Advertisement

ಯಡಿಯೂರಪ್ಪ ನೇಮಕ; ಹಿಂದೆ ಸರಿದ ರಾಜ್ಯಾಧ್ಯಕ್ಷ ಆಕಾಂಕ್ಷಿಗಳು

05:02 PM Aug 20, 2022 | Team Udayavani |

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸ್ಥಾನಮಾನ ಲಭ್ಯವಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ನಾಯಕರು ಈಗ ಹಿಂದಡಿ ಇಡಲಾರಂಭಿಸಿದ್ದಾರೆ.

Advertisement

ಯಡಿಯೂರಪ್ಪ ನೇಮಕ ತರುವಾಯ ಈಗ ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲ ಕೇಂದ್ರ ಮಟ್ಟದಲ್ಲೂ ಕರ್ನಾಟಕ ವಿದ್ಯಮಾನಕ್ಕೆ ಸಂಬಂಧಪಟ್ಟಂತೆ ಈಗ ಎರಡು ಶಕ್ತಿ ಕೇಂದ್ರಗಳು ಸ್ಥಾಪನೆಯಾದಂತಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಕೂಡಾ ಯಡಿಯೂರಪ್ಪ ಅವರಷ್ಟೇ ಆಯಕಟ್ಟಿನ ಸ್ಥಾನದಲ್ಲಿ ಬಿಜೆಪಿ ಹೈಕಮಾಂಡ್‌ ಕುಳ್ಳಿರಿಸಿದೆ.ಹೀಗಾಗಿ ಈ ಎರಡು ಪ್ರಭಾವಿಗಳ ಮಧ್ಯೆ ಸಿಲುಕಿ ಹೈರಾಣಾಗುವುದಕ್ಕೆ ಬಿಜೆಪಿಯ ಎರಡನೇ ಹಂತದ ನಾಯಕರು ಸಿದ್ದರಿಲ್ಲ.

ಹಾಲಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವಧಿ ಈ ತಿಂಗಳು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಇಂಧನ ಸಚಿವ ವಿ.ಸುನಿಲ್‌ ಕುಮಾರ್‌, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಒಂದು ಕೈ ನೋಡೋಣ ಎಂಬ ಇರಾದೆ ವ್ಯಕ್ತಪಡಿಸಿದ್ದರು.

ಆದರೆ ಯಡಿಯೂರಪ್ಪ ಅವರ ಹಠಾತ್‌ ರಂಗ ಪ್ರವೇಶದಿಂದ ಇವರೆಲ್ಲರೂ ಈಗ ಬಹುತೇಕ ಶಸ್ತ್ರತ್ಯಾಗಕ್ಕೆ ಸಿದ್ದರಾಗಿದ್ದಾರೆ. ಚುನಾವಣಾ ವರ್ಷದಲ್ಲಿ ಟಿಕೆಟ್‌ ಹಂಚಿಕೆ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಜಕೀಯವಾಗಿ ಅನ್ಯ ಪಕ್ಷಗಳನ್ನು ಹಿಮ್ಮೆಟ್ಟಿಸುವುದಕ್ಕೆ ತಂತ್ರಗಾರಿಕೆಯನ್ನೂ ರೂಪಿಸಬೇಕಾಗುತ್ತದೆ. ಆದರೆ ಇಕ್ಕೆಲಗಳಲ್ಲಿ ಪಕ್ಷದ ಇಬ್ಬರು ಹಿರಿಯರು ನಿಂತಾಗ ತಮ್ಮತನ ತೋರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಎರಡನೇ ಹಂತದ ನಾಯಕರು ರಾಜ್ಯಾಧ್ಯಕ್ಷ ಸ್ಥಾನ ಸದ್ಯ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಬಿ.ಎಲ್.ಸಂತೋಷ್‌ ಹಾಗೂ ಯಡಿಯೂರಪ್ಪ ಇಬ್ಬರ ಮಧ್ಯೆ ಹಾಲಿ ಅಧ್ಯಕ್ಷ ಕಟೀಲ್‌ ಸದ್ಯಕ್ಕೆ ಅಧಿಕಾರ ಉಳಿಸಿಕೊಂಡಂತೆ ಕಾಣುತ್ತಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ ಕಟೀಲ್‌ ಅವರ ರಾಜ್ಯ ಪ್ರವಾಸವೂ ಬಹುತೇಕ ಅಂತಿಮಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next