ಬೆಂಗಳೂರು: ಸರಕಾರಕ್ಕೆ ವರ್ಷ ತುಂಬಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಮಾಡುತ್ತಿದ್ದಂತೆ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.
ಈ ನಡುವೆ ಯಡಿಯೂರಪ್ಪ ಮಂಗಳವಾರ ಹಿರಿಯ ಶಾಸಕರ ಜತೆ ಚರ್ಚೆ ನಡೆಸಿ ಅಸಮಾಧಾನ ಶಮನಕ್ಕೆ ಕೈಹಾಕಿದ್ದಾರೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಕಾಣದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರಾದ ಎಸ್.ವಿ. ರಾಮಚಂದ್ರ, ನೆಹರು ಓಲೆಕಾರ್, ಮಾಡಾಳು ವಿರೂಪಾಕ್ಷಪ್ಪ ಮೊದಲಾದವರು ಮಂಗಳವಾರ ಸಿಎಂ ಬಿಎಸ್‌ವೈ ಅವರನ್ನು ಭೇಟಿ ಮಾಡಿದ್ದಾರೆ. ಬುಧವಾರವೂ ಕೆಲವು ಶಾಸಕರು ಸಿಎಂ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಂಪುಟದಲ್ಲಿ ಆರು ಸ್ಥಾನಗಳು ಖಾಲಿಯಿವೆ. ಇವುಗಳಲ್ಲಿ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾಗಬಹುದು. ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆ ನಡೆಯಬೇಕಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಒಬ್ಬರಿಗಂತೂ ಸ್ಥಾನ ನೀಡಬೇಕಾಗುತ್ತದೆ. ಹೀಗಾಗಿ ಸಂಪುಟ ವಿಸ್ತರಣೆಯಾದರೂ ಮೂರು ಸ್ಥಾನಗಳನ್ನು ಮಾತ್ರ ಪಕ್ಷದ ಹಿರಿಯ ಶಾಸಕರಿಗೆ ನೀಡಬಹುದಾಗಿದೆ. ಕೆಲವು ಖಾತೆಗಳನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಿದ್ದು, ಸಂಪುಟ ವಿಸ್ತರಣೆ ಸಿಎಂ ಪಾಲಿಗೆ ಜಟಿಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಎಚ್. ವಿಶ್ವನಾಥ್ ಅವರಿಗೂ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ. ಆದರೆ ಸಿಎಂ ಈ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಜಾತಿ ಲೆಕ್ಕಾಚಾರ ಮತ್ತು ವರಿಷ್ಠರ ನಿರ್ಧಾರವೂ ಮುಖ್ಯವಾಗಿದೆ. ವಿಧಾನ ಪರಿಷತ್‌ನಿಂದಲೂ ಸಚಿವ ಸ್ಥಾನ ಆಕಾಂಕ್ಷಿಗಳು ಇದ್ದಾರೆ. ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಸಿಎಂ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲಕಾರಿ.
ಸವದಿ ನಿಗೂಢ ದಿಲ್ಲಿ ಭೇಟಿ
ರಾಜ್ಯ ಸರಕಾರ ವರ್ಷ ಪೂರೈಸಿದ ಸಂದರ್ಭದಲ್ಲೇ ಡಿಸಿಎಂ ಲಕ್ಷ್ಮಣ ಸವದಿ ದಿಲ್ಲಿಗೆ ತೆರಳಿ ವರಿಷ್ಠ ನಾಯಕರನ್ನು ಭೇಟಿಯಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.