Advertisement

ಅರ್ಧಕ್ಕೆ ನಿಂತ ಇಂದಿರಾ ಕ್ಯಾಂಟೀನ್‌ ಕಾಮಗಾರಿ!

09:07 PM Jun 17, 2019 | Team Udayavani |

ಸಂತೆಮರಹಳ್ಳಿ: ಯಳಂದೂರು ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಗೊಂಡು 4 ತಿಂಗಳು ಕಳೆದಿದೆ. ತರಾತುರಿಯಲ್ಲಿ ಈ ಕಾಮಗಾರಿಯನ್ನು ಮುಗಿಸಿ, ಇದರ ಉದ್ಘಾಟನೆಯನ್ನು ಮಾಡಲಾಗಿದೆ. ಆದರೆ, ಇದಕ್ಕೆ ಇನ್ನೂ ಮೂಲ ಸೌಲಭ್ಯ ಕಲ್ಪಿಸಲು ಪಪಂ ಆಡಳಿತ ವಿಫ‌ಲವಾಗಿದ್ದು, ಕ್ಯಾಂಟೀನ್‌ ಸುತ್ತಮುತ್ತ ಸ್ವಚ್ಛತೆ ಕಾಪಾಡಿಲ್ಲ. ಇದನ್ನು ಸಹಿಸಿಕೊಂಡೇ ಊಟ, ತಿಂಡಿ ಮಾಡುವ ಪಾಡು ಇಲ್ಲಿನ ಗ್ರಾಹಕರದ್ದಾಗಿದೆ.

Advertisement

ಇದೇ ವರ್ಷ ಫೆ.9ರಂದು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮಾಡಲಾಗಿತ್ತು. ಇದಕ್ಕಾಗಿ ಕಾಮಗಾರಿ ಇನ್ನೂ ಅಪೂರ್ಣಗೊಂಡಿದ್ದರೂ. ತರಾತುರಿಯಲ್ಲಿ ಇದಕ್ಕೆ ಸುತ್ತು ಗೋಡೆಗಳನ್ನು ನಿರ್ಮಿಸಲು, ಮುಂಭಾಗದಲ್ಲಿರುವ ಚರಂಡಿ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿಗೆ ಪಟ್ಟಣ ಪಂಚಾಯ್ತಿ ಅನುದಾನವನ್ನು ಬಳಕೆ ಮಾಡಲಾಗಿತ್ತು.

ಪಿಟ್‌ ಇಲ್ಲದ ಶೌಚಾಲಯ: ಸ್ವಚ್ಚ ಭಾರತ ಯೋಜನೆಯ ಮೂಲಕ ಸಾರ್ವಜನಿಕರಲ್ಲಿ ಶೌಚಾಲಯದಲ್ಲಿ ಬಗ್ಗೆ ಜಾಗೃತಿ ಮೂಡಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಆದರೆ, ಇಂದಿರಾ ಕ್ಯಾಂಟೀನ್‌ನ ಶೌಚಗೃಹಕ್ಕೆ ಪಿಟ್‌ಗಾಗಿ ಹಳ್ಳ ತೋಡಿದ್ದರು. ಇದನ್ನು ಹಾಗೇ ಬಿಡಲಾಗಿದೆ. ಕ್ಯಾಂಟೀನ್‌ನಲ್ಲಿರುವ 2 ಶೌಚಗೃಹಗಳಲ್ಲಿ ಒಂದನ್ನು ಸಿಬ್ಬಂದ ಬಳಕೆ ಮಾಡುತ್ತದೆ. ಈ ತ್ಯಾಜ್ಯವೆಲ್ಲವೂ ಇದರ ಬಳಿಯಲ್ಲಿರುವ ತೆರೆದ ಹಳ್ಳದಲ್ಲೇ ಬೀಳುತ್ತದೆ. ಮಳೆ ಬಂದರೆ ಇದೂ ಕೂಡ ತುಂಬಿ ನೀರೆಲ್ಲಾ ಹೊರ ಸೂಸುತ್ತದೆ.

