Advertisement

ಕೋವಿಡ್ ಕಾರ್ಯಪಡೆ : 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸರಕಾರಿ ನೌಕರರ ಮಾಹಿತಿ ಕೇಳಿದ ಸರಕಾರ

06:45 PM Jul 09, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಹಬ್ಬುವಿಕೆ ಜೋರಾಗುತ್ತಿದೆ.

Advertisement

ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.

ಈ ನಡುವೆ ಅನ್ ಲಾಕ್ 2 ಪ್ರಕ್ರಿಯೆಯೂ ಜಾರಿಯಲ್ಲಿರುವುದರಿಂದ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಂಡೇ ಕೋವಿಡ್ 19 ಸೋಂಕನ್ನು ನಿಯಂತ್ರಿಸುವ ಸಾಹಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ.

ಸರಕಾರದ ಈ ಉದ್ದೇಶಕ್ಕೆ ಈಗಿರುವ ಸಿಬ್ಬಂದಿಗಳು ಸಾಕಾಗುತ್ತಿಲ್ಲ. ಹಾಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿರುವ ಎ, ಬಿ ಹಾಗೂ ಸಿ ಗ್ರೂಪ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಸೋಂಕು ನಿಯಂತ್ರಣದಲ್ಲಿ ಕೋವಿಡ್ ಯೋಧರನ್ನಾಗಿ ಬಳಸಿಕೊಳ್ಳಲು ಸರಕಾರ ನಿರ್ಧರಿಸಿದೆ.

ಈ ಕಾರಣಕ್ಕಾಗಿ ರಾಜ್ಯ ಸರಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿರುವ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರು ವಿಜಯ ಭಾಸ್ಕರ್ ಅವರು ಸಂಬಂಧಿತ ಇಲಾಖೆಗಳ ಎಲ್ಲಾ ಸಾರ್ವಜನಿಕ ವಲಯದ ಘಟಕಗಳಲ್ಲಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ತಕ್ಷಣವೇ ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

Advertisement

ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ವಾಸವಾಗಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರೂಪ್ ಎ, ಬಿ, ಸಿ ವೃಂದದ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳ ಮಾಹಿತಿಯನ್ನು ಸರಕಾರ ಕೇಳಿದೆ.

ಇದರಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ವಿಕಲ ಚೇತನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಿಯಾಯಿತಿ ನೀಡಲಾಗಿದೆ.

ಪ್ರತೀ ಇಲಾಖೆ ಹಾಗೂ ಸಂಸ್ಥೆಯು ತನ್ನಲ್ಲಿರುವ ಒಟ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರಲ್ಲಿ 25 ರಿಂದ 50 ಪ್ರತಿಶತದಷ್ಟನ್ನು ಮಾತ್ರವೇ ಇಲಾಖಾ ಕಾರ್ಯಗಳಿಗೆ ಉಳಿಸಿಕೊಂಡು ಉಳಿದವರೆಲ್ಲರ ಮಾಹಿತಿಯನ್ನು ಕಳುಹಿಸಿಕೊಡುವಂತೆ ಈ ಸೂಚನೆಯಲ್ಲಿ ತಿಳಿಸಲಾಗಿದೆ.

ಹೀಗೆ ಪಟ್ಟಿಮಾಡಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೂರ್ಣ ಸಮಯದ ಆಧಾರದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಡಿಯಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿದ್ದು ಯಾವುದೇ ವಿನಾಯಿತಿ ದೊರಕುವುದಿಲ್ಲ ಎಂದು ಈ ಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಜು.10ರ ಒಳಗಾಗಿ ಈ ಮಾಹಿತಿಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೂಕ್ತ ವಿವರದೊಂದಿಗೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next