Advertisement

ಸದ್ಯದಲ್ಲೇ ರಥಯಾತ್ರೆ ಶುರು!

08:20 AM Mar 30, 2018 | Team Udayavani |

“ರಂಗಿತರಂಗ’ ಬಿಡುಗಡೆಯಾದ ನಾಲ್ಕನೇ ದಿನಕ್ಕೆ ಅನೂಪ್‌ ಮತ್ತು ನಿರೂಪ್‌ ಭಂಡಾರಿ ಮಾಧ್ಯಮದವರೆದುರು ಕುಳಿತಿದ್ದರು. ಅಂದು ಅವರ ಮುಖದಲ್ಲಿ ಬೇಸರವಿತ್ತು. ಕಾರಣ, ಚಿತ್ರವು “ಬಾಹುಬಲಿ’ ಎದುರು ಬಿಡುಗಡೆಯಾಗಿತ್ತು. ಚಿತ್ರಮಂದಿರಗಳ ಅಭಾವ
ಎದುರಾಗಿತ್ತು. ಆದರೆ, “ರಾಜರಥ’ ಬಿಡುಗಡೆಯಾದಾಗ ಅಂತಹ ಪರಿಸ್ಥಿತಿ ಏನಿರಲಿಲ್ಲ. ದೊಡ್ಡ ಸಂತೋಷವಲ್ಲದಿದ್ದರೂ, ಭಂಡಾರಿ ಸಹೋದರರು ಸ್ವಲ್ಪ ನಿರಾಳವಾಗಿದ್ದರು. 

Advertisement

ಚಿತ್ರಕ್ಕೆ ನೀಡಿದ ಪ್ರತಿಕ್ರಿಯೆ ಬಗ್ಗೆ ಖುಷಿಯಾಗಿದ್ದರು. ಮೊದಲು ಮಾತನಾಡಿದ ಅನೂಪ್‌ ಭಂಡಾರಿ, “ಚಿತ್ರ ಬಿಡುಗಡೆಯಾದಾಗಿನಿಂದ ಸಾಕಷ್ಟು ಪ್ರತಿಕ್ರಿಯೆಗಳು  ಬರುತ್ತಿವೆ. ಕೆಲವರು ಚಿತ್ರ “ರಂಗಿತರಂಗ’ ತರಹ ಇರಬಹುದು ಎಂಬ  ನಿರೀಕ್ಷೆಗಳನ್ನಿಟ್ಟುಕೊಂಡು  ಬಂದಿದ್ದರಂತೆ. ಆ ತರಹ ಇಲ್ಲ ಎಂದು ಆಮೇಲೆ ಗೊತ್ತಾಗಿದೆ. ಈಗಾಗಲೇ ಬೆಂಗಳೂರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ಊರುಗಳಿಗೂ ಹೋಗಿ, ಜನರಿಗೆ ಧನ್ಯವಾದ ಸಲ್ಲಿಸುವುದರ ಜೊತೆಗೆ ಚಿತ್ರದ ಬಗ್ಗೆ ಪ್ರಚಾರ ಮಾಡಿ ಬರುತ್ತೇವೆ’ ಎಂದು ಹೇಳಿದರು.

ಇನ್ನು ಚಿತ್ರದಲ್ಲಿ ರವಿಶಂಕರ್‌ ಅವರು ಬಳಿಸಿದ ಸ್ಕೂಟರ್‌ನ ಹರಾಜು ಹಾಕಿ ಎಂದು ಹಲವರು ಹೇಳಿದರಂತೆ. ಆದರೆ, ಅದನ್ನು ಹರಾಜು ಹಾಕುವುದು ಬೇಡ, ಚಿತ್ರ ನೋಡಿದ ಪ್ರೇಕ್ಷಕರಿಗೆ ಕೊಡೋಣ ಎಂದು ಅವರು ತೀರ್ಮಾನಿಸಿದ್ದಾರೆ. “ಸುಮ್ಮನೆ ಹರಾಜು ಹಾಕುವುದಕ್ಕೆ ಇಷ್ಟವಿಲ್ಲ. ಅದರ ಬದಲು, ಚಿತ್ರ ನೋಡಿದ ಪ್ರೇಕ್ಷಕರಿಗೆ ಕೊಡುವುದಕ್ಕೆ ತೀರ್ಮಾನಿಸಿದ್ದೇವೆ. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ಚಿತ್ರಮಂದಿರದಲ್ಲೂ ಒಂದೊಂದು ಬಾಕ್ಸ್‌ ಇಟ್ಟಿರುತ್ತೇವೆ. ಚಿತ್ರ ನೋಡಿದವರು ಟಿಕೆಟ್‌ ಹಿಂದೆ ತಮ್ಮ ಫೋನ್‌ ನಂಬರ್‌ ಬರೆದು ಹಾಕಬೇಕು. ಆ ನಂತರ ಲಕ್ಕಿ ಡಿಪ್‌ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತೇವೆ. ಅದರಲ್ಲಿ ಗೆದ್ದವರಿಗೆ ಸ್ಕೂಟರ್‌ ಕೊಡುತ್ತೇವೆ’ ಎನ್ನುತ್ತಾರೆ ಅನೂಪ್‌ ಭಂಡಾರಿ.

“ರಾಜರಥ’ ಚಿತ್ರವನ್ನು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ಅಲ್ಲದೆ ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಗಿದೆಯಂತೆ. ಈ
ಕುರಿತು ಮಾತನಾಡಿದ ನಿರ್ಮಾಪಕರಲ್ಲೊಬ್ಬರಾದ ಸತೀಶ್‌ ಶಾಸ್ತ್ರಿ, “ಚಿತ್ರವನ್ನು 215 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಕನ್ನಡ ಮತ್ತು ತೆಲುಗು ವರ್ಷನ್‌ಗಳನ್ನು ಬಿಡುಗಡೆ ಮಾಡಿದ್ದೇವೆ. ಮೊದಲ ಮೂರು ದಿನದಲ್ಲಿ ಒಂದು ಲಕ್ಷ ಡಾಲರ್‌ ಕಲೆಕ್ಷನ್‌ ಆಗಿದೆ. ಏಪ್ರಿಲ್‌ 7ರಿಂದ ಬೇರೆ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಗೆ ಅನೂಪ್‌ ಮತ್ತು ನಿರೂಪ್‌ ಹೋಗಿ ಚಿತ್ರದ ಪ್ರಚಾರ ಮಾಡುವುದರ ಜೊತೆಗೆ ಸಂವಾದ ಮಾಡಿ ಬರುತ್ತಾರೆ’ ಎಂದು ಹೇಳಿದರು. ನಿರೂಪ್‌ ಖುಷಿಯಾಗಿದ್ದರು. “ಟ್ರೇಲರ್‌ ನೋಡಿದಾಗ ಬಹಳಷ್ಟು ಜನರಿಗೆ ಚಿತ್ರ ಹೀಗಿರಬಹುದು, ಒಳ್ಳೆಯ ಸಂದೇಶವಿರಬಹುದು ಎಂಬ ನಿರೀಕ್ಷೆ ಇರಲಿಲ್ಲ. ಈಗ ಚಿತ್ರ ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ’
ಎಂದು ಖುಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next