ಕುಂದಾಪುರ: ಅವಿಭಜಿತ ದ.ಕ .ಜಿಲ್ಲೆಯ ಎಲ್ಲಾ ಸಮಾಜದ ಜನರಿಗೆ ಯಾವುದೇ ತಾರತಮ್ಯವಿಲ್ಲದೇ ಸಹಾಯಹಸ್ತವನ್ನು ನೀಡಿದ ಮೂಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರನ್ನು ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆಗೆ ನಾಮಕರಣ ಮಾಡುವುದಕ್ಕೆ ಎಲ್ಲಾ ಅನುಮತಿ ಹಾಗೂ ಆದೇಶ ದೊರೆತರೂ ಕೊನೆಯ ಕ್ಷಣದಲ್ಲಿ ಅದಕ್ಕೆ ತಡೆಯಾಜ್ಞೆ ತಂದಿರುವ ಕಾರ್ಯ ಖಂಡನೀಯ. ಅವಿಭಜಿತ ಜಿಲ್ಲೆಯ ಅಗ್ರಗಣ್ಯ ವ್ಯಕ್ತಿ ಎಣಿಸಿಕೊಂಡ ಸುಂದರಾಮ ಶೆಟ್ಟಿ ಅವರ ಹೆಸರನ್ನು ಆ ರಸ್ತೆಗೆ ನಾಮಕರಣ ಮಾಡದೇ ಇದ್ದಲ್ಲಿ ಮುಂದಿನ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಬಸೂÅರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ ಹಾಗೂ ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದವರಿಂದ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣ ತಡೆಯಾಜ್ಞೆ ಆಗ್ರಹಿಸಿ ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ಘಟಕ ಇವರ ಆಶ್ರಯದಲ್ಲಿ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಣಿಗೋಪಾಲ ಮಾತನಾಡಿ ಸುಂದರರಾಮ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಅವರ ವ್ಯಕ್ತಿತ್ವ, ಸಾಧನೆ, ಕೊಡುಗೆಯನ್ನು ತಿಳಿಯದವರು ಅವರ ಹೆಸರಿನಲ್ಲಿ ರಸ್ತೆ ನಾಮಕರಣಕ್ಕೆ ತಡೆಯಾಜ್ಞೆ ತಂದಿರುವುದು ಆಕ್ಷೇಪಾರ್ಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಸಂಘ ಕುಂದಾಪುರ ಇದರ ಮಾಜಿ ಅಧ್ಯಕ್ಷ ವೈ.ಎಸ್. ಹೆಗ್ಡೆ ವಹಿಸಿದ್ದರು.
ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ತೊಂಬತ್ತು ಜಯರಾಮ ಶೆಟ್ಟಿ, ಸಮಿತಿಯ ಸಹ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿಗಳಾದ ವಸಂತ ಹೆಗ್ಡೆ, ಸುಧಾಕರ ಶೆಟ್ಟಿ, ಯುವ ಬಮಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.