ಹೊಸದಿಲ್ಲಿ/ಬೆಂಗಳೂರು: ಕಾಂಡೋಮ್ ಖರೀದಿ ಕುರಿತು ಸಾಕಷ್ಟು ಜನಜಾಗೃತಿ ಮೂಡಿದ್ದರೂ, ಅಂಗಡಿಗೆ ಹೋಗಿ ಕಾಂಡೋಮ್ ಖರೀದಿ ಮಾಡಲು ನಮ್ಮ ಜನರಿಗೆ ಮುಜುಗರ ಇರುವುದಂತೂ ನಿಜ. ಇದಕ್ಕೆ ಸಾಕ್ಷ್ಯ ಎಂಬಂತೆ ಈಚೆಗೆ ಆನ್‌ಲೈನ್‌ನಲ್ಲಿ ಕಾಂಡೋಮ್ ಖರೀದಿ ಭರಾಟೆ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಕರ್ನಾಟಕ ರಾಜ್ಯ ಮುಂದಿದೆ.
ಬಹಿರಂಗವಾಗಿ ಅಂಗಡಿಗೆ ಹೋಗದೆ ಮನೆಯಲ್ಲೇ ಕೂತು ಕಾಂಡೋಮ್ ಆರ್ಡರ್ ಮಾಡುವುದನ್ನು ಉತ್ತೇಜಿಸಲು ಬೆಂಗಳೂರಿನ ಏಡ್ಸ್ ಹೆಲ್ತ್‌ಕೇರ್ ಫೌಂಡೇಷನ್ ಆರಂಭಿಸಿದ್ದ ಆನ್‌ಲೈನ್ ಶಾಪಿಂಗ್‌ನಲ್ಲಿ ಈ ಟ್ರೆಂಡ್ ಢಾಳಾಗಿ ಕಾಣಿಸಿ ಕೊಂಡಿದೆ. ಏ.28ಕ್ಕೆ ಆರಂಭವಾದ ಈ ಆನ್‌ಲೈನ್ ಸ್ಟೋರ್‌ನಲ್ಲಿ ಇದುವರೆಗೆ ಹತ್ತು ಲಕ್ಷ ಮಾರಾಟವಾಗಿದೆ. ಈ ಪೈಕಿ ಈ ಪೈಕಿ ದಿಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆಯಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕೇವಲ 69 ದಿನಗಳಲ್ಲಿ 10 ಲಕ್ಷ ಕಾಂಡೋಮ್‌ಗಳು ಮಾರಾಟವಾಗಿವೆ. 10 ಲಕ್ಷ ಕಾಂಡೋಮ್ ಪೈಕಿ 5.14 ಲಕ್ಷದಷ್ಟು ಸಮುದಾಯಗಳು ಮತ್ತು ಎನ್‌ಜಿಒಗಳು ಪಡೆದರೆ, ಉಳಿದ ಕಾಂಡೋಮ್‌ಗಳನ್ನು ಜನರು ಖರೀದಿಸಿದ್ದಾರೆ.
ಉಚಿತ ಕಾಂಡೋಮ್‌ಗಳನ್ನು ಹಿಂದುಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ತಯಾರಿಸುತ್ತಿದೆ. ಆನ್‌ಲೈನ್ ಸ್ಟೋರ್‌ಗೆ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಅಚ್ಚರಿಯಾಗಿದೆ. 10 ಲಕ್ಷ ಕಾಂಡೋಮ್‌ಗಳನ್ನು ಡಿಸೆಂಬರ್‌ವರೆಗೆ ವಿತರಿಸಲು ಅಂದಾಜು ಮಾಡಿದ್ದೆವು. ಆದರೆ ಜುಲೈ ಮೊದಲ ವಾರದಲ್ಲೇ ಎಲ್ಲ ಕಾಂಡೋಮ್‌ಗಳು ಖಾಲಿಯಾಗಿದ್ದವು. ಹೀಗಾಗಿ ಮತ್ತೆ 20 ಲಕ್ಷ ಕಾಂಡೋಮ್‌ಗಳಿಗೆ ಆರ್ಡರ್ ಮಾಡಲಾಗಿದ್ದು, ನವೆಂಬರ್ ಕೊನೆಯ ವಾರದಲ್ಲಿ ಲಭ್ಯವಾಗಲಿದೆ. ಅಲ್ಲದೆ ಜನವರಿಗಾಗಿ 50 ಲಕ್ಷ ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ಫೌಂಡೇಶನ್‌ನ ನಿರ್ದೇಶಕ ಡಾ. ವಿ ಶ್ಯಾಮ ಪ್ರಸಾದ್ ಹೇಳಿದ್ದಾರೆ.
ಬಹುತೇಕರು ಕಾಂಡೋಮ್‌ಗಳನ್ನು ಅಂಗಡಿಗೆ ತೆರಳಿ ಖರೀದಿ ಮಾಡಲು ಮುಜುಗರಪಟ್ಟುಕೊಳ್ಳುವುದರಿಂದ ಆನ್‌ಲೈನ್ ತಾಣದ ಮೊರೆಹೋಗಿದ್ದಾರೆ. ಆನ್‌ಲೈನ್ ತಾಣದಲ್ಲಿ ಆರ್ಡರ್ ಮಾಡಿದಾಗ ಅದನ್ನು ವಿತರಿಸುವವರಿಗೆ ಪ್ಯಾಕೇಜ್‌ನಲ್ಲಿ ಏನಿರುತ್ತದೆ ಎಂದು ತಿಳಿದಿರುವುದಿಲ್ಲ. ಹೀಗಾಗಿ ಹೆಚ್ಚಿನ ಜನರು ಆನ್‌ಲೈನ್‌ನಿಂದ ಕಾಂಡೋಮ್ ಖರೀದಿಸುತ್ತಾರೆ ಎನ್ನಲಾಗಿದೆ.