Advertisement

ಮೀಸಲಾತಿಗೆ ಸ್ಪಂದಿಸದ ರಾಜ್ಯ ಸರ್ಕಾರ: ಕೂಡಲಸಂಗಮ ಶ್ರೀ

05:49 PM Jul 09, 2024 | Team Udayavani |

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ಪಂಚಮಸಾಲಿ ಮೀಸಲಾತಿ ಕುರಿತಂತೆ ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿ ಅಧಿ ವೇಶನದ ಮುಕ್ತಾಯದ ನಂತರ ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರೂ ಸರ್ಕಾರ ಪಂಚಮಸಾಲಿ ಮೀಸಲಾತಿ ಕುರಿತು ಚರ್ಚೆ ಮಾಡುತ್ತಿಲ್ಲ ಮತ್ತು ನಮಗೆ ಸೂಕ್ತ ಸ್ಪಂದನೆಯನ್ನು ರಾಜ್ಯ ಸರ್ಕಾರ ನೀಡದೆ ಇರುವುದರಿಂದ ನಾವು ಮತ್ತೂಮ್ಮೆ ಹೋರಾಟಕ್ಕೆ ಇಳಿದಿದ್ದೇವೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Advertisement

ಸ್ಥಳೀಯ ಶಾಸಕ ಸಿದ್ದು ಸವದಿ ಅವರ ಮನೆಯಲ್ಲಿ ಪತ್ರ ಚಳವಳಿಯ ಮೂಲಕ ಕೈಗೊಂಡ ಮೀಸಲಾತಿ ಹೋರಾಟದ ಅಂಗವಾಗಿ ಆಗ್ರಹ ಮನವಿ ಪತ್ರವನ್ನು ನೀಡಿ ಮಾತನಾಡಿದರು.

ನಮ್ಮ ಸಮಾಜದ ಯುವಕರು ಉದ್ಯೋಗ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ನಾವು ನ್ಯಾಯಯುತವಾದ ಹಕ್ಕನ್ನು ಕೇಳುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮನ್ನು 2 ಡಿ ಪ್ರವರ್ಗಕ್ಕೆ ಸೇರಿಸಿ ಶೇ. 7ರಷ್ಟು ಮೀಸಲಾತಿಯನ್ನು ನೀಡಿತ್ತು. ಆದರೆ, ಒಂದು ವರ್ಷವಾದರೂ ಇದು ಅನುಷ್ಠಾನಗೊಳ್ಳದೆ ಇರುವುದರಿಂದ ನಮ್ಮ ಸಮಾಜದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ.

ಸಮಾಜದ ಜನಪ್ರತಿನಿಧಿಗಳು ಸಮಾಜ ಋಣ ತೀರಿಸುವ ಸಲುವಾಗಿ ಹೋರಾಟದಲ್ಲಿ ಭಾಗವಹಿಸಬೇಕು. ಮೂರುವರೆ ವರ್ಷಗಳ
ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೂ ನಮಗೆ ನಮ್ಮ ಹಕ್ಕು ದೊರೆತಿಲ್ಲ. ಮುಂಬರುವ ಮುಂಗಾರು ಅಧಿವೇಶನದಲ್ಲಿ
ಮೀಸಲಾತಿ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಧಾನ ಸಭೆಯ ಅಧ್ಯಕ್ಷರಿಗೂ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪತ್ರ ಸ್ವೀಕರಿಸಿದ ಶಾಸಕ ಸಿದ್ದು ಸವದಿ ಮಾತನಾಡಿ, ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲಿಸುವುದಾಗಿ
ತಿಳಿಸಿದರು.ಬೊಮ್ಮಾಯಿ ಸರ್ಕಾರ ಬೇರೆ ಯಾವುದೆ ಪಂಗಡಕ್ಕೂ ತೊಂದರೆಯಾಗದಂತೆ ನಮಗೆ ಮೀಸಲಾತಿಯನ್ನು ನೀಡಿತ್ತು. ಆದರೆ, ಹೊಸ ಸರ್ಕಾರ ಬಂದು ವರ್ಷ ಕಳೆದರೂ ಯಾವುದೆ ಮೀಸಲಾತಿ ಅನುಷ್ಠಾನಗೊಂಡಿಲ್ಲ.

Advertisement

ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡದ ಜನಪ್ರತಿನಿಧಿಗಳ ಮನೆಯ ಎದುರು ಸಮಾಜ ಬಾಂಧವರು ಧರಣಿ ನಡೆಸುವಂತೆ ಸಿದ್ದು ತಿಳಿಸಿದರು.

ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಫಿರೋಜಿ, ಜಮಖಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಈಟಿ ಮಾತನಾಡಿದರು. ಶ್ರೀಶೈಲ ದಲಾಲ, ಸಿದ್ದನಗೌಡ ಪಾಟೀಲ, ಬಾಬಾಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಈಶ್ವರ ಬಿರಾದಾರ ಪಾಟೀಲ, ಲಕ್ಕಪ್ಪ ಪಾಟೀಲ, ಹನಮಂತ ಶಿರೋಳ, ಚನಬಸಪ್ಪ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಗೌರಿ ಮಿಳ್ಳಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next