ಹೊಸದಿಲ್ಲಿ: ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಲಸಿಕೆ ಹಾಕಿದ ಅನಂತರದ ಪ್ರತಿಕ್ರಿಯೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಿದ್ಧವಾಗಬೇಕಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ಹೇಳಿದ್ದಾರೆ.
ಲಸಿಕೆ ಸಂಗ್ರಹಿಸಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ಸರಕಾರ ಹೇಳಿದ್ದು, ಈಗಾಗಲೇ 29 ಸಾವಿರ ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಸಿದ್ದಪಡಿಸಲಾಗಿದೆ.
29,000 ಕೋಲ್ಡ್ ಚೈನ್ ಪಾಯಿಂಟ್‌ಗಳು, 240 ವಾಕ್-ಇನ್-ಕೂಲರ್‌ಗಳು, 70 ವಾಕ್-ಇನ್-ಫ್ರೀಜರ್‌ಗಳು, 45 ಸಾವಿರ ಐಸ್-ಲೇನ್ಡ್ ರೆಫ್ರಿಜರೇಟರ್‌ಗಳು, 41 ಸಾವಿರ ಡೀಪ್ ಫ್ರೀಜರ್‌ಗಳು ಸೇರಿದಂತೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಶೇಖರಣೆಗಳಿಗಾಗಿ ಸೌರ ರೆಫ್ರಿಜರೇಟರ್‌ಗಳನ್ನು ಬಳಸಲಾಗುತ್ತದೆ. ಈ ಎಲ್ಲ ಉಪಕರಣಗಳನ್ನು ರಾಜ್ಯಗಳಿಗೆ ರವಾನಿಸಲಾಗಿದೆ.
ಲಸಿಕೆಯ ಪ್ರತಿಕ್ರಿಯೆಯು ಗಂಭೀರ ವಿಷಯವಾಗಿದೆ. ವಿಶ್ವಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮವು ಬಹಳ ದಿನಗಳ ಕಾಲ ಇರಲಿದೆ. ವ್ಯಾಕ್ಸಿನೇಷನ್ ಅನಂತರ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಇದರ ಅಡ್ಡಪರಿಣಾಮಗಳನ್ನು ಕಾಣಬಹುದು. ಹಾಗಂತ ಅಡ್ಡ ಪರಿಣಾಮಗಳು ಆಗಲಿವೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯಗಳು ಸಿದ್ಧವಾಗಿರಬೇಕು. ವ್ಯಾಕ್ಸಿನೇಷನ್ ಪ್ರಾರಂಭವಾದ ದೇಶಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ರಾಜ್ಯಗಳು ಇದಕ್ಕಾಗಿ ಮುಂಚಿತವಾಗಿ ಸಂಪೂರ್ಣವಾಗಿ ಸಿದ್ಧವಾಗಿರುವುದು ಅವಶ್ಯಕ ಎಂದು ಹೇಳಿದ್ದಾರೆ.
ತಂತ್ರಜ್ಞಾನದ ಆಧಾರದ ಮೇಲೆ ಫಿಜರ್-ಬಯೋನೋಟೆಕ್ ಲಸಿಕೆ ಯುಕೆಯಲ್ಲಿ ಅನುಮೋದಿಸಲಾಗಿದೆ. ಅಮೆರಿಕದ ಮತ್ತೊಂದು ಕಂಪೆನಿ ಮಾಡರ್ನಾ ಕೂಡ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಕೋರಿದೆ. ಈ ಎರಡೂ ಲಸಿಕೆಗಳನ್ನು ಮೆಸೆಂಜರ್-ಆರ್‌ಎನ್ಎ ಅಂದರೆ ಎಂಆರ್‌ಎನ್‌ಎ ಆಧಾರಿತ ತಂತ್ರಜ್ಞಾನದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಈ ಎರಡೂ ಲಸಿಕೆಗಳು ಶೇ. 95ರಷ್ಟು ಪರಿಣಾಮಕಾರಿಯಾಗಿದೆ. ಪ್ರಸ್ತುತ ದೇಶದಲ್ಲಿ 6 ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗುತ್ತಿವೆ.