Advertisement

6ರಿಂದ ಆರೋಗ್ಯ ಕಾರ್ಡ್‌ ನೋಂದಣಿ ಆರಂಭಿಸಿ

09:50 AM Feb 02, 2019 | Team Udayavani |

ಹಾವೇರಿ: ಜಿಲ್ಲೆಯ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಎಲ್ಲರಿಗೂ ಸ್ಮಾರ್ಟ್‌ಕಾರ್ಡ್‌ ಒದಗಿಸಲು ಫೆ. 6ರಿಂದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್‌ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯಲ್ಲಿ ಕನಿಷ್ಠ 18 ಲಕ್ಷ ಜನರಿಗೆ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಿಸಬೇಕಿದೆ. ಈ ವರೆಗೆ ಕೇವಲ 2500 ಕಾರ್ಡ್‌ಗಳನ್ನು ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ವಿತರಣೆ ಮಾಡಲಾಗಿದೆ. ಆಯುಷ್ಮಾನ್‌ ಕಾರ್ಡ್‌ಗಳನ್ನು ತ್ವರಿತವಾಗಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಜನರ ನೋಂದಣಿ ಮಾಡಿ ಕಾರ್ಡ್‌ ವಿತರಿಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜನಸಾಮಾನ್ಯರಿಗೆ ಅತ್ಯಂತ ಅನುಕೂಲಕರವಾಗಿದೆ. ಐದು ಲಕ್ಷ ರೂ. ವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಈ ಯೋಜನೆಯಡಿ ಭರಿಸಲಾಗುವುದು. ಎಪಿಎಲ್‌ ಮತ್ತು ಬಿಪಿಎಲ್‌ ಕುಟುಂಬಗಳು ತಮ್ಮ ಪಡಿತರ ಕಾರ್ಡ್‌, ಆಧಾರ್‌ ಕಾರ್ಡ್‌, ಭಾವಚಿತ್ರದೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಂದಾಯಿಸಿಕೊಂಡು ಕಾರ್ಡ್‌ಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ರೈತಾಪಿ ಸಮುದಾಯ ಹೆಚ್ಚಾಗಿರುವ ಜಿಲ್ಲೆಯ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಿಕೊಡುವ ಕೆಲಸವಾಗಬೇಕು. ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆ ಈ ನಿಟ್ಟಿನಲ್ಲಿ ಅತ್ಯಂತ ಕ್ರಾಂತಿಕಾರಕ ಯೋಜನೆಯಾಗಿದ್ದು, ಇದು ಕೇವಲ ರೋಗಿಗಳಿಗಷ್ಟೇ ಅಲ್ಲದೆ ಆಸ್ಪತ್ರೆಗಳಿಗೂ ಈ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಯೋಜನೆಯಡಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಸಂಕೀರ್ಣ ದ್ವಿತೀಯ, ತೃತೀಯ ಹಾಗೂ ತುರ್ತು ಹಂತದ ಚಿಕಿತ್ಸೆಗಳನ್ನು ಒದಗಿಸಲಾಗುವುದು. ಒಟ್ಟಾರೆ 1614 ವಿವಿಧ ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲಾಗುವುದು. ಒಂದೊಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯವಿಲ್ಲದ್ದರೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು. ಈ ಯೋಜನೆಯಡಿ ಗುರುತಿಸಿರುವ 160 ಬಗೆಯ ತುರ್ತು ಚಿಕಿತ್ಸಾ ವಿಧಾನಗಳಿಗೆ ಯಾವುದೇ ಸರ್ಕಾರಿ ವೈದ್ಯರ ಶಿಫಾರಸ್ಸು ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

