Advertisement
ರಾಜ್ಯ ಸರಕಾರ ಎಲಿವೇಟ್ ಸ್ಟಾರ್ಟಪ್ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ನವೋದ್ಯಮಿಗಳ ಚಿಂತನೆಗಳ ಸ್ಪರ್ಧೆ ನಡೆಸಿ, ಅತ್ಯುತ್ತಮ 100 ನವೋದ್ಯಮಿಗಳಿಗೆ ಉದ್ಯಮ ನೆಗೆತಕ್ಕೆ ಆರ್ಥಿಕ ನೆರವು ನೀಡಲಿದೆ. ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಈ ಯೋಜನೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಜೂ.23ರಂದು ರಾಯಚೂರಿನಿಂದ ಆರಂಭವಾಗುವ ಸ್ಟಾರ್ಟಪ್ ಸಫಾರಿ ಉತ್ತರ ಹಾಗೂ ಮಧ್ಯ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಾಗಲಿದ್ದು, ಜುಲೈ 4ರಂದು ಪೂರ್ಣಗೊಳ್ಳಲಿದೆ.
Related Articles
Advertisement
ಹುಬ್ಬಳ್ಳಿ-ಕಲಬುರಗಿಯಲ್ಲಿ ಸ್ಪರ್ಧೆ: ಸ್ಟಾರ್ಟಪ್ ಸಫಾರಿ ಅಭಿಯಾನದಲ್ಲಿ ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ನವೋದ್ಯಮಿ ಹಾಗೂ ಉದ್ಯಮಾಸಕ್ತರನ್ನು ಗುರುತಿಸಿ, ರಾಜ್ಯ ಸರಕಾರ ಎಲಿವೇಟ್ ಸ್ಟಾರ್ಟಪ್ ಯೋಜನೆಯಡಿ ನೆರವು ಪಡೆಯುವ ವಿಧಾನ ಅದಕ್ಕೆ ಬೇಕಾದ ತಯಾರಿ, ಉತ್ಪನ್ನ, ಮಾರುಕಟ್ಟೆ ದೃಷ್ಟಿಕೋನ ಇನ್ನಿತರ ಮಾಹಿತಿಯೊಂದಿಗೆ ಸ್ಪರ್ಧೆಗೆ ಅಣಿಗೊಳಿಸಲಿದೆ.
2015ರ ಅನಂತರದಲ್ಲಿ ಉದ್ಯಮ ನೋಂದಣಿ ಮಾಡಿಸಿದ ಉದ್ಯಮಿಗಳು ಹಾಗೂ ಉದ್ಯಮಾಸಕ್ತರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ರಾಜ್ಯಮಟ್ಟದಲ್ಲಿ ನಡೆಯುವ ನವೋದ್ಯಮ ಚಿಂತನೆಗಳ ಸ್ಪರ್ಧೆಗೆ ಪೂರಕವಾಗಿ ಸ್ಯಾಂಡ್‌ಬಾಕ್ಸ್ ಸ್ಟಾರ್ಟಪ್ಸ್ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಸ್ಪರ್ಧೆ ಏರ್ಪಡಿಸಲಿದೆ.
ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ನವೋದ್ಯಮಿಗಳ ಪಟ್ಟಿಯನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿ ಜುಲೈ 15ರಂದು ಹಾಗೂ ಕಲಬುರಗಿಯಲ್ಲಿ ಜು.22ರಂದು ಸ್ಪರ್ಧೆ ನಡೆಯಲಿದೆ. ಬೆಂಗಳೂರು, ಮುಂಬೈ, ಚೆನ್ನೈಗಳಿಂದ ತೀರ್ಪುಗಾರರು ಆಗಮಿಸಿ ನವೋದ್ಯಮ ಚಿಂತನೆಗಳ ಪ್ರದರ್ಶನ ಕುರಿತಾಗಿ ಮೌಲ್ಯಾಂಕನ ಮಾಡಲಿದ್ದಾರೆ.
ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಆಯ್ಕೆಯಾಗುವವರು ಬೆಂಗಳೂರಿನಲ್ಲಿ ಆಗಸ್ಟ್ 29-30ರಂದು ನಡೆಯುವ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಾದ್ಯಂತ ಒಟ್ಟಾರೆ ಸುಮಾರು 240 ನವೋದ್ಯಮ ಚಿಂತನೆಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಅಂತಿಮ ಸ್ಪರ್ಧೆಯಲ್ಲಿ 100 ನವೋದ್ಯಮಿಗಳನ್ನು ಆಯ್ಕೆ ಮಾಡಿ ಉದ್ಯಮ ಆರಂಭ ಇಲ್ಲವೆ ಬೆಳವಣಿಗೆಗೆ ಸರಕಾರದಿಂದ ಆರ್ಥಿಕ ನೆರವು ಸೇರಿದಂತೆ ವಿವಿಧ ನೆರವು ನೀಡಲಾಗುತ್ತದೆ.
* ಅಮರೇಗೌಡ ಗೋನವಾರ