Advertisement

ಈಜುಕೊಳ ಆರಂಭಿಸಿ ಬೇಸಿಗೆ ದಣಿವಾರಿಸಿ

06:42 AM Mar 15, 2019 | |

ಕಲಬುರಗಿ: ಕಡು ಬೇಸಿಗೆ ಆರಂಭವಾಗಿದೆ. ಮುಂಜಾನೆ 7:00 ಗಂಟೆ ಆಗುತ್ತಲೇ ಬಿರು ಬೇಸಿಗೆ ಶುರುವಾಗುತ್ತಿದೆ. ಆದರೆ ಸೆಕೆಯಿಂದ ಉಂಟಾಗುವ ದಣಿವಾರಿಸಲು ಇರುವ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ ದಲ್ಲಿರುವ ಈಜುಕೊಳ ಇನ್ನೂ ಆರಂಭವಾಗಿಲ್ಲ.

Advertisement

ಮಳೆಗಾಲದಲ್ಲಿ ಸಮರ್ಪಕ ಕಾರ್ಯನಿರ್ವಹಿಸುವ ಈಜುಕೊಳ ಪ್ರಸಕ್ತ ಬೇಸಿಗೆ ಅವಧಿಯಲ್ಲಿಯೇ ಕಾರ್ಯಾರಂಭ ಆಗದಿರುವುದು ಹಾಗೂ ಇನ್ನು 10ರಿಂದ 15 ದಿನಗಳ ಕಾಲಾವಕಾಶ ಬೇಕು ಎನ್ನುತ್ತಿರುವ ಜಿಲ್ಲಾಡಳಿತದ ಧೋರಣೆಗೆ ಈಜು ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಈ ಈಜುಕೋಳ ಆರಂಭವಾಗದ ಹಿನ್ನೆಲೆಯಲ್ಲಿ ನಾಗರಿಕರು ಖಾಸಗಿಯಾಗಿರುವ ಸಣ್ಣದಾದ ಈಜುಕೊಳಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ ಹೆಚ್ಚಿನ ಹಣ ನೀಡಿದರೂ ಈಜಾಡಲು ಸೂಕ್ತ ಸ್ಥಳಾವಕಾಶ ಲಭಿಸಿದೇ ನಿರಾಶರಾಗುತ್ತಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ವಿಪರೀತ ಚಳಿ ಇದ್ದ ಹಿನ್ನೆಲೆಯಲ್ಲಿ ಈಜುಕೊಳ ಬಂದ್‌ ಮಾಡಲಾಗಿತ್ತು.
 
ಫೆಬ್ರವರಿ ಎರಡನೇ ಇಲ್ಲವೇ ಮೂರನೇ ವಾರದಲ್ಲಿ ಈಜುಕೊಳ ಆರಂಭವಾಗಬೇಕಿತ್ತು. ಆದರೆ ಇದರ ನಿರ್ವಹಣೆ ಉಸ್ತುವಾರಿ ಹೊಂದಿರುವ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿಗಳು ಇಷ್ಟು ದಿನ ಸುಮ್ಮನಿದ್ದು, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಈಜುಕೊಳಕ್ಕೆ ನೀರು ತುಂಬಿಸಲು ಮುಂದಾಗಿದ್ದಾರೆ. ಮಹಾನಗರಕ್ಕೆ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಾಲ್ಕು ದಿನಕ್ಕೊಮ್ಮೆ ಬಿಡುವ ನೀರನ್ನು ಒಂದೆರಡು ಗಂಟೆಗಳ ಕಾಲ ಈಜುಕೊಳಕ್ಕೆ ಬಿಡಲಾಗುತ್ತಿದೆ. ಒಟ್ಟಾರೆ 12 ಲಕ್ಷ ಲೀಟರ್‌ ನೀರು ಈಜುಕೊಳ ತುಂಬಲು ಬೇಕಾಗುತ್ತದೆ. ಇಷ್ಟು ಪ್ರಮಾಣದ ನೀರು ತುಂಬಲು ಕನಿಷ್ಠ ಒಂದು ತಿಂಗಳ ಕಾಲ ಹಿಡಿಯುತ್ತದೆ. 

