Advertisement

ಆರೋಪಗಳಿಗೆ ಅಂಕಿ-ಅಂಶ ಸಹಿತ ಉತ್ತರ

11:34 AM Dec 28, 2018 | |

ಬೆಂಗಳೂರು: ಬಿಬಿಎಂಪಿ ಬಜೆಟ್‌ ಶೇ.5ರಷ್ಟೂ ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿದ್ದ ಬಿಜೆಪಿಯನ್ನು ಗುರುವಾರ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಅಂಕಿ-ಅಂಶಗಳ ಸಮೇತವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ತಾನು ಮಂಡಿಸಿದ ಬಜೆಟ್‌ನಲ್ಲಿ ಶೇ.5ರಷ್ಟನ್ನೂ ಅನುಷ್ಠಾನಗೊಳಿಸದೆ ನಗರದ ಜನತೆಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದರು. ಅದನ್ನು ಅಲ್ಲಗಳೆದ ಶಿವರಾಜು, ಪ್ರಸಕ್ತ ಸಾಲಿನ ಬಜೆಟ್‌ ಶೇ.45.87ರಷ್ಟು ಅನುಷ್ಠಾನಗೊಂಡಿದೆ. ಆದರೆ, ವಿರೋಧ ಪಕ್ಷದವರು ಪ್ರಚಾರಕ್ಕಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಟೀಕಿಸಿದರು.

ಪಾಲಿಕೆಯ 2018-19ನೇ ಸಾಲಿನ ಬಜೆಟ್‌ನಲ್ಲಿ 10,132 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಆ ಪೈಕಿ 717 ಕೋಟಿ ರೂ. ಆಡಳಿತಾತ್ಮಕ ವೆಚ್ಚ, 487 ಕೋಟಿ ರೂ. ಪಾಲಿಕೆ ಸಿಬ್ಬಂದಿಯ ವೇತನ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ 1,053 ಕೋಟಿ ರೂ. ಬಿಲ್‌ ಪಾವತಿ, ಸಾಲ ಹಾಗೂ ಬಡ್ಡಿ ಪಾವತಿಗಾಗಿ 479 ಕೋಟಿ ರೂ. ನೀಡಲಾಗಿದೆ.

ಇದರೊಂದಿಗೆ ಕಸ ವಿಲೇವಾರಿಗಾಗಿ 453 ಕೋಟಿ ರೂ., ವಾರ್ಡ್‌ ಮಟ್ಟದ ಕಾಮಗಾರಿಗೆ 465 ಕೋಟಿ ರೂ. ನೀಡಿದ್ದು, ಈವರೆಗೆ 4,952 ಕೋಟಿ ರೂ. ವೆಚ್ಚವಾಗಿದೆ. ಜತೆಗೆ ಕಲ್ಯಾಣ ಕಾರ್ಯಕ್ರಮಗಳಿಗೆ 632 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಶೇ.5ರಷ್ಟೂ ಅನುಷ್ಠಾನವಾಗಿಲ್ಲ ಎಂದು ಆರೋಪಿಸುವುದು ಸರಿಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯರಿಗೆ ಹೆಚ್ಚಿನ ಅನುದಾನ: ಪ್ರಸಕ್ತ ಅವಧಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಮೈತ್ರಿ ಆಡಳಿತದ ಸದಸ್ಯರಿಗಿಂತಲೂ ಬಿಜೆಪಿ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಬಿಜೆಪಿ ಸದಸ್ಯರಾದ ತೇಜಸ್ವಿನಿ ಅವರ ವಾರ್ಡ್‌ಗೆ ಅತಿ ಹೆಚ್ಚು, ಅಂದರೆ 165 ಕೋಟಿ ರೂ. ನೀಡಲಾಗಿದೆ. ಅದೇ ರೀತಿ ಬಿಜೆಪಿಯ ಸೋಮಶೇಖರ್‌ ಅವರ ವಾರ್ಡ್‌ಗೆ 145 ಕೋಟಿ ರೂ, ಲೋಕೇಶ್‌ ವರ ವಾರ್ಡ್‌ಗೆ 137 ಕೋಟಿ ರೂ. ರಾಜೇಂದ್ರ ಕುಮಾರ್‌ರ ವಾರ್ಡ್‌ಗೆ 138 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಿವರಾಜು ಮಾಹಿತಿ ನೀಡಿದರು. 

