ಸ್ಟೇಟ್‌ಬ್ಯಾಂಕ್: ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ವೇಗ ಪಡೆದಿದ್ದು, ಇಲ್ಲಿ ಹೊಸತಾಗಿ 6 ಬಸ್‌ಬೇ ನಿರ್ಮಾಣಕ್ಕಾಗಿ ಖಾಸಗಿ ಸಹಭಾಗಿತ್ವವನ್ನು ಮಂಗಳೂರು ಪಾಲಿಕೆ ನಿರೀಕ್ಷಿಸಿದೆ.
ಬಸ್‌ನಿಲ್ದಾಣಕ್ಕೆ ಕಾಂಕ್ರೀಟ್ ಸಹಿತ ಮೂಲ ಸೌಲಭ್ಯ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು ಮಂಗಳೂರು ಪಾಲಿಕೆ, ಮುಡಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಿಂದ ಕೈಗೊಳ್ಳಲಾಗಿದೆ. ಇಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನೆಲೆಯಲ್ಲಿ ಬಸ್‌ಬೇಗಳನ್ನು ಸುಸಜ್ಜಿತ ಸ್ವರೂಪದಲ್ಲಿ ಮಾಡಲು ಪಾಲಿಕೆ ನಿರ್ಧರಿಸಿದೆ.ಇದಕ್ಕಾಗಿ ಖಾಸಗಿ ಸಹಭಾಗಿ ತ್ವಕ್ಕೆ ಒತ್ತು ನೀಡಲು ನಿರ್ಧರಿಸಿದೆ.
ನಗರ ವ್ಯಾಪ್ತಿಯಲ್ಲಿ ಖಾಸಗಿ ಭೂಮಿಯಲ್ಲಿ ಅಪೇಕ್ಷಿತ ಏಜಿನ್ಸಿಯವರು ಜಾಹೀರಾತು ಬೋರ್ಡ್ ಹಾಕುವುದಾದರೆ ಯಾವ ನಿಯಮ ಪಾಲಿಸಲಾಗುತ್ತದೆಯೇ ಅದೇ ನಿಯಮಾ ವಳಿಯಂತೆ ಬಸ್ ಬೇ ನಿರ್ಮಿಸಲು ನಿರ್ಧರಿಸಲಾಗಿದೆ. ಜಾಹೀರಾತು ಬೊರ್ಡ್ ಹಾಕುವ ವೇಳೆ ಖಾಸಗಿ ಭೂಮಿಯವರಿಗೆ ನೆಲ ಬಾಡಿಗೆಯನ್ನು ನೀಡಲಾಗುತ್ತದೆ. ಪಾಲಿಕೆಗೆ ಜಾಹೀರಾತು ತೆರಿಗೆ ಪಾವತಿಸಲಾಗುತ್ತದೆ. ಇದೇ ಮಾದರಿ ನಿಯಮವನ್ನು ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಬಸ್ ಬೇ ನಿರ್ಮಾಣಕ್ಕೂ ಅನುಷ್ಠಾನಿಸಲಾಗುತ್ತದೆ.
12 ವರ್ಷಕ್ಕೆ ಗುತ್ತಿಗೆ
ಸರ್ವಿಸ್ ಬಸ್‌ನಿಲ್ದಾಣದಲ್ಲಿ ಕಾಂಕ್ರೀಟ್ ಹಾಕಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಪಾಲಿಕೆಯೇ ಈ ಕಾಮಗಾರಿ, ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬಸ್ ಬೇಗಾಗಿ ಮುಂದೆ ಬರುವ ಏಜೆನ್ಸಿಯವರಿಗೆ ನೆಲ ಬಾಡಿಗೆ ರಿಯಾಯಿತಿ ಇರಲಿದೆ. ಆದರೆ ಜಾಹೀರಾತು ತೆರಿಗೆಯನ್ನು ಸಂಸ್ಥೆಯು ಪಾಲಿಕೆಗೆ ಪಾವತಿಸಬೇಕಾಗಿದೆ. ಗುತ್ತಿಗೆ ಪಡೆಯುವ ಸಂಸ್ಥೆಯವರು ಬಸ್ ಬೇಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಬೇಕು. ನಿರ್ವಹಣೆ ಯನ್ನೂ ಅದೇ ಸಂಸ್ಥೆ ನಡೆಸಬೇಕಿದೆ. ಇದಕ್ಕೆ ಪೂರಕವಾಗಿ ಜಾಹೀರಾತು ಪ್ರಾಯೋಜಕತ್ವ ಪಡೆಯಲು ಸಂಬಂಧಿಸಿದ ಸಂಸ್ಥೆಗೆ ಅವಕಾಶವಿದೆ. 12 ವರ್ಷ ಗಳ ಅವಧಿಗೆ ಗುತ್ತಿಗೆ ಹಕ್ಕು ಇರಲಿದೆ. ಆ ಬಳಿಕ ಇದರ ಪೂರ್ಣ ಹಕ್ಕು ಪಾಲಿಕೆಗೆ ಆಗಿರುತ್ತದೆ.
‘ಬಿಒಟಿ’ ಮಾದರಿ ನಿರ್ಮಾಣ
ಸ್ಟೇಟ್‌ಬ್ಯಾಂಕ್ ಸರ್ವಿಸ್ ಬಸ್‌ನಿಲ್ದಾಣದಲ್ಲಿ 6 ಹೊಸ ಬಸ್ ಬೇ ನಿರ್ಮಾಣವನ್ನು ಬಿಒಟಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಕಾಂಕ್ರೀಟ್ ಕಾಮಗಾರಿಯನ್ನು ಪಾಲಿಕೆ ನಡೆಸಿದೆ. ಮೇಲ್ಛಾವಣಿಯನ್ನು ಮಾತ್ರ ಖಾಸಗಿಯವರು ನಡೆಸಬೇಕಿದೆ. ಅಂದರೆ, ಟೆಂಡರ್ ಪಡೆದುಕೊಳ್ಳುವವರು ಬಸ್ ಬೇ ನಿರ್ಮಿಸಿ, ಅವರೇ ನಿರ್ವಹಣೆ ಮಾಡಬೇಕು. ಅವರು ಜಾಹೀರಾತು ಹಾಕಿದರೆ ಅದರ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕು.
-ಪ್ರೇಮಾನಂದ ಶೆಟ್ಟಿ, ಮೇಯರ್, ಮಹಾನಗರ ಪಾಲಿಕೆ