ಬೆಹ್ರಾಂಪುರ:ಒಡಿಶಾದ ಬೆಹ್ರಾಂಪುರದ ವ್ಯಕ್ತಿಯೊಬ್ಬನ ಗುದದ್ವಾರದಿಂದ ಸ್ಟೀಲ್ ಗ್ಲಾಸ್ ಅನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಇದೆಂಥಾ ಕತೆ ಎಂದು ಅಚ್ಚರಿಪಡಬೇಡಿ. ಇದೆಲ್ಲಾ ಗುಂಡಿನ ಗಮ್ಮತ್ತಿನ ಆಪತ್ತು ಸ್ವಾಮಿ!
ಗುಜರಾತ್‌ನ ಸೂರತ್‌ನಲ್ಲಿ ಉದ್ಯೋಗದಲ್ಲಿರುವ ಕೃಷ್ಣ ರಾವತ್ (45) ಸ್ನೇಹಿತರ ಜತೆಗೆ ಗುಂಡು ಸೇವನೆಯ ಪಾರ್ಟಿ ಮಾಡಿದ್ದ. ಸಿಕ್ಕಾಪಟ್ಟೆ ಮದ್ಯ ಸೇವಿಸಿ ಅಮಲೇರಿದ್ದ ಕೃಷ್ಣನಿಗೆ ಕುಚೋದ್ಯ ಮಾಡಬೇಕು ಎಂಬ ಕಾರಣಕ್ಕಾಗಿ ಗುದ ದ್ವಾರಕ್ಕೆ ಸ್ಟಿಲ್ ಗ್ಲಾಸ್ ತುರುಕಿ ಬಿಟ್ಟಿದ್ದರು. ಮುಜುಗರಕ್ಕೆ ಒಳಗಾಗಿದ್ದ ಆತನಿಗೆ ನೋವಾಗುತ್ತಿದ್ದರೂ, ಸ್ನೇಹಿತರ ಜತೆಗೆ ಅದನ್ನು ಹಂಚಿಕೊಳ್ಳಲು ನಿರಾಕರಿಸಿದ್ದ. ಹಾಗೂಹೀಗೂ ಅತ ಸೂರತ್ ತೊರೆದು ಸ್ವಂತ ಊರು ಗಂಜಾಂಗೆ ಬಂದ ಕೃಷ್ಣನಿಗೆ ಹೊಟ್ಟೆಯಲ್ಲಿ ವಿಪರೀತ ನೋವು ಉಲ್ಬಣಿಸಿತು.
ಕುಟುಂಬ ಸದಸ್ಯರ ಸಲಹೆ ಮೇರೆಗೆ ಬೆಹ್ರಾಂಪುರದಲ್ಲಿ ಇರುವ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆತನಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.
ಪ್ರೊ.ಚರಣ್ ಪಾಂಡ, ಸಂಜಿತ್ ಕುಮಾರ್ ನಾಯಕ್, ಡಾ.ಸುಬ್ರಲ್ ಬರಾಲ್ ನೇತೃತ್ವದ ವೈದ್ಯರ ತಂಡ ಗುದದ್ವಾರದ ಶಸ್ತ್ರಚಿಕಿತ್ಸೆ ನಡೆಸಿ, ಸ್ಟೀಲ್ ಲೋಟವನ್ನು ಹೊರಗೆ ತೆಗೆದರು. ಸದ್ಯ ಆತನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾನಂತೆ. ಹೀಗಾಗಿ, ಗುಂಡು ಹಾಕಿ ಚಿತ್ತಾಗುವ ಮುನ್ನ ಎಚ್ಚರ!