Advertisement
ಭಾನುವಾರ ಚಿಕ್ಕೋಡಿ ಸದಲಗಾ ಕ್ಷೇತ್ರ ಶಾಸಕ ಗಣೇಶ್ ಹುಕ್ಕೇರಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತಾದರೂ, ಅವರು ತಕ್ಷಣವೇ ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಟ್ವೀಟ್ ಮಾಡಿ, ಸ್ಪಷ್ಟನೆ ನೀಡಿದರು. ಇನ್ನು ಚಿಂಚೋಳಿ ಶಾಸಕ ಉಮೇಶ್ ಜಾಧವ ಕೂಡ ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಆದರೆ, ಅವರು ಈ ಬಗ್ಗೆ ಯಾರಿಗೂ ಸಂಪರ್ಕಕ್ಕೆ ಸಿಗದೇ ಇರುವುದು ಕೈ ನಾಯಕರಿಗೆ ಆತಂಕವುಂಟು ಮಾಡಿದೆ. ಬಿಜೆಪಿಯವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಭ್ಯರ್ಥಿಯನ್ನಾಗಿ ಮಾಡಲು ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಸೆಳೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
Related Articles
Advertisement
ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿರುವ ಅನೇಕ ಶಾಸಕರನ್ನು ಪಕ್ಷದ ನಾಯಕರು ಮಾತುಕತೆ ಮೂಲಕ ಮನವೊಲಿಸಿ ಸಮಾಧಾನ ಪಡಿಸುವಲ್ಲಿ ಬಹುತೇಕ ಸಫಲರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ರಮೇಶ್ ಜಾರಕಿಹೊಳಿ ಈಗಲೂ ಅತೃಪ್ತ ಶಾಸಕರನ್ನು ತಮ್ಮೊಂದಿಗೆ ಪಕ್ಷ ತೊರೆಯಲು ನಿರ್ಧರಿಸುವಂತೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಬಸವ ಕಲ್ಯಾಣ ಶಾಸಕ ಬಿ. ನಾರಾಯಣರಾವ್ ಹಾಗೂ ಪ್ರತಾಪ್‌ಗೌಡ ಪಾಟೀಲ್ ಪಕ್ಷದಲ್ಲಿ ಆಗಿರುವ ಅನ್ಯಾಯಕ್ಕೆ ಕಾಂಗ್ರೆಸ್‌ನಲ್ಲಿಯೇ ಇದ್ದುಕೊಂಡು ನ್ಯಾಯ ಕೇಳುವುದಾದರೆ ನಾವು ನಿಮ್ಮೊಂದಿಗೆ ಬರುತ್ತೇವೆ ಎಂದು ರಮೇಶ್ ಜಾರಕಿಹೊಳಿ ಅವರಿಗೆ ನೇರವಾಗಿಯೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಂಪ್ಲಿ ಶಾಸಕ ಗಣೇಶ್ ಕೂಡ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ರಮೇಶ್ ಜಾರಕಿಹೊಳಿ ಅವರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದರೂ ಸಂಖ್ಯಾಬಲ ಇದ್ದರಷ್ಟೇ ತಮ್ಮೊಂದಿಗೆ ಬರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿ ರಮೇಶ್ ಜಾರಕಿಹೊಳಿ ನಿರೀಕ್ಷಿತ ಸಂಖ್ಯಾ ಬಲ ಸೇರಿಸಲು ಮುಂಬೈನಲ್ಲಿ ಕುಳಿತು ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಥಣಿ ಶಾಸಕ ಮಹೇಶ್ ಕಮಠಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಮಾತ್ರ ರಮೇಶ್ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಅವರೊಂದಿಗೆ ನಿಂತಿದ್ದಾರೆ ಎನ್ನಲಾಗಿದೆ. ಆದರೆ, ಬಿಜೆಪಿಯವರ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಳ್ಳದಿರುವುದು ಕಾಂಗ್ರೆಸ್ ನಾಯಕರು ಸಂಕ್ರಾಂತಿ ನಂತರವೂ ಯಾವುದೇ ಕ್ರಾಂತಿಯಾಗುವುದಿಲ್ಲ ಎಂದು ನಿಟ್ಟುಸಿರುವ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕುದುರೆ ವ್ಯಾಪಾರಕ್ಕೆ ಷಡ್ಯಂತ್ರ: ಸಚಿವ ಡಿಕೆಶಿಕಾಂಗ್ರೆಸ್ ಶಾಸಕರನ್ನು “ಆಪರೇಷನ್ ಕಮಲ’ ಮೂಲಕ ಸೆಳೆಯಲು ಬಿಜೆಪಿಯು ಕುದುರೆ ವ್ಯಾಪಾರ ಮಾಡುವ ಷಡ್ಯಂತ್ರವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಮೂವರು ಶಾಸಕರು ಈಗಾಗಲೇ ಮುಂಬೈನಲ್ಲಿದ್ದಾರೆ. ಆದರೆ, ಯಾವ ಪಕ್ಷದ ಶಾಸಕರು ಯಾರೊಂದಿಗಿದ್ದಾರೆ ಎಂದು ಹೇಳುವುದಿಲ್ಲ. ಬಿಜೆಪಿಯವರೊಂದಿಗೆ ಕಾಂಗ್ರೆಸ್ ಶಾಸಕರಿದ್ದಾರೋ ಅಥವಾ ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿ ಶಾಸಕರಿದ್ದಾರೋ ಎಲ್ಲವೂ ಬಹಿರಂಗ ವಾಗಲಿದೆ. ಶಾಸಕರ ಹೆಸರುಗಳನ್ನು ಹೇಳಿದರೆ, ಅವರಿಗೆ ತೊಂದರೆಯಾಗುತ್ತದೆ ಎಂದು ಕುತೂಹಲ ಮೂಡಿಸಿದರು. ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೂರವಾಣಿ ಮೂಲಕ ಅನೇಕ ಶಾಸಕರಿಗೆ ಆಮಿಷ ಒಡ್ಡಿರುವುದು ಈಗಾಗಲೇ ಬಹಿರಂಗವಾಗಿದೆ. ಕೆಲವು ಶಾಸಕರು ತಮಗೆ ಬಿಜೆಪಿ ಆಹ್ವಾನ ನೀಡಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಜ.15ರ ನಂತರ ಹೊಸ ಸರ್ಕಾರ ಕ್ರಾಂತಿ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಆಮಿಷ ಒಡ್ಡುತ್ತಿರುವ ಮಾಹಿತಿಯನ್ನು ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸದ್ಯದಲ್ಲಿಯೇ ದಾಖಲೆ ಸಮೇತ ಎಲ್ಲವನ್ನು ಬಹಿರಂಗ ಪಡಿಸುತ್ತೇವೆ ಎಂದು ಹೇಳಿದರು. ಜಾಧವ್ ಬಿಜೆಪಿ ಸೇರ್ಪಡೆ?
ಸಚಿವ ಸ್ಥಾನ ಸಿಗಲಿಲ್ಲವೆಂದು ನಿರಾಶರಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದಟಛಿ ಮುನಿಸಿಕೊಂಡು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳದೇ ದೂರವುಳಿದಿರುವ ಶಾಸಕ ಡಾ| ಉಮೇಶ ಜಾಧವ, ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಮೀಸಲು ಚಿಂಚೋಳಿ ವಿಧಾನಸಭೆ ಮತಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾದರೂ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಅಸಮಾಧಾನ ಉಮೇಶ ಜಾಧವ ಅವರಲ್ಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವಿಷಯ ಕೇವಲ ಊಹಾಪೋಹ.ನಾನೊಬ್ಬ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ. ರಾಜಕಾರಣದಲ್ಲಿ ಕಾಂಗ್ರೆಸ್ ನನಗೆ ಅನೇಕ ಹುದ್ದೆಗಳನ್ನು ನೀಡಿದೆ. ಹೀಗಾಗಿ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ.
– ಗಣೇಶ ಹುಕ್ಕೇರಿ, ಸರ್ಕಾರದ ಮುಖ್ಯ ಸಚೇತಕ