ಬೆಂಗಳೂರು: ಎಸ್ಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಪೂರ್ವ ಸಿದ್ಧತೆ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(ಕೆಎಸ್‌ಇಎಬಿ) ಹಂತದಲ್ಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.
ಈ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ)ಗಳ ಹಂತದಲ್ಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳಲು ಆದೇಶಿಸಲಾಗಿತ್ತು. ಆದರೆ ಸಚಿವ ಬಿ.ಸಿ. ನಾಗೇಶ್ ಪೂರ್ವ ಸಿದ್ಧತೆ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನೂ ಮಂಡಳಿಯಿಂದಲೇ ಸಿದ್ಧಪಡಿಸಿ ನೀಡಲು ಕ್ರಮ ವಹಿಸುವಂತೆ ಸೂಚಿಸಿ ಟಿಪ್ಪಣಿ ಹೊರಡಿಸಿದ್ದರು. ಅದರಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕೆಎಸ್‌ಇಎಬಿ ಸಿದ್ಧಪಡಿಸಿದ ಪೂರ್ವಸಿದ್ಧತೆ ಪ್ರಶ್ನೆ ಪತ್ರಿಕೆಗಳನ್ನು ಎಲ್ಲ ಬಿಇಒ ಲಾಗಿನ್‌ಗೆ ಕಳುಹಿಸಬೇಕು. ಬಿಇಒಗಳು ಆ ಪ್ರಶ್ನೆಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಮುದ್ರಿಸಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಪರೀಕ್ಷೆಗೆ ಪ್ರತೀ ವಿದ್ಯಾರ್ಥಿಯಿಂದ 50 ರೂ. ಸಂಗ್ರಹಿಸಿ ಆಯಾ ಶಾಲಾ ಪ್ರಾಂಶುಪಾಲರು ಬಿಇಒಗಳ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಬಿಇಒಗಳು ಪರೀಕ್ಷಾ ಶುಲ್ಕ ಸ್ವೀಕರಿಸಿದ ಮತ್ತು ಪರೀಕ್ಷಾ ಖರ್ಚುವೆಚ್ಚಗಳ ಬಗ್ಗೆ ಲೆಕ್ಕಪತ್ರ ನಿರ್ವಹಿಸಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಆದೇಶಿಸಲಾಗಿದೆ.
ಈ ಹಿಂದೆ ಪ್ರತೀ ವಿದ್ಯಾರ್ಥಿಗೆ 60 ರೂ. ಶುಲ್ಕ ವಿಧಿಸಿ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ 50 ರೂ. ವಿಧಿಸಲಾಗಿದೆ.