ಹುಣಸೂರು: ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ತಾಲೂಕಿನ 30 ಸಾವಿರ ಮನೆಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಕುರಿತಾದ ಸ್ಟಿಕರ್ ಅಂಟಿಸುವ ಅಭಿಯಾನ ಮಂಗಳವಾರದಿಂದ ಆರಂಭಗೊಳ್ಳಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಚುನಾವಣಾ ನೋಡಲ್ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ವೀಪ್ ಸಮಿತಿ ವತಿಯಿಂದ ಚುನಾವಣಾ ಸಾಕ್ಷರತಾ ಕ್ಲಬ್ ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ 20ಕ್ಕೂ ಮತಗಟ್ಟೆಗಳು ಅತ್ಯಂತ ಕಡಿಮೆ ಮತದಾನಗೊಂಡ ಮತಗಟ್ಟೆಗಳಾಗಿವೆ. ಈ ಪೈಕಿ ನಲ್ಲೂರುಪಾಲ ಮೊದಲ ಸ್ಥಾನದಲ್ಲಿದ್ದು, ಎಂ.ಆರ್.ಹೊಸಳ್ಳಿ ಎರಡನೇ ಸ್ಥಾನದಲ್ಲಿದೆ.
ಹುಣಸೂರು ಪಟ್ಟಣ ವ್ಯಾಪ್ತಿಯ 8 ಮತಗಟ್ಟೆಗಳು ಕಡಿಮೆ ಮತದಾನ ಹೊಂದಿವೆ. ಇದಲ್ಲದೇ ಸೂಕ್ಷ್ಮ ಮತಗಟ್ಟೆಗಳು, ಹಾಡಿಗಳು, ಕುಗ್ರಾಮಗಳು ಮುಂತಾದ ಸ್ಥಳಗಳನ್ನು ಗುರುತಿಸಲಾಗಿದೆ. ಮಾ.19ರಿಂದ ಮಾ.23ರವರೆಗೆ ತಾಲೂಕಿನಾದ್ಯಂತ ಈ ಎಲ್ಲಾ ಭಾಗದ 30 ಸಾವಿರ ಕುಟುಂಬದ ಮನೆಗಳಿಗೆ ಆಶಾ, ಆಂಗನವಾಡಿ ಕಾರ್ಯಕರ್ತೆಯರು ಹಾಗು ನೀರುಗಂಟಿಗಳ ಮೂಲಕ ತೆರಳಿ ಮನೆ ಬಾಗಿಲಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುವುದು ಎಂದು ಹೇಳಿದರು.
ಎಚ್ಚರವಹಿಸಿ: ಈ ಅಭಿಯಾಣಕ್ಕೆ ಮತಗಟ್ಟೆ ಅಧಿಕಾರಿಗಳು(ಬಿಎಲ್‌ಒ) ಸಾಥ್ ನೀಡಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ಯಾವುದೇ ರಾಜಕೀಯ ಪಕ್ಷ, ವ್ಯಕ್ತಿಯೊಂದಿಗೆ ಹೆಚ್ಚಿನ ಸಂಬಂಧ ಬೇಡ. ಇದರಿಂದ ಹುದ್ದೆಯನ್ನೇ ಕಳೆದುಕೊಳ್ಳುವ ಉದಾಹರಣೆ ಮೈಸೂರಿನಲ್ಲಿ ಸಂಭವಿಸಿದೆ ಎಚ್ಚರಿಕೆಯಿಂದ ಅಧಿಕಾರಿಯಾಗಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಾಗರಾಜ್, ಸಿಡಿಪಿಒ ನವೀನ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್ ಹಾಗೂ ಬಿಎಲ್‌ಒಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮನೆಗಳ ಬಾಗಿಲಿಗೆ ಅಂಟಿಸುವ ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಲಾಯಿತು.