ಹಾಸನ/ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ರಾಜ್ಯ ದೇವೇಗೌಡರ ಅಪ್ಪನ ಮನೆ ಆಸ್ತಿಯಾ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಈ ವಯಸ್ಸಿನಲ್ಲಿ ನಿಮಗೆ(ದೇವೇಗೌಡರು) ರಾಜಕಾರಣ ಬೇಕಿತ್ತಾ? ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ, ನಾಗೇಂದ್ರ ಅಫ್ಘಾನಿಸ್ತಾನದಿಂದ ಬಂದವರಾ?
ಇಡೀ ರಾಜ್ಯ ದೇವೇಗೌಡರ ಅಪ್ಪನ ಮನೆಯ ಆಸ್ತಿಯಾ ಎಂದು ಪ್ರಶ್ನಿಸಿರುವ ಪ್ರೀತಂ ಗೌಡ, ನಮ್ಮಲ್ಲಿ ಮೇಲಿನ ಗದ್ದೆ ದೊಡ್ಡ ಮಗನಿಗೆ, ಕೆಳಗಿನ ಗದ್ದೆ ಕಿರಿ ಮಗನಿಗೆ ಎಂದು ಹಂಚಿದಂತೆ, ರಾಮನಗರ ಹೆಂಡ್ತಿಗೆ(ಎಚ್ ಡಿಕೆ ಪತ್ನಿ ಅನಿತಾಕುಮಾರಸ್ವಾಮಿ)ಚನ್ನಪಟ್ಟಣ ಮಗನಿಗೆ, ಹಾಸನ, ಮಂಡ್ಯ ಮೊಮ್ಮಕ್ಕಳಿಗೆ ಅಂತ ಹೇಳುತ್ತಾರೆ. ಒಕ್ಕಲಿಗರು ಅಂದ್ರೆ ಈ ರಾಜ್ಯದಲ್ಲಿ ದೇವೇಗೌಡರ ಕುಟುಂಬ ಮಾತ್ರನಾ? ಪ್ರತಾಪ್ ಸಿಂಹ, ನಾಗೇಂದ್ರ ಅಫ್ಘಾನಿಸ್ತಾನದಿಂದ ಬಂದವರಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವೆಲ್ಲರೂ ಭಾರತೀಯರು, ಒಕ್ಕಲಿಗರು ದೇವೇಗೌಡರ ಕುಟುಂಬಕ್ಕೆ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲದೇ ನಾವೇನು ಅವರ ಗುಲಾಮರೂ ಅಲ್ಲ ಎಂದು ಪ್ರೀತಂ ಕಿಡಿಕಾರಿದರು.
ಕೈಹಿಡಿದು ಕರೆದುಕೊಂಡು ಹೋಗಲು ಮೊಮ್ಮಕ್ಕಳು ಬೇಕು: ಶ್ರೀನಿವಾಸಪ್ರಸಾದ್
ಈ ವಯಸ್ಸಿನಲ್ಲಿಯೂ ನಿಮಗೆ ರಾಜಕಾರಣ ಬೇಕಿತ್ತಾ? 90 ವರ್ಷ ಆದ್ರೂ ಚುನಾವಣೆಗೆ ನಿಲ್ಲುತ್ತೀರಿ, ನೂರು ವರ್ಷ ಆದ್ರೂ ನಿಲ್ಲುತ್ತೀರಿ. ಈಗ ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಅಂದರೆ ತಾವು ಸಂಸತ್ ಗೆ ಹೋಗಲು ಕೈ ಹಿಡಿದು ಹೋಗಲು ಮೊಮ್ಮಕ್ಕಳು ಇರಲಿ ಎಂಬ ಕಾರಣಕ್ಕೆ ಇರಬೇಕು ಎಂದು ಶ್ರೀನಿವಾಸ್ ಪ್ರಸಾದ್ ಎಚ್ ಡಿ ದೇವೇಗೌಡರ ವಿರುದ್ಧ ಕಿಡಿಕಾರಿದರು.