ಶಿರಸಿ: ವಿವಿಧ ಹಂತಗಳಲ್ಲಿ ಬಾಕಿಯಿರುವ ಒತ್ತುವರಿ ತೆರವು ಪ್ರಕರಣ ತ್ವರಿತವಾಗಿ ಕಾಲಮಿತಿಯಲ್ಲಿ ಜರುಗಿಸಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿ, ಲಿಖಿತ ಟಿಪ್ಪಣೆಯ ಮೂಲಕ ನಿರ್ದೇಶನವನ್ನು ಅರಣ್ಯ ಸಚಿವರು ಹಿರಿಯ ಅಧಿಕಾರಿಗೆ ನೀಡಿರುವುದರಿಂದ ಅರಣ್ಯವಾಸಿಗಳಲ್ಲಿ ಆತಂಕ ಉಂಟಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಸೆ.28ರ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಸೆ.22 ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯಲ್ಲಿನ ಒತ್ತುವರಿ ಪ್ರಕರಣ ತೆರವುಗೊಳಿಸಲು ಸಂಬಂಧಿಸಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಟಿಪ್ಪಣೆಯ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಮಾತನಾಡಿದರು.
ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿರುವ ಸಂದರ್ಭದಲ್ಲಿ ಅರಣ್ಯ ವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಹಕ್ಕಿಗೆ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ನೀಡಬೇಕಾದ ಕಾನೂನು ಬದ್ಧ ರಕ್ಷಣೆ ಹಾಗೂ ಹಕ್ಕಿನ ಕುರಿತು ಉಲ್ಲೇಖಿಸಿಲ್ಲ ಹಾಗೂ ಹಳೆಯ ಅರಣ್ಯ ಒತ್ತುವರಿ ಪ್ರದೇಶದಿಂದ ಒಕ್ಕಲೆಬ್ಬಿಸುವ ಕುರಿತು ಕಾನೂನು ಕ್ರಮ ಬಿಗಿಗೊಳಿಸಲು ನಿರ್ದೇಶನ ನೀಡಿರುವುದು ಹಾಗೂ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿರುವುದು ವಿಷಾದಕರ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ರಾಜು ನರೇಬೈಲ್ ಉಪಸ್ಥಿತರಿದ್ದರು.
ಅರಣ್ಯ ಒತ್ತುವರಿ ಹಾಗೂ ಅರಣ್ಯ ಕಾಯಿದೆ ಅಡಿಯಲ್ಲಿ ಇನ್ನಿತರ ಕಾನೂನು ಉಲ್ಲಂಘನೆಗೆ ಸಚಿವರು ಆನ್‌ಲೈನ್ ಪ್ರಥಮ ಮಾಹಿತಿ ವರದಿ ದಾಖಲಿಸಲು ಸೂಚನೆ ನೀಡಿರುವುದು ಆಘಾತಕಾರಿ ಬೆಳವಣಿಗೆ. ಇದರ ದುರಪಯೋಗ ಅರಣ್ಯವಾಸಿಗಳ ಮೇಲೆ ಆಗಬಹುದೆಂಬ ಶಂಕೆಯಿದೆ. – -ರವೀಂದ್ರ ನಾಯ್ಕ, ಹೋರಾಟಗಾರ