ಸ್ಟೇಟ್‌ಬ್ಯಾಂಕ್: ನಿತ್ಯ ಸಾವಿರಾರು ಮಂದಿ ಪ್ರಯಾಣಿಸುವ ನಗರದ ಹೃದಯ ಭಾಗವಾದ ಸ್ಟೇಟ್‌ಬ್ಯಾಂಕ್ ಖಾಸಗಿ ಬಸ್‌ನಿಲ್ದಾಣದಲ್ಲಿ ಮೂಲ ಸೌಕರ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆಯನ್ನು ಮಂಗಳೂರು ಪಾಲಿಕೆ ಈಗಾಗಲೇ ಕೈಗೊಂಡಿದ್ದು, ಕಾಮಗಾರಿ ವೇಗ ಪಡೆದುಕೊಂಡಿದೆ. ಬಸ್ ನಿಲುಗಡೆಗೆ ಇದ್ದ ಐದು ಬಸ್ ಶೆಲ್ಟರ್‌ಗಳ ಪೈಕಿ ನಾಲ್ಕನ್ನು ಸಂಪೂರ್ಣ ತೆಗೆಯಲಾಗಿದ್ದು, ಒಂದು ಶೆಲ್ಟರ್‌ನಲ್ಲಿ ಮಾತ್ರ ಪ್ರಯಾಣಿಕರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ನಾಲ್ಕು ಶೆಲ್ಟರ್ ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಪೊಲೀಸ್ ಆಯುಕ್ತರ ಕಚೇರಿ ಭಾಗದಿಂದ ಪಾರ್ಕ್‌ನ ಸನಿಹದಲ್ಲಿದ್ದ ರಸ್ತೆಯನ್ನು ಅಗೆದು ಅಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಈಗಿನಂತೆ ಮುಂದೆ ಬಸ್‌ಗಳ ಆಗಮನಕ್ಕೆ ಮಾತ್ರ ಇಲ್ಲಿಂದ ಅವಕಾಶ ನೀಡಲಾಗುತ್ತದೆ. ಖಾಸಗಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ.
ಬಸ್‌ನಿಲ್ದಾಣ ಅಭಿವೃದ್ಧಿ ಯೋಜನೆ
ಸ್ಟೇಟ್‌ಬ್ಯಾಂಕ್‌ನ ಸರ್ವಿಸ್ ಬಸ್ ನಿಲ್ದಾಣವು ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿ ಸದ್ಯ ಆರಂಭಗೊಂಡಿದೆ. ಸರ್ವಿಸ್ ಬಸ್ ನಿಲ್ದಾಣದ ಎದುರು ಭಾಗದಲ್ಲಿ ಕಾಂಕ್ರೀಟ್ ಅಳವಡಿಸುವ ಕಾಮಗಾರಿ, ಸರ್ವಿಸ್ ರಸ್ತೆ ಕೆಡಹಿ ಬಸ್ ನಿಲ್ದಾಣ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಮುಂದೆ ಕೆಎಸ್ಸಾರ್ಟಿಸಿ ಬಸ್ ನಿಲ್ಲುವ ಪ್ರದೇಶ, ಬಸ್ ನಿಲ್ದಾಣದ ಹಿಂಭಾಗದ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಮೇ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
– ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಪಾಲಿಕೆ