ಬೆಂಗಳೂರು: ಸ್ವಾಂತಂತ್ರ್ಯ ಉದ್ಯಾನದಲ್ಲಿ ಹುತಾತ್ಮ ಯೋಧ ಗುರು ಅವರ ಪ್ರತಿಮೆ ನಿರ್ಮಿಸುವ ಬಗ್ಗೆ ಮುಂದಿನ ಪಾಲಿಕೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಐದು ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಗುರು ಅವರು ವೀರ ಮರಣ ಹೊಂದಿದ್ದು, ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಾಲಿಕೆಯ 198 ಸದಸ್ಯರ ಒಂದು ತಿಂಗಳ ಗೌರವಧನವನ್ನು ಅವರಿಗೆ ನೀಡಲು ಹಿಂದೆ ನಿರ್ಧರಿಸಲಾಗಿತ್ತು. ಅದರಂತೆ ಇದೀಗ ಚೆಕ್ ನೀಡಲಾಗಿದೆ ಎಂದು ಹೇಳಿದರು.
ಈ ವೇಳೆ ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್ ಹಾಜರಿದ್ದರು.
ನಾಡಿನ ಜನತೆ ನೀಡುತ್ತಿರುವ ಗೌರವವೇ ಸಾಕು: ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮನಾದ ಪುತ್ರನನ್ನು ನೆನೆದು ಕಣ್ಣೀರಿಟ್ಟ ಗುರು ಅವರ ತಂದೆ ಹೊನ್ನಯ್ಯ ಹಾಗೂ ತಾಯಿ ಚಿಕ್ಕತಾಯಮ್ಮ, ಮಗನ ಅಗಲಿಕೆಯಿಂದ ಮನೆಯಲ್ಲಿ ಕತ್ತಲು ಆವರಿಸಿದೆ ಎಂದು ಭಾವುಕರಾದರು.
ಅಳುತ್ತಲೇ ಮಾತನಾಡಿದ ಚಿಕ್ಕತಾಯಮ್ಮ, ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಂಡಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಜಗಳವಿಲ್ಲ. ಆದರೆ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪದೇ ಪದೆ ನಾವು ಕಿತ್ತಾಡಿದ್ದೇವೆ ಎಂದು ತೋರಿಸುತ್ತಿರುವುದು ನೋವುಂಟು ಮಾಡಿದೆ.
ನಾವು ಹಣಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಲ್ಲ. ನಮಗೆ ಎದ್ದು ನಿಲ್ಲುವ ಶಕ್ತಿ ಸಹ ಇಲ್ಲ. ನಮ್ಮ ಮಗನೇ ನಮ್ಮ ಜತೆಯಿಲ್ಲದ ಮೇಲೆ ದುಡ್ಡು ತೆಗೆದುಕೊಂಡು ಏನು ಮೋಡೋಣ ಎಂದ ಅವರು, ನಾಡಿನ ಜನತೆ ನನ್ನ ಮಗನಿಗೆ ನೀಡುತ್ತಿರುವ ಗೌರವವೇ ನಮಗೆ ಸಾಕು ಎಂದರು.