Advertisement

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ

08:44 PM Aug 14, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕು ಈ ವರ್ಷ ಬಹುತೇಕ ಎಲ್ಲಾ ಹಬ್ಬದ ಸಂಭ್ರಮಗಳನ್ನು ಕಳೆಗುಂದಿಸಿದೆ.

Advertisement

ಇದಕ್ಕೆ ಇನ್ನೊಂದು ಸೇರ್ಪಡೆಯಾಗಿ ನಾಡಿನಾದ್ಯಂತ ಸಂಭ್ರಮೋಲ್ಲಾಸಗಳಿಂದ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವ ಆಚರಣೆಯ ಮೇಲೂ ಕೋವಿಡ್ 10 ಸೋಂಕಿನ ಕರಿನೆರಳು ಬಿದ್ದಿದೆ.

ಸಾರ್ವಜನಿಕವಾಗಿ ಗಣೇಶೋತ್ಸವಗಳನ್ನು ಆಚರಣೆ ಮಾಡದಂತೆ ರಾಜ್ಯ ಸರಕಾರವು ಇದೀಗ ಆದೇಶ ಹೊರಡಿಸಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಅದು ಪ್ರಕಟಿಸಿದೆ.

ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ರಾಜ್ಯ ಸರಕಾರದ ಮಾರ್ಗಸೂಚಿಗಳು ಹೀಗಿವೆ:
– ಈ ಬಾರಿ ಚೌತಿ ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಮತ್ತು ಮನೆಗಳಲ್ಲಿ ಮಾತ್ರವೇ ಆಚರಿಸುವುದು.

– ಸಾರ್ವಜನಿಕ ಸ್ಥಳಗಳಲ್ಲಿ (ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ) ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತಿಲ್ಲ.

Advertisement

– ಗಣಪತಿ ವಿಗ್ರಹವನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೊಳ, ಕೆರೆ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜಿಸುವಂತಿಲ್ಲ.

– ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತರುವ ಸಂದರ್ಭದಲ್ಲಿ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಮೆರವಣಿಗೆ ನಡೆಸುವುದಕ್ಕೆ ಕಟ್ಟುನಿಟ್ಟಿನ ನಿರ್ಬಂ‍ಧವಿರಲಿದೆ.

– ಜನರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ವಿಗ್ರಹಗಳನ್ನು ತಮ್ಮ ಮನೆಯ ಆವರಣದಲ್ಲೇ ವಿಸರ್ಜಿಸಬೇಕು.

– ಗಣೇಶ ಹಬ್ಬವನ್ನು ಆಚರಿಸುವ ದೇವಸ್ಥಾನಗಳಲ್ಲಿ ಪ್ರತೀ ನಿತ್ಯ ಸ್ಯಾನಿಟೈಸೇಷನ್ ಮಾಡವುದು ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು ಕಡ್ಡಾಯವಾಗಿರುತ್ತದೆ. ದರ್ಶನ ಸರತಿಯಲ್ಲಿ ಭಕ್ತಾದಿಗಳು ಕನಿಷ್ಟ 06 ಅಡಿ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.

– ಈ ಸಂದರ್ಭದಲ್ಲಿ ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಅಲ್ಲದೇ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೇ ಇಲಾಖೆಗಳಿಂದ ಹೊರಡಿಸಲಾಗುವ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ.

– ಗಣೇಶೋತ್ಸವ ಆಚರಣೆಯ ಸಮಯದಲ್ಲಿ ಸಂದರ್ಭಕ್ಕನುಸಾರವಾಗಿ ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ/ನಿರ್ದೇಶನ ಹಾಗೂ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

– ಹಬ್ಬ-ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಗಣೇಶೋತ್ಸವವನ್ನು ಅದೇ ರೀತಿಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು.

– ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೇ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next