Advertisement

ರಾಜ್ಯ ನಾಯಕರು ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ : ಸುರ್ಜೇವಾಲಾ

03:41 PM Feb 18, 2023 | Vishnudas Patil |

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನನಗೆ ಅಧಿಕಾರವಿಲ್ಲ. ಪಕ್ಷದ ವರಿಷ್ಠ ನಾಯಕರು ಸಾಮೂಹಿಕವಾಗಿ ಕೂಡಿ ಪಟ್ಟಿ ಸಿದ್ಧಪಡಿಸಲಿದ್ದಾರೆ. ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ 770 ಲಿಂಗಗಳ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಸುರ್ಜೇವಾಲಾ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ನನಗೆ ವಿಶೇಷ ಅಧಿಕಾರ ಇಲ್ಲ. ಎಲ್ಲ ನಾಯಕರು ಒಗ್ಗಟ್ಟಾಗಿ ನಿರ್ಧಾರ ಮಾಡುತ್ತಾರೆ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ ಸೇರಿದಂತೆ ಪಕ್ಷದ ರಾಜ್ಯದ ಪ್ರಮುಖರು ಸೇರಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.

ಸಾಮೂಹಿಕ ನಾಯಕತ್ವದಲ್ಲಿ ಅಭ್ಯರ್ಥಿ ಘೋಷಣೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಗೆಲ್ಲುವ ಸಾಮರ್ಥ್ಯದ ಹಿನ್ನೆಲೆಯಲ್ಲಿ ಎಲ್ಲ ಆಯಾಮಗಳನ್ನು ಪರಿಗಣಿಸಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಆದಷ್ಟು ಬೇಗ ಅಭ್ಯರ್ಥಿಗಳನ್ನು ಚುನಾವಣೆ ಆಖಾಡಕ್ಕೆ ಇಳಿಸುತ್ತೇವೆ ಎಂದರು.

ಅಭ್ಯರ್ಥಿಗಳ ಹೆಸರನ್ನು ಶೀಘ್ರವೇ ಘೋಷಿಸುವ ಅಗತ್ಯವಿದೆ. ರಾಜ್ಯದಲ್ಲಿ ಇಬ್ಬರ ನಡುವೆ‌ ಮಾತ್ರ ಚುನಾವಣೆ ನಡೆಯುತ್ತಿದೆ ಎನ್ನುವ ಮೂಲಕ ಜೆಡಿಎಸ್ ಪಕ್ಷ ಲೆಕ್ಕಕ್ಕಿಲ್ಲ ಎನ್ನುವ ದಾಟಿಯಲ್ಲಿ ಮಾತನಾಡಿದರು.

ಕರ್ನಾಟಕದ ಜನ ಹಾಗೂ ಕಾಂಗ್ರೆಸ್ ಒಂದು ಕಡೆ ಇದ್ದರೆ, ಭ್ರಷ್ಟಚಾರದ ಸರ್ಕಾರ ಹಾಗೂ ಬೊಮ್ಮಾಯಿ ಮತ್ತೊಂದು ಕಡೆ ಇದೆ ಎಂದರು

Advertisement

ವಿಜಯಪುರ ನಗರದಲ್ಲಿ ಶಿವರಾತ್ರಿ ಆಚರಿಸಿದ ಸುರ್ಜೇವಾಲಾ

ರಣದೀಪ್ ಸಿಂಗ್ ಸುರ್ಜೇವಾಲಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಜೊತೆ ಶಿವರಾತ್ರಿ ನಿಮಿತ್ತ ಶಿವಲಿಂಗ ಪೂಜೆ ಸಲ್ಲಿಸಿದರು.

ಶುಕ್ರವಾರ ನಗರಕ್ಕೆ ಆಗಮಿಸಿ ಪಕ್ಷದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುರ್ಜೇವಾಲಾ ನಗರದಲ್ಲೇ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಗ್ಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರೊಂದಿಗೆ ಲಿಂಗದ ಗುಡಿಗೆ ತೆರಳಿ 770 ಶಿವಲಿಂಗ ದರ್ಶನ ಪಡೆದು, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಮಹಾಶಿವರಾತ್ರಿ ಎಂದರೆ ಕೆಟ್ಟದನ್ನು ತೊಲಗಿಸುವ ಶಕ್ತಿ ಇರುವ ವಿಶೇಷ ದಿನ. ಕರ್ನಾಟಕದಲ್ಲೂ ಭ್ರಷ್ಟಾಚಾರಿ ಬೊಮ್ಮಾಯಿ ಸರ್ಕಾರವನ್ನು ತೊಲಗಿಸುವ ಸುದಿನ. ಹೀಗಾಗಿ ರಾಜ್ಯದ ಜನರು ಚುನಾವಣೆಯಲ್ಲಿ ಮತದಾನದ ಶಕ್ತಿಯುತ ಅಧಿಕಾರ ಬಳಸಿ ಕೆಟ್ಟದನ್ನು ಜನರನ್ನು ಅಧಿಕಾರದಿಂದ ತೊಲಗಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next