Advertisement

ಶತಕದೊಂದಿಗೆ ವರ್ಷ ಮುಗಿಸಿದ ಸ್ಮಿತ್‌

06:25 AM Dec 31, 2017 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ 23ನೇ ಟೆಸ್ಟ್‌ ಶತಕದೊಂದಿಗೆ ವರ್ಷವನ್ನು ಮುಗಿಸಿದ್ದಾರೆ. ಇದರೊಂದಿಗೆ 2017ರ “ಟೆಸ್ಟ್‌ ದಿನ’ಗಳೆಲ್ಲ ಮುಗಿದಿದ್ದು, ಬಹು ನಿರೀಕ್ಷೆಯ ಬಾಕ್ಸಿಂಗ್‌ ಡೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಆಸ್ಟ್ರೇಲಿಯ 3-0 ಆ್ಯಶಸ್‌ ಮುನ್ನಡೆ ಕಾಯ್ದುಕೊಂಡಿದೆ. ವರ್ಷಾಂತ್ಯದಲ್ಲಿ ಗೆಲುವಿನ ನಗೆ ಚಿಮ್ಮಿಸುವ ಕನಸು ಕಾಣುತ್ತಿದ್ದ ಇಂಗ್ಲೆಂಡಿಗೆ ನಿರಾಸೆಯಾಗಿದೆ.

Advertisement

164 ರನ್‌ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯ, 4ನೇ ದಿನದಾಟದ ಕೊನೆಯಲ್ಲಿ 2 ವಿಕೆಟಿಗೆ 103 ರನ್‌ ಮಾಡಿತ್ತು. ಅಂತಿಮ ದಿನವಾದ ಶನಿವಾರ ಬ್ಯಾಟಿಂಗ್‌ ಮುಂದುವರಿಸಿ 4 ವಿಕೆಟಿಗೆ 263 ರನ್‌ ಮಾಡಿ ಡಿಕ್ಲೇರ್‌ ಮಾಡಿತು. ಆಗಷ್ಟೇ ಸ್ಮಿತ್‌ ಶತಕ ಪೂರ್ತಿಗೊಂಡಿತ್ತು, ದಿನದಾಟದ ಅವಧಿಯೂ ಕೊನೆಗೊಂಡಿತ್ತು. ಹೀಗಾಗಿ ಇಂಗ್ಲೆಂಡಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಸಿಗಲಿಲ್ಲ.

ಸ್ಮಿತ್‌ ನಿಧಾನ ಗತಿಯ ಆಟ
ವರ್ಷದುದ್ದಕ್ಕೂ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ತೋರ್ಪಡಿಸಿದ ಸ್ಟೀವನ್‌ ಸ್ಮಿತ್‌ ಅಜೇಯ 102 ರನ್‌ ಬಾರಿಸಿ ಮೆರೆದರೆ, ಅವರ ಜತೆಗಾರ ಡೇವಿಡ್‌ ವಾರ್ನರ್‌ 86 ರನ್ನಿಗೆ ಔಟಾಗಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ವಾರ್ನರ್‌ ಮೊದಲ ಸರದಿಯಲ್ಲಿ 103 ರನ್‌ ಹೊಡೆದಿದ್ದರು. ಔಟಾದ ಮತ್ತೂಬ್ಬ ಆಟಗಾರ ಶಾನ್‌ ಮಾರ್ಷ್‌ (4). ಮಿಚೆಲ್‌ ಮಾರ್ಷ್‌ 29 ರನ್‌ ಮಾಡಿ ಅಜೇಯರಾಗಿ ಉಳಿದರು.

ಸ್ಟೀವನ್‌ ಸ್ಮಿತ್‌ 25 ರನ್ನಿನಿಂದ ದಿನದಾಟ ಮುಂದುವರಿಸಿದ್ದರು. ಅತ್ಯಂತ ನಿಧಾನ ಗತಿಯಲ್ಲಿ ಬ್ಯಾಟಿಂಗ್‌ ಮಾಡಿದ ಅವರು 50 ರನ್ನಿಗಾಗಿ 151 ರನ್‌ ತೆಗೆದುಕೊಂಡರು. 100 ರನ್ನಿಗೆ 259 ಎಸೆತ ಎದುರಿಸಿದರು. ಇದು ಅವರ 2ನೇ ಅತಿ ನಿಧಾನ ಗತಿಯ ಶತಕ. ಒಟ್ಟು 438 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡ ಸ್ಮಿತ್‌, 275 ಎಸೆತ ನಿಭಾಯಿಸಿದರು. ಹೊಡೆದದ್ದು ಆರೇ ಬೌಂಡರಿ.