Advertisement

ಕುಷ್ಠರೋಗ ಪತ್ತೆಗೆ ಪ್ರೋತ್ಸಾಹಧನ: ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಕುಷ್ಠರೋಗ ನಿರ್ಮೂಲನಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಅಭಿಯಾನ ಆರಂಭಿಸಿದೆ. ಕುಷ್ಠರೋಗ ಪತ್ತೆಹಚ್ಚಿ ನಿವಾರಣೆ ಮಾಡುವ ನಿಟ್ಟಿನಲ್ಲಿ ಕುಷ್ಠರೋಗಿಯನ್ನು ಪತ್ತೆಹಚ್ಚಿದ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಪ್ರತಿ ಪ್ರಕರಣಕ್ಕೆ ಒಂದು ನೂರು ರೂ. ಪ್ರೋತ್ಸಾಹಧನ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಕುಷ್ಠರೋಗ ನಿವಾರಣೆಗೆ ಶ್ರಮಿಸಿದ ಡಾ| ಪ್ರಶಾಂತ, ಮಲ್ಲೇಶಪ್ಪ ಹಾಗೂ ಆಶಾ ಕಾರ್ಯಕರ್ತೆ ರೂಪಾ ಅವರನ್ನು ಸನ್ಮಾನಿಸಿ ಪ್ರಮಾಣಪತ್ರ ನೀಡಲಾಯಿತು.

ಸಾಂಸ್ಥಿಕ ಹೆರಿಗೆ ಹೆಚ್ಚಳ: ಮನೆ ಹೆರಿಗೆ ಕಡಿಮೆ ಮಾಡಬೇಕು. ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಳ ಮಾಡಬೇಕು. ಶೇ. 100ರಷ್ಟು ಸುರಕ್ಷಿತ ಹೆರಿಗೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ವೈದ್ಯರು ಕ್ರಮವಹಿಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಗಾರ್ಡನ್‌ ಅಭಿವೃದ್ಧಿ ಪಡಿಸಬೇಕು. ಹಸಿರೀಕರಣಗಳ ಮೂಲಕ ಉತ್ತಮ ವಾತಾವರಣ ರೂಪಿಸಬೇಕು ಎಂದು ಅರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಆಸ್ಪತ್ರೆಗಳಲ್ಲಿ ಗಾರ್ಡ್‌ನ್‌ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಉಪನಿರ್ದೇಶರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಶೂನ್ಯವಾಗಿರುವುದು ಸಂತಸದಾಯಕ, ಶಿಶು ಮರಣ ಪ್ರಮಾಣವು ಅತ್ಯಂತ ಕಡಿಮೆ ಇದ್ದು, ಶಿಶು ಮರಣವನ್ನು ಶೂನ್ಯಕ್ಕೆ ಇಳಿಸಲು ವೈದ್ಯರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಕ್ಷಯರೋಗ, ಲಸಿಕಾ ಕಾರ್ಯಕ್ರಮ, ಮಲೇರಿಯಾ, ಪ್ರಸವಪೂರ್ವ ಭ್ರೂಣ ಪತ್ತೆ ಕಾರ್ಯಕ್ರಮಗಳ ಪ್ರಗತಿ ಕುರಿತಂತೆ ಪರಿಶೀಲಿಸಿದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಎಸ್‌. ರಾಘವೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸ ನಾಗರಾಜ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಇದ್ದರು.

ಪ್ರಸಾದ ಪರೀಕ್ಷೆ 
ಇತ್ತೀಚಿನ ವಿಷ ಪ್ರಸಾದ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಜಾತ್ರೆ, ದೇವಾಲಯಗಳಲ್ಲಿ ಸಾರ್ವಜನಿಕವಾಗಿ ವಿತರಿಸುವ ಪ್ರಸಾದ, ಸಾಮೂಹಿಕ ಭೋಜನ ಕುರಿತಂತೆ ತೀವ್ರ ನಿಗಾವಹಿಸಬೇಕು. ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅತ್ಯಂತ ವಿಷಕಾರಿ ಔಷಧಗಳನ್ನು ಖರೀದಿಸುವವರ ಹೆಸರು, ವಿಳಾಸ, ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಪಡೆಯುವಂತೆಯೂ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next