ಬಿರುಕು ಬಿಟ್ಟ ಸುತ್ತುಗೋಡೆ: ಕ್ಯಾಂಟೀನ್‌ನ ಒಂದು ಭಾಗದಲ್ಲಿ ಸುತ್ತುಗೋಡೆ ನಿರ್ಮಾಣವಾಗಿದೆ. ಆದರೆ, ಇದಕ್ಕೆ ಅಡಿಪಾಯವೇ ಹಾಕಿಲ್ಲ. ಈ ಹಿಂದೆ ಕಾಮಗಾರಿ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಈಗ ಈ ಗೋಡೆಯೂ ಬಿರುಕು ಬಿಟ್ಟಿದ್ದು, ಇದು ಕೂಡ ನೆಲಕ್ಕುರುಳುವ ಅಪಾಯವಿದೆ.

ಅರ್ಧಕ್ಕೆ ನಿಂತ ಕಾಮಗಾರಿ: ಕ್ಯಾಂಟೀನ್‌ನ ಬಲಭಾಗದಲ್ಲಿ ದೊಡ್ಡ ಚರಂಡಿ ಇದೆ. ಇದಕ್ಕೆ ಸ್ಲಾಬ್‌ ಹಾಕಿ ಮುಚ್ಚಲು ತೀರ್ಮಾನಿಸಲಾಗಿತ್ತು. ಆದರೆ, ಈ ಕಾಮಗಾರಿಯೂ ಅರ್ಧಕ್ಕ ನಿಂತಿದೆ. ಇದಕ್ಕಾಗಿ ಕಟ್ಟಲಾಗಿರುವ ಕಬ್ಬಿಣದ ಸರಳುಗಳನ್ನು ಕ್ಯಾಂಟೀನ್‌ನ ಒಂದು ಭಾಗದ ಸುತ್ತುಗೋಡೆಗೆ ಒರಗಿಸಿ ಇಡಲಾಗಿದೆ. ತೆರೆದ ಚರಂಡಿಯ ಎದುರಿಗೇ ನಿಂತು ಸೊಳ್ಳೆ, ಕ್ರಿಮಿಕೀಟಗಳ ಉಪಟಳವನ್ನು ಸಹಿಸಿಕೊಂಡು, ದುರ್ವಾಸನೆಯನ್ನು ಹೀರಿಕೊಂಡೆ ಗ್ರಾಹಕರು ಊಟ ತಿಂಡಿಯನ್ನು ಸವಿಯುವ ಅನಿವಾರ್ಯತೆ ಎಂಬುದು ಗ್ರಾಹಕರಾದ ರೇಣುಪ್ರಸಾದ್‌, ನಿಂಗರಾಜು ದೂರಿದ್ದಾರೆ.

Advertisement

ಜಲ್ಲಿಕಲ್ಲು ಮಾರಾಟದ ಶಂಕೆ?: ಕ್ಯಾಂಟೀನ್‌ನ ಮುಂಭಾಗ ಕಟ್ಟಡ ಕಟ್ಟುವ ಡಸ್ಟ್‌ ಹಾಗೂ ಜಲ್ಲಿ ಕಲ್ಲುಗಳನ್ನು ರಾಶಿ ಮಾಡಲಾಗಿದೆ. ಹಲವು ದಿನಗಳಿಂದಲೂ ಇಲ್ಲಿಂದ ಇದನ್ನು ಸಂಗ್ರಹಿಸುವುದು ಹಾಗೂ ಟ್ರಾÂಕ್ಟರ್‌ ಹಾಗೂ ಲಾರಿಗಳಿಗೆ ತುಂಬುವುದು ಮತ್ತೆ ಅದನ್ನು ಇಲ್ಲೇ ಶೇಖರಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾಗಿ ಇದನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ಈ ಬಗ್ಗೆ ಪ್