ಇದು ಸ್ಮಿತ್‌ ಅವರ 23ನೇ ಶತಕ. ಈ ವರ್ಷ ಬಾರಿಸಿದ 6ನೇ ಶತಕವಾದರೆ, ಆ್ಯಶಸ್‌ ಸರಣಿಯಲ್ಲಿ ಹೊಡೆದ 3ನೇ ಸೆಂಚುರಿ. ಇದರೊಂದಿಗೆ ಪ್ರಸಕ್ತ ಸರಣಿಯಲ್ಲಿ ಸ್ಮಿತ್‌ 600 ರನ್ನುಗಳ ಗಡಿ ದಾಟಿದ ಸಾಧನೆಗೈದರು (604 ರನ್‌). ಈ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ನಡೆಯಬೇಕಿದ್ದು, ನೂತನ ವರ್ಷದ ಟೆಸ್ಟ್‌ ಜ. 4ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ.

Advertisement

ವಾರ್ನರ್‌-ಸ್ಮಿತ್‌ ಜತೆಯಾಟದಲ್ಲಿ 3ನೇ ವಿಕೆಟಿಗೆ 107 ರನ್‌ ಒಟ್ಟುಗೂಡಿತು. ವಾರ್ನರ್‌ 86 ರನ್‌ ಮಾಡಿ ರೂಟ್‌ಗೆ ವಿಕೆಟ್‌ ಒಪ್ಪಿಸಿದರು. ಸ್ಮಿತ್‌ ಅವರಂತೆ ವಾರ್ನರ್‌ ಆಟವೂ ನಿಧಾನ ಗತಿಯಿಂದ ಕೂಡಿತ್ತು. ಒಟ್ಟು 227 ಎಸೆತ ಎದುರಿಸಿದ ಅವರು 8 ಬೌಂಡರಿ ಹೊಡೆದರು. ಇದರೊಂದಿಗೆ ಈ ಸರಣಿಯಲ್ಲಿ ವಾರ್ನರ್‌ ಬಾರಿಸಿದ ರನ್‌ 385ಕ್ಕೆ ಏರಿತು. ವಾರ್ನರ್‌ ಮತ್ತು ಶಾನ್‌ ಮಾರ್ಷ್‌ ವಿಕೆಟ್‌ 6 ರನ್‌ ಅಂತರದಲ್ಲಿ ಉರುಳಿತು. ಅಂತಿಮ ದಿನ ಸುಮಾರು 80 ಓವರ್‌ ಎಸೆದ ಇಂಗ್ಲೆಂಡಿಗೆ ದಕ್ಕಿದ್ದು ಈ 2 ಯಶಸ್ಸು ಮಾತ್ರ. ದ್ವಿಶತಕವೀರ ಅಲಸ್ಟೇರ್‌ ಕುಕ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-327 ಮತ್ತು 4 ವಿಕೆಟಿಗೆ 263 ಡಿಕ್ಲೇರ್‌ (ಸ್ಮಿತ್‌ ಔಟಾಗದೆ 102, ವಾರ್ನರ್‌ 86, ರೂಟ್‌ 1ಕ್ಕೆ 1, ಬ್ರಾಡ್‌ 44ಕ್ಕೆ 1, ಆ್ಯಂಡರ್ಸನ್‌ 46ಕ್ಕೆ 1). ಪಂದ್ಯಶ್ರೇಷ್ಠ: ಅಲಸ್ಟೇರ್‌ ಕುಕ್‌.

