ಚಿಕ್ಕಬಳ್ಳಾಪುರ: ರೈತರ ಜಮೀನು ಕಬಳಿಕೆ ಮಾಡುತ್ತಿರುವ ವಕ್ಫ್ ಬೋರ್ಡ್ ವಿರುದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ (ನ.04) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ನಗರದಲ್ಲಿ ಈ ಕುರಿತು ಶನಿವಾರ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಮರಳುಕುಂಟೆ ಕೃಷ್ಣಮೂರ್ತಿ ಮತ್ತಿತರರು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದೆ. ಇದಕ್ಕೆ ಸಚಿವ ಜಮೀರ್ ಅಹಮ್ಮದ್ ಗೆ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು. ಕೇವಲ ಒಂದು ಸಮುದಾಯವನ್ನುಮತ ಬ್ಯಾಂಕ್ ಗಾಗಿ ಒಲಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ತೋರುತ್ತಿದೆ ಎಂದರು.
ಈಗಾಗಲೇ ಮೂಡಾ ಹಗರಣ ಸಾಬೀತಾಗಿದೆ, ಈಗ ಸರ್ಕಾರ ಹಳೆಯ ಗಜೆಟ್ ಮುಂದಿಟ್ಟುಕೊಂಡು ವಕ್ಫ್ ಬೋರ್ಡ್ ದೀನ ದಲಿತರ ಜಮೀನು ಪಡೆಯಲು ನೋಟಿಸ್ ಜಾರಿ ಮಾಡಲಾಗಿದೆ ಎಂದರು. ಸರ್ಕಾರ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದರು. ಸರ್ಕಾರದ ಧೋರಣೆ ವಿರುದ್ದ ನ.4 ರಂದು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಹೆಚ್ಚು ಆಸ್ತಿಗಳನ್ನು ವಕ್ಫ್ ನೀಡಿದ್ದಾರೆ ಎಂದು ಆರೋಪಿಸಿದರು. 610 ರಲ್ಲಿ ಇಸ್ಲಾಂ ಹುಟ್ಟಿದೆ. ಆದರೆ ಇಸ್ಲಾಂ ಹುಟ್ಟಿಗೂ ಮೊದಲು ನಿರ್ಮಿಸಿದ ದೇವಾಲಯಗಳು ಈಗ ವಕ್ಫ್ ಆಸ್ತಿಗೆ ಸೇರಿಸಲಾಗಿದೆ. ದಾಖಲೆಗಳನ್ನು ತಿದ್ದುಪಡಿ ಹಿಂದೂ ದೇವಾಲಯಗಳು ಹಾಗೂ ಮಠ ಮಾನ್ಯಗಳನ್ನು ವಕ್ಫ್ ಸೇರಿಸಲಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡಲಾಗುವುದೆಂದರು. ಲವ್ ಜಿಹಾದ್ ಮಾದರಿಯಲ್ಲಿ ಲ್ಯಾಂಡ್ ಜಿಹಾದ್ ಮಾಡಲಾಗುತ್ತಿದ್ದು ಇದಕ್ಕೆ ವಕ್ಫ್ ಸಚಿವ ಜಮೀರ್ ಅಹಮದ್ ಕಾರವಾಗಿದ್ದು ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಮುರಳೀಧರ್, ಮಧು ಸೂರ್ಯನಾರಾಯಣ, ಶಿಡ್ಲಘಟ್ಟ ಸೀಕಲ್ ಆನಂದಗೌಡ, ಅಶೋಕ, ಲಕ್ಷ್ಮಿಪತಿ, ದೇವಸ್ಥಾನಹಳ್ಳಿ ರಾಮಣ್ಣ, ಕೊಂಡೇನಹಳ್ಳಿ ಮುರಳಿ ಸೇರಿದಂತೆ ಮತ್ತಿತರರು ಇದ್ದರು.