತ್ರ ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರ
ಹೇಳುತ್ತಿದ್ದರೆ, ಕಾರ್ಖಾನೆಗಳಿಂದ 619 ಕೋಟಿ ರೂ.ಬಾಕಿ ಬರಬೇಕಿದೆ ಎಂದು ಕಬ್ಬು ಬೆಳೆಗಾರರು ಹೇಳುತ್ತಿದ್ದಾರೆ. ಇದರಿಂದ ಸೃಷ್ಟಿಯಾಗಿರುವ ಗೊಂದಲದಿಂದಾಗಿ ಕಬ್ಬು ಬೆಳೆಗಾರರು ಹಾಗೂ ಸರ್ಕಾರದ ನಡುವೆ ಹಗ್ಗ ಜಗ್ಗಾಟ ಮುಂದುವರಿದೆ.

Advertisement

ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ನಡುವಿನ ಲಿಖೀತ ಒಪ್ಪಂದ ಪಾಲನೆ ಯಾಗದಿದ್ದರಷ್ಟೇ ಕ್ರಮ ಜರುಗಿಸಬಹುದಾಗಿದೆ ಎಂದು ಸರ್ಕಾರ ಹೇಳುತ್ತಿದೆ.ಆದರೆ, ಮೌಖೀಕ ಭರವಸೆ ನೀಡಿರುವುದಾಗಿ ಒಪ್ಪಿಕೊಂಡಿರುವ ಕಾರ್ಖಾನೆ ಮಾಲೀಕರಿಂದ ಬಾಕಿ ಕೊಡಿಸಬೇಕು ಎಂಬುದು ಕಬ್ಬು ಬೆಳೆಗಾರರ ಒತ್ತಾಯ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಂದ ಬಾಕಿಯಿ ರುವ ಒಟ್ಟು 619 ಕೋಟಿ ರೂ.ಕೊಡಿಸ ಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 17.24 ಕೋಟಿ ರೂ. ಮಾತ್ರ ಬಾಕಿಯಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವಿನ ಲಿಖೀತ ಒಪ್ಪಂದದಂತೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಮೊತ್ತ ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬಹುದು. ಆದರೆ,ಲಿಖೀತ ಒಪ್ಪಂದವಿಲ್ಲದೆ ಮೌಖೀಕ ಮಾತುಕತೆ ಆಧರಿಸಿ ಬಾಕಿ ಪಾವತಿಸುವಂತೆ ಸರ್ಕಾರ ಸೂಚಿಸಲು ಸಾಧ್ಯವಿಲ್ಲ. ಒಂದೊಮ್ಮೆ ಸರ್ಕಾರ ಕ್ರಮ ಕೈಗೊಂಡರೂ ಅದನ್ನು ಕಾರ್ಖಾನೆ ಮಾಲೀಕರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಬಾಕಿ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಮೂರು ತಿಂಗಳ ಹಿಂದೆ ನೋಟಿಸ್‌ ನೀಡಲಾಗಿತ್ತು. ಇತ್ತೀಚೆಗೆ ಯಾವುದೇ ಕಾರ್ಖಾನೆಗೆ
ನೋಟಿಸ್‌ ನೀಡಿಲ್ಲ ಎಂದು ಕಬ್ಬು ಅಭಿವೃದಿಟಛಿ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.

ಕಬ್ಬು ಬೆಳೆಗಾರರು ಇತ್ತೀಚೆಗೆ ಹೋರಾಟ ಆರಂಭಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳ ಸಭೆ ನಡೆಸಿ ಬಾಕಿ ಪಾವತಿಗೆ ಸೂಚಿಸಿದ್ದರು. ಅಲ್ಲದೆ, ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಸಭೆಗಳನ್ನು ನಡೆಸಿದರೂ ಬಾಕಿ ಪಾವತಿಗೆ ಸಂಬಂಧಪಟ್ಟಂತೆ ಗೊಂದಲ ಮಾತ್ರ ನಿವಾರಣೆಯಾಗಿಲ್ಲ.

ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗಳಿಂದ 17.24 ಕೋಟಿ ರೂ.ಹಾಗೂ ಹಿಂದಿನ ವರ್ಷಗಳ ಬಾಕಿ 22.24 ಕೋಟಿ ರೂ.ಸೇರಿ ಒಟ್ಟು 39 ಕೋಟಿ ರೂ.ಬಾಕಿಯಿದ್ದು, ಕೂಡಲೇ ಪಾವತಿಸುವಂತೆ ಕೈಗಾರಿಕೆಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಕಾರ್ಖಾನೆಗಳು ರೈತರಿಗೆ ನೀಡಿರುವ ಭರವಸೆಯಂತೆ 619 ಕೋಟಿ ರೂ.ಪಾವತಿಸಬೇಕಿದ್ದು,ಅದರ ತ್ವರಿತ ಪಾವತಿಗೆ ಸರ್ಕಾರ ಕ್ರಮ
ಕೈಗೊಳ್ಳಬೇಕು ಎಂಬುದು ಕಬ್ಬು ಬೆಳೆಗಾರರ ಆಗ್ರಹ.

Advertisement

ಕೇಂದ್ರ ಸರ್ಕಾರದ ಕ್ರಮದಿಂದಲೂ ತೊಂದರೆ: ಈ ಹಿಂದೆ ಪ್ರತಿ ಟನ್‌ ಕಬ್ಬಿನಿಂದ ಪಡೆಯುವ ಸಕ್ಕರೆ ಇಳುವರಿ ಪ್ರಮಾಣವನ್ನು ಶೇ.9.5ರಷ್ಟಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿತ್ತು. ಇದರಿಂದ ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಕಬ್ಬು ಬೆಳೆಗಾರರಿಗೂ ಅನುಕೂಲಕರವಾಗಿತ್ತು. ಆದರೆ, ಕೇಂದ್ರ ಸರ್ಕಾರವು ಪ್ರತಿ ಟನ್‌ ಕಬ್ಬಿನಿಂದ ಪಡೆಯುವ ಸಕ್ಕರೆ ಇಳುವರಿ ಪ್ರಮಾಣವನ್ನು ಶೇ.10ಕ್ಕೆ ಏರಿಕೆ ಮಾಡಿರುವುದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದ್ದು, 2,750 ರೂ.ಎಫ್ ಆರ್‌ಪಿ ದರವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗದೆ ನಷ್ಟವಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಸಕ್ಕರೆ ಇಳುವರಿ ಪ್ರಮಾಣವನ್ನು ಹಿಂದಿನಂತೆ ಶೇ.9.5ಕ್ಕೆ ಇಳಿಸಬೇಕು.ಇಲ್ಲದಿದ್ದರೆ ರಾಜ್ಯ ಸರ್ಕಾರ ಎಫ್ಆರ್‌ಪಿ ದರದ ಜತೆಗೆ 300ರೂ. ಸೇರಿಸಿ ಕೊಡಬೇಕು ಎಂಬುದು ಕಬ್ಬು ಬೆಳೆಗಾರರ ಒತ್ತಾಯ.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ 619 ಕೋಟಿ ರೂ. ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಎಫ್ಆರ್‌ಪಿ ದರದ ಮೇಲೆ 300 ರೂ. ಸೇರಿಸಿ ನೀಡಬೇಕು. ಸಾಲ ಮನ್ನಾ ಕುರಿತಾದ ಗೊಂದಲಗಳನ್ನು ನಿವಾರಿಸಿ ತ್ವರಿತವಾಗಿ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಆರಂಭಿಸಲಾಗುವುದು. ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.
– ಕುರುಬೂರು ಶಾಂತಕುಮಾರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next