ಸ್ಮಿತ್‌ ವರ್ಷದ ಸಾಧಕ
* ಸ್ಟೀವನ್‌ ಸ್ಮಿತ್‌ 2017ರ ಟೆಸ್ಟ್‌ ಪಂದ್ಯಗಳಲ್ಲಿ ಸರ್ವಾಧಿಕ 1,305 ರನ್‌ ಪೇರಿಸಿದ ಸಾಧನೆಗೈದರು. ಅವರು ಈ ವರ್ಷ ಅತ್ಯಧಿಕ ರನ್‌ ಗಳಿಸಿದ ನಾಯಕನೂ ಹೌದು. ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ದ್ವಿತೀಯ ಸ್ಥಾನ (1,059 ರನ್‌).
* ಸ್ಮಿತ್‌ ಒಟ್ಟು 23ನೇ, ನಾಯಕನಾಗಿ 15ನೇ ಶತಕ ಹೊಡೆದರು.
* ಸ್ಮಿತ್‌ 1938ರ ಬಳಿಕ ಆ್ಯಶಸ್‌ ಸರಣಿಯೊಂದರಲ್ಲಿ 3 ಶತಕ ಹೊಡೆದ ಆಸ್ಟ್ರೇಲಿಯದ ಮೊದಲ ನಾಯಕನಾಗಿ ಮೂಡಿಬಂದರು. ಅಂದು ಡಾನ್‌ ಬ್ರಾಡ್‌ಮನ್‌ ಈ ಸಾಧನೆಗೈದಿದ್ದರು.
* ಸ್ಮಿತ್‌ ಆ್ಯಶಸ್‌ ಸರಣಿಯೊಂದರಲ್ಲಿ 3 ಶತಕ ಹೊಡೆದ 4ನೇ ನಾಯಕ. ಉಳಿದವರೆಂದರೆ ಆಸ್ಟ್ರೇಲಿಯದ ವಾರ್ವಿಕ್‌ ಆರ್ಮ್ಸ್ಟ್ರಾಂಗ್‌ (1920-21), ಡಾನ್‌ ಬ್ರಾಡ್‌ಮನ್‌ (2 ಸಲ, 1936-37 ಮತ್ತು 1938) ಮತ್ತು ಇಂಗ್ಲೆಂಡಿನ ಡೇವಿಡ್‌ ಗೋವರ್‌ (1985).
* ಸ್ಮಿತ್‌ 110 ಇನ್ನಿಂಗ್ಸಿನಲ್ಲಿ 23 ಶತಕ ಪೂರ್ತಿಗೊಳಿಸಿದರು. ಇನ್ನಿಂಗ್ಸ್‌ ಲೆಕ್ಕಾಚಾರದಲ್ಲಿ ಇದು 3ನೇ ಅತಿ ವೇಗದ ಸಾಧನೆ. ಬ್ರಾಡ್‌ಮನ್‌ (59 ಇನ್ನಿಂಗ್ಸ್‌) ಮತ್ತು ಗಾವಸ್ಕರ್‌ (109 ಇನ್ನಿಂಗ್ಸ್‌) ಮೊದಲೆರಡು ಸ್ಥಾನದಲ್ಲಿದ್ದಾರೆ.
* ಸ್ಮಿತ್‌ ತವರಿನಲ್ಲಿ 3 ಸಾವಿರ ರನ್‌ ಪೂರ್ತಿ ಮಾಡಿದರು. ಇದು ತವರಿನಲ್ಲಿ ಸ್ಮಿತ್‌ ಆಡಿದ 49ನೇ ಟೆಸ್ಟ್‌. ಸ್ವದೇಶದಲ್ಲಿ ಆಡಿದ ಕಡಿಮೆ ಟೆಸ್ಟ್‌ ಲೆಕ್ಕಾಚಾರದಲ್ಲಿ ಅವರಿಗೆ ಪಾಕಿಸ್ಥಾನದ ಜಾವೇದ್‌ ಮಿಯಾಂದಾದ್‌ ಜತೆ ಜಂಟಿ 2ನೇ ಸ್ಥಾನ. ಬ್ರಾಡ್‌ಮನ್‌ 37 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
* ಸ್ಮಿತ್‌ ಈವರೆಗಿನ 40 ಆ್ಯಶಸ್‌ ಇನ್ನಿಂಗ್ಸ್‌ಗಳಲ್ಲಿ 1,943 ರನ್‌ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 5 ಅರ್ಧ ಶತಕ ಸೇರಿದೆ.
* ಸ್ಮಿತ್‌ 40 ಹಾಗೂ ಇದಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 8 ಆ್ಯಶಸ್‌ ಶತಕ ಹೊಡೆದ 6ನೇ ಬ್ಯಾಟ್ಸ್‌ಮನ್‌. ಬ್ರಾಡ್‌ಮನ್‌ 29 ಇನ್ನಿಂಗ್ಸ್‌ಗಳಲ್ಲಿ 8 ಶತಕ ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next