Advertisement

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

01:01 AM Jun 22, 2024 | Team Udayavani |

ಬೆಂಗಳೂರು: ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನವೇ ಸದನದ ಹೊರಗೆ ರಾಜ್ಯ ಸರಕಾರದ ವಿರುದ್ಧ ಸಮರ ಸಾರುವುದಕ್ಕೆ ಬಿಜೆಪಿ ಮುಂದಾಗಿದ್ದು ಪ್ರಮುಖ ನಾಯಕರನ್ನು ಒಳಗೊಂಡ ತಂಡದಿಂದ ಜಿಲ್ಲಾ ಪ್ರವಾಸಕ್ಕೆ ತಯಾರಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜೂ. 27ರಂದು ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ.

Advertisement

ಲೋಕಸಭಾ ಚುನಾವಣೆ ಫ‌ಲಿತಾಂಶದ ಏಳುಬೀಳುಗಳ ಅವಲೋಕನ ನಡೆಸುವುದಕ್ಕೆ ಈ ಹಿಂದೆ ಜಿಲ್ಲಾ ಪ್ರವಾಸ ನಡೆಸುವುದಕ್ಕೆ ಬಿಜೆಪಿ ನಿರ್ಧರಿಸಿತ್ತು. ಆದರೆ ಇದು ಅನುಕೂಲಕರ ಫ‌ಲಿತಾಂಶ ಎಂದು ವರಿಷ್ಠರಿಂದ ಸಂದೇಶ ಬಂದಿದೆ. ಹೀಗಾಗಿ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲು ಜಿಲ್ಲಾ ಪ್ರವಾಸ ನಡೆಸುವುದಕ್ಕೆ ತೀರ್ಮಾನವಾಗಿದ್ದು, ರೂಪು-ರೇಷೆ ಹೇಗಿರಬೇಕೆಂಬ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಬಿಜೆಪಿ ಮೂಲಗಳ ಪ್ರಕಾರ, ವಿಪಕ್ಷ ನಾಯಕ ಆರ್‌. ಅಶೋಕ್‌, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಉಪನಾಯಕ ಅರವಿಂದ ಬೆಲ್ಲದ್‌, ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್‌ ಕುಮಾರ್‌, ಪಿ.ರಾಜೀವ್‌, ನಂದೀಶ್‌ ರೆಡ್ಡಿ, ಪ್ರೀತಮ್‌ ಗೌಡ, ಹಿರಿಯ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಅಭಯ್‌ ಪಾಟೀಲ್‌, ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ, ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಐದು ತಂಡ ರಚಿಸಲು ತೀರ್ಮಾನಿಸಲಾಗಿದೆ. ಸಂಸದರು ಹಾಗೂ ಕೇಂದ್ರ ಸಚಿವರು ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಅನಂತರ ಸೃಷ್ಟಿಯಾಗಿರುವ ಕಾನೂನು-ಸುವ್ಯವಸ್ಥೆ ಸಮಸ್ಯೆ, ಅಭಿವೃದ್ಧಿ ಕಾಮಗಾರಿಗಳ ಹಿನ್ನಡೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುಂಠಿತ ಸೇರಿ ಅನೇಕ ವಿಚಾರಗಳ ಬಗ್ಗೆ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಇದರ ಆಧಾರದ ಮೇಲೆ ಸದನದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ.

ಹಿರಿಯ ನಾಯಕರ ಒತ್ತಡ
ಬೆಲೆ ಏರಿಕೆ ಸೇರಿ ಅನೇಕ ವಿಚಾರಗಳ ಬಗ್ಗೆ ಸಾರ್ವಜನಿಕರು ಸರಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇಂಥ ಸಂದರ್ಭದಲ್ಲಿ ಬಿಜೆಪಿ ತಟಸ್ಥವಾಗಿ ಉಳಿದರೆ ದುರ್ಬಲ ವಿಪಕ್ಷ ಎಂಬ ಭಾವನೆ ಬರುತ್ತದೆ. ಹೀಗಾಗಿ ಹೋರಾಟ ನಡೆಸುವುದು ಸೂಕ್ತ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ಹಿರಿಯ ನಾಯಕರು ಒತ್ತಡ ಹೇರಿದ್ದಾರೆ. ಜತೆಗೆ ತಮ್ಮ ನಾಯಕತ್ವ ಸಾಬೀತುಪಡಿಸಿಕೊಳ್ಳುವುದಕ್ಕೆ ಇದೊಂದು ಅವಕಾಶ ಎಂಬ ಕಾರಣಕ್ಕಾಗಿ ಜಿಲ್ಲಾ ಪ್ರವಾಸ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next