ಕಳೆದ ಫೆಬ್ರವರಿ 8ರಿಂದ ಈಜುಕೊಳ ಆರಂಭವಾಗುತ್ತದೆ ಎಂದು ನೊಟೀಸ್‌ ಬೋರ್ಡ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಹೀಗಾಗಿ ಈಜುಪ್ರಿಯರೆಲ್ಲರೂ 8ರಂದು ಬಂದರೆ, ಇಲ್ಲಿ ಮಾಹಿತಿ ನೀಡಲು ಕೂಡ ಯಾರೂ ಇರಲಿಲ್ಲ. ಸರ್ಕಾರದ ಏಕೈಕ ಈಜುಕೊಳ ಇನ್ನೂ ಆರಂಭ ಆಗದಿರುವುದಕ್ಕೆ ಈಜು ಪ್ರಿಯರಾದ ವಿದ್ಯಾರ್ಥಿಗಳು, ಯುವಕರು ಹಾಗೂ ಈಜುವ ಅಭ್ಯಾಸ ರೂಢಿಸಿಕೊಂಡಿರುವರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಜುಕೊಳದ ಕಡೆ ಲಕ್ಷ್ಯ ವಹಿಸಬೇಕಾದ ಕ್ರೀಡಾಂಗಣದ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರು-ಜಿಲ್ಲಾಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಲಕ್ಷ್ಯ ವಹಿಸಿದ್ದರೆ ಅನು ಕೂಲವಾಗುತ್ತಿತ್ತು ಎನ್ನುತ್ತಾರೆ ಈಜು ಪ್ರಿಯರು.

ನಿರ್ಲಕ್ಷ್ಯ ಬೇಡ: ಬೇಸಿಗೆ ದಿನದಲ್ಲಿ ದಿನಾಲು ಸಾವಿರದಿಂದ 1200 ವಿದ್ಯಾರ್ಥಿಗಳು, ಯುವಕರು, ಈಜುಕೊಳ ಪ್ರಿಯರು, ವಯಸ್ಸಾದವರು ಈಜಾಡುತ್ತಾರೆ. ಕೆಲವರಂತು ದಿನನಿತ್ಯ ಈಜುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈಜುಕೊಳದಿಂದ ಇಲಾಖೆಗೆ ತುಂಬಾ ಆರ್ಥಿಕ ಸಹಾಯವಿದೆ. ಆದರೂ ನಿರ್ಲಕ್ಷ್ಯ ವಹಿಸುತ್ತಿರುವುದು ಸಲ್ಲದು. ಸುಮಾರು 400 ಜನರು ವರ್ಷವಿಡಿ ಈಜುವುದನ್ನು ಮೈಗೂಡಿಸಿಕೊಂಡಿದ್ದಾರೆ.

Advertisement

ನೀರಿನ ಸಮಸ್ಯೆಯಿಂದ ಈಜುಕೊಳಕ್ಕೆ ನೀರು ಭರ್ತಿ ಮಾಡಲಿಕ್ಕಾಗುತ್ತಿಲ್ಲ. ನೀರು ನಾಲ್ಕು ದಿನಕ್ಕೊಮ್ಮೆ ಎರಡು ಗಂಟೆ ಮಾತ್ರ ಬರುತ್ತಿದೆ. ಕ್ರೀಡಾಂಗಣದಲ್ಲಿರುವ ಬೋರವೆಲ್‌ಗ‌ಳ ನೀರನ್ನು ಈಜುಕೊಳಕ್ಕೆ ಬಿಡಲಾಗುತ್ತಿದ್ದರೂ ಈಜುಕೊಳ ಭರ್ತಿ ಮಾಡಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಈಜುಕೊಳ ಪ್ರಾರಂಭವಾಗುತ್ತಿಲ್ಲ. ಒಟ್ಟಾರೆ ಇನ್ನು 10ರಿಂದ 12 ದಿನದೊಳಗೆ ಈಜುಕೊಳ ಪ್ರಾರಂಭಿಸಲಾಗುವುದು. ನೀರು ಭರ್ತಿ ಮಾಡಲು ರಾತ್ರಿ ಸಮಯದಲ್ಲೂ ಕಾರ್ಯನಿರ್ವಹಿಸಲಾಗುತ್ತಿದೆ. 
 ಭೀಮರಾವ್‌ ನಾಂದ್ರೆ, ಸಹಾಯಕ ನಿರ್ದೇಶಕರು, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next