Advertisement

ಜೈಲಿನ ಅಕ್ರಮ ಬಯಲಿಗೆಳೆಯಲು ಎಸಿಬಿಗೆ ದೂರು

12:55 PM Apr 09, 2020 | Karthik A |

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ವಕೀಲ ಎಸ್‌. ನಟರಾಜ್‌ ಶರ್ಮಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಶುಕ್ರವಾರ ದೂರು ನೀಡಿದ್ದಾರೆ. ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ಗೆ ಐಷಾರಾಮಿ ಕೊಠಡಿ ಹಾಗೂ ಇತರ ಸೌಲಭ್ಯ ಕಲ್ಪಿಸಲು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿದ್ದ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಸಹಿತ ಕೆಲವು ಅಧಿಕಾರಿಗಳು 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಡಿಐಜಿ ರೂಪಾ ಮೌದ್ಗಿಲ್‌ ಆರೋಪಿಸಿದ್ದು, ವರದಿಯನ್ನು ಸ್ವತಃ ಸತ್ಯನಾರಾಯಣ ರಾವ್‌ ಅವರಿಗೆ ನೀಡಿದ್ದಾರೆ. ಹೀಗಾಗಿ ಯಾರು ಯಾರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ ಎಂಬುದು ತಿಳಿಯಬೇಕಿದೆ. ಇದರೊಂದಿಗೆ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್‌ ತೆಲಗಿಗೂ ಐಷಾರಾಮಿ ಸೌಲಭ್ಯ ಕೊಡಲಾಗಿದ್ದು, ಇಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನೂ ರೂಪಾ ಮಾಡಿದ್ದಾರೆ.

Advertisement

ವಿಪರ್ಯಾಸವೆಂದರೆ ಹಿರಿಯ ಅಧಿಕಾರಿಗಳಿಗೆ ವರದಿ ತಲುಪುವ ಮೊದಲೇ ಮಾಧ್ಯಮಗಳಿಗೆ ವರದಿ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರೂಪಾ ಅವರನ್ನೂ ವಿಚಾರಣೆಗೊಳಪಡಿಸಬೇಕು. ಅಲ್ಲದೇ ರೂಪಾ ಅವರಿಂದ ಸೂಕ್ತ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. ತೆಲಗಿಗೆ ನೀಡಿರುವ ಸೌಲಭ್ಯ ಬಗ್ಗೆ ಆತನ ಕೊಠಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕೆಮೆರಾಗಳ ಮೂಲಕ ಡಿಜಿಪಿ ಸತ್ಯನಾರಾಯಣ ರಾವ್‌ ವೀಕ್ಷಿಸಿದರೂ ಯಾವ ಕಾರಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ರೂಪಾ ಎಸಿಬಿಗೆ ದೂರು ನೀಡಿದರೂ  ಅಧಿಕಾರಿಗಳು ದೂರು ಸ್ವೀಕರಿಸಿಲ್ಲ. ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ ಎಂದು ತಮ್ಮ ದೂರಿನಲ್ಲಿ ಶರ್ಮಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next