ಬೀದರ: ತಾಲೂಕಿನ ಚಿಟ್ಟಾವಾಡಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಬಂಡೆಪ್ಪ ಖಾಶೆಂಪೂರ ರೈತರಿಗೆ ಬೀಜ ವಿತರಿಸುವ ಮೂಲಕ ಬೀದರ ದಕ್ಷಿಣ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಭಾಗದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಕೋವಿಡ್ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸಿ ಬೀಜ ವಿತರಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಕೇಂದ್ರದಿಂದ ವಿತರಿಸುವ ಬೀಜಗಳು ಹಾಗೂ ದರವನ್ನು ವಿವರಿಸಿದರು. ರೈತರು ಆಂತಕ ಪಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ನೋಡಿಕೊಂಡು ತಮಗೆ ಅವಶ್ಯವಿರುವ ಬೀಜ ಪಡೆಯಬೇಕು ಎಂದು ಸೂಚಿಸಿದರು.
ಜಿಪಂ ಸದಸ್ಯೆ ಶಂಕುತಲಾ ಬೆಲ್ದಾಳೆ, ತಾಪಂ ಸದಸ್ಯ ದಶರಥ ಜೋಸೆಫ್, ಗ್ರಾಪಂ ಅಧ್ಯಕ್ಷೆ ಪ್ರತಿಮಾ ವಿದ್ಯಾಸಾಗರ ಹಾಗೂ ಎಪಿಎಂಸಿ ಸದಸ್ಯ ವೆಂಕಟರೆಡ್ಡಿ ಇದ್ದರು.
ಜನವಾಡಾದಲ್ಲಿ ಶಾಸಕರು ಚಾಲನೆ: ತಾಲೂಕಿನ ಜನವಾಡ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ರಹೀಂ ಖಾನ್ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಕೇವಲ ಸೋಯಾ ಅವರೆ ಬೀಜಗಳನ್ನು ಬಿತ್ತದೆ ವಿವಿಧ ಬೆಳೆಗಳಾದ ಉದ್ದು, ಹೆಸರು, ತೊಗರಿ, ಜೋಳದ ಬೆಳೆಗಳನ್ನು ಕೂಡ ಬಿತ್ತುವ ಮೂಲಕ ಬಹುಬೆಳೆ ಪದ್ಧತಿಯನ್ನು ಅನುಸರಿಸಬೇಕೆಂದು ಇದೆ ವೇಳೆ ಹಾಜರಿದ್ದ ರೈತರಿಗೆ ಸಲಹೆ ಮಾಡಿದರು. ರೈತರು ಬೀಜ ಪಡೆಯುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸೋಂಕು ಹರಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ ಎಂ.ಎ.ಕೆ ಮಾತನಾಡಿ, ಬೀದರ ತಾಲೂಕಿನಲ್ಲಿ ಒಟ್ಟು 6 ರೈತ ಸಂಪರ್ಕ ಕೇಂದ್ರ ಹಾಗೂ 18 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು.
ಕೆವಿಕೆ ವಿಜ್ಞಾನಿಗಳಾದ ಸುನೀಲ ಕುಮಾರ ಎನ್.ಎಂ ಮತ್ತು ಆರ್.ಎಲ್ ಜಾಧವ ಅವರು, ಸೋಯಾ ಅವರೆ, ಉದ್ದು, ಹೆಸರು, ತೊಗರಿ, ಜೋಳ ಬೆಳೆಗಳ ಬೇಸಾಯ ಪದ್ಧತಿ ಬಗ್ಗೆ ರೈತರಿಗೆ ಸವಿಸ್ತಾರವಾಗಿ ವಿವರಿಸಿದರು. ತಾಂತ್ರಿಕ ಅಧಿಕಾರಿ ಆರತಿ ಪಾಟೀಲ ಮಾತನಾಡಿದರು.