Advertisement

ಅನುದಾನ ಎಲ್ಲಿಗೆ ಹೋಯ್ತು ಲೆಕ್ಕ ಕೊಡಿ: ಬಜೆಟ್‌ ಅನುಷ್ಠಾನವಾಗಿಲ್ಲ ಎನ್ನುವ ಪ್ರತಿಪಕ್ಷ ನಾಯಕರು, ಬಿಜೆಪಿ ಸದಸ್ಯರಿಗೆ ಅನುದಾನವೇ ನೀಡುತ್ತಿಲ್ಲ ಎನ್ನುತ್ತಾರೆ. ಹಾಗಾದರೆ, ಪಾಲಿಕೆಯಿಂದ ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಬಿಡುಗಡೆಯಾದ ಅನುದಾನ ಎಲ್ಲಿಗೆ ಹೋಯಿತು. ಪಾಲಿಕೆಯಿಂದ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ಯಾವುದಕ್ಕೆ ಬಳಸಿದ್ದೀರಾ ಎಂಬದರ ಬಗ್ಗೆ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, “ಬಜೆಟ್‌ ಶೇ.5ರಷ್ಟೂ ಅನುಷ್ಠಾನವಾಗಿಲ್ಲ ಎಂಬ ಆರೋಪಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಕಳೆದ ವರ್ಷ ಯೋಜನೆಗಳಿಗೆ ಬಿಡುಗಡೆಯಾದ ಅಂಕಿ-ಅಂಶಗಳನ್ನು ಆಡಳಿತ ಪಕ್ಷ ನಾಯಕರು ಈ ವರ್ಷದ್ದೆಂದು ಮಾಹಿತಿ ನೀಡುತ್ತಿದ್ದಾರೆ. ಇನ್ನುಳಿದ 1 ತಿಂಗಳಲ್ಲಿ ಬಜೆಟ್‌ ಸಂಪೂರ್ಣವಾಗಿ ಅನುಷ್ಠಾನಗೊಳಿಸುವರೇ ಎಂದು ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು. 

ಆಯುಕ್ತರು ಕೃಷ್ಣ ಪರಮಾತ್ಮ; ಹಾಗಾದರೆ ನೀವು ಕೌರವರೇ?: ಬಜೆಟ್‌ ಅನುಷ್ಠಾನದ ಕುರಿತು ಚರ್ಚೆ ನಡೆಸುವ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಆಯುಕ್ತರು ಕಾಂಗ್ರೆಸ್‌ ಪಕ್ಷದ ವಕ್ತಾರರಿದ್ದಂತೆ. ಕಾಂಗ್ರೆಸ್‌ನವರು ಮಾಡುವಂತಹ ಕುತಂತ್ರಗಳನ್ನು ಸಮರ್ಥನೆ ಮಾಡಿಕೊಂಡು ಅವುಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುವ ಕೃಷ್ಣ ಪರಮಾತ್ಮ ಇದ್ದಂತೆ ಎಂದು ಲೇವಡಿ ಮಾಡಿದರು. ಅದಕ್ಕೆ ಕಾಂಗ್ರೆಸ್‌ ಸದಸ್ಯರು, ಬಿಜೆಪಿಯವರು 101 ಸದಸ್ಯರಿದ್ದೀರಿ. ಹಾಗಾದರೆ, ನೀವು ಕೌರವರೇ? ಎಂದು ಪ್ರಶ್ನಿಸಿದರು.

ಸದಸ್ಯರು ಒಪ್ಪಿದರೆ ಕಾಮಗಾರಿ ನೀಡುವುದಿಲ್ಲ: ಪಾಲಿಕೆಯ ಯೋಜನೆಗಳಿಗೆ ಕೆಆರ್‌ಐಡಿಎಲ್‌ ಪಡೆಯುವ ಕಮಿಷನ್‌ ಬಗ್ಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಚರ್ಚಿಸುವ ವೇಳೆ ಆಯುಕ್ತರು, ಕೆಆರ್‌ಐಡಿಎಲ್‌ಗೆ ಕಾಮಗಾರಿಗಳನ್ನು ನೀಡುವುದು ಬೇಡವೆಂದು ಪಾಲಿಕೆ ಸದಸ್ಯರು ನಿರ್ಣಯ ಕೈಗೊಂಡರೆ ಅದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ವೇಳೆ ಕೆಲವರು ನಿರ್ಣಯ ಕೈಗೊಳ್ಳುವ ವಿಚಾರಕ್ಕೆ ಬೆಂಬಲಿಸಿದರೆ, ಇನ್ನು ಕೆಲವರು ಬೆಂಬಲಿಸದೆ ಕಾಮಗಾರಿ ನೀಡುವಲ್ಲಿನ ಲೋಪಗಳನ್ನು ಸರಿಪಡಿಸಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next