ಬೆಳಗಾವಿ:ರಾಜ್ಯ ಕಾಂಗ್ರೆಸ್ ಸರಕಾರ ವರ್ಗಾವಣೆ ದಂಧೆ ಯಲ್ಲಿ ತೊಡಗಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೊನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವರ್ಗಾವಣೆ ಬಗ್ಗೆಯಷ್ಟೇ ಚರ್ಚೆ ನಡೆದಿದೆ. ವರ್ಗಾವಣೆ ದಂಧೆಯಲ್ಲಿ ಚೌಕಾಶಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದ್ದು, ಜಿಲ್ಲಾವಾರು ಸಭೆ ಮಾಡುತ್ತೇವೆ. ಮೋದಿ ಸರಕಾರವೇ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆದಷ್ಟು ಬೇಗ ಆಗಲಿದೆ ಎಂದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆಗಳ ಹಾನಿ, ಜಾನುವಾರು ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಆದರೆ ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಮುಖ್ಯಮಂತ್ರಿಗಳು ಕೇವಲ ವೀಡಿಯೋ ಸಂವಾದ ಮಾಡುತ್ತಿದ್ದಾರೆಯೇ ಹೊರತು ಇದುವರೆಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಮನೆ ಕಳೆದುಕೊಂಡವರಿಗೆ ಸರಕಾರ ಕೂಡಲೇ 10 ಸಾ. ರೂ. ಪರಿಹಾರ ನೀಡಬೇಕು. ಬೆಳೆ ನಾಶ ಆಗಿರುವುದಕ್ಕೆ ಪ್ರಾಥಮಿಕ ಸಮೀಕ್ಷೆ ಆಗಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಾಣ ಹಾನಿ ಆಗಿದೆ. ಸರಕಾರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೂಡಲೇ ಎಲ್ಲ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಸಾವುನೋವು ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಬೇಕು ಎಂದರು.
ನಮ್ಮ ಸರಕಾರವಿದ್ದಾಗ ಪೂರ್ತಿ ಹಾನಿಗೀಡಾದ ಮನೆಗೆ 5 ಲಕ್ಷ ರೂ. ಪರಿಹಾರ ನೀಡಿದ್ದೇವೆ. 2,600 ಕೋಟಿ ರೂ. ಪರಿಹಾರವನ್ನು ಒಂದೇ ತಿಂಗಳಲ್ಲಿ ನೀಡಿದ್ದೆವು. ಅದೇ ರೀತಿ ಈಗಿನ ಸರಕಾರವೂ ನೀಡಬೇಕು ಎಂದು ಆಗ್ರಹಿಸಿದರು.