ಶಿರ್ವ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಸಮೀಪದ ಜೋಡು ಪೆಜತ್ತಕಟ್ಟೆಯ ಬಳಿ ಹಾಳಾಗಿ ಹೊಂಡ ಬಿದ್ದು ನೀರು ನಿಂತು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ ರಸ್ತೆಯನ್ನು ಬಂಟಕಲ್ಲು ನಾಗರಿಕ ಸಮಿತಿಯ ಸದಸ್ಯರು ರವಿವಾರ ಶ್ರಮದಾನ ಮಾಡಿ ರಸ್ತೆ ದುರವಸ್ಥೆಗೆ ತಾತ್ಕಾಲಿಕ ಮುಕ್ತಿ ನೀಡಿದ್ದಾರೆ.
ಬಂಟಕಲ್ಲು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್ ನೇತೃತ್ವದಲ್ಲಿ ಸಮಿತಿಯ ಸದಸ್ಯರಾದ ಉಮೇಶ್ ರಾವ್, ಹರೀಶ್ ಹೇರೂರು, ಡೆನ್ನಿಸ್ ಡಿ’ಸೋಜಾ, ವೀರೇಂದ್ರ ಪಾಟ್ಕರ್, ಅನಂತರಾಮ ವಾಗ್ಲೆ, ವಿನ್ಸೆಂಟ್ ಕ್ಯಾಸ್ತಲಿನೋ ಮತ್ತು ರಾಘವೇಂದ್ರ ನಾಯಕ್ ಸೇರಿ ಶ್ರಮದಾನ ನಡೆಸಿ ರಸ್ತೆಯ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ರಸ್ತೆಯಲ್ಲಿ ಗುಂಡಿಬಿದ್ದು ಮಳೆ ಬಂದಾಗ ರಾತ್ರಿ ವೇಳೆ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ಅರಿವಾಗದೆ ಪ್ರತಿನಿತ್ಯವೆಂಬಂತೆ ಅಪಘಾತ ಸಂಭವಿಸುತ್ತಿರುತ್ತಿತ್ತು. ಮುಖ್ಯರಸ್ತೆ ಯಾಗಿರುವುದರಿಂದ ವೇಗವಾಗಿ ಚಲಿಸುವ ವಾಹನ ಸವಾರರು ರಸ್ತೆಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದ್ದು, ಘನ ವಾಹನಗಳು ಎದುರಾದಾಗ ಗುಂಡಿ ತಪ್ಪಿಸುವ ಭರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುವ ಸಾಧ್ಯತೆ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ದಿನವೊಂದಕ್ಕೆ ರಸ್ತೆಯಲ್ಲಿ ಸಾವಿರಾರು ವಾಹನಗಳು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ರಸ್ತೆಗುಂಡಿಗಳಿಂದ ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ ರಸ್ತೆಯನ್ನು ತಾತ್ಕಾಲಿಕವಾಗಿಯಾದರೂ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಂಟಕಲ್ಲು ನಾಗರಿಕ ಸಮಿತಿ ಸದಸ್ಯರ ಶ್ರಮದಾನಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಫಲಿತಾಂಶ ಶೂನ್ಯ: ರಸ್ತೆ ದುರವಸ್ಥೆಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ. ಪಾಟೀಲ್ ಸಹಿತ ಶಾಸಕರು,ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದರೂ ಯಾವುದೇ ಪ್ರಗತಿ ಕಾಣಲಿಲ್ಲ . ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರಸ್ತೆ ದುರವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು ಶ್ರಮದಾನದಲ್ಲಿ ಭಾಗವಹಿಸುವುದಿಲ್ಲ. ಹಾಳಾದ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ. –
ಕೆ.ಆರ್. ಪಾಟ್ಕರ್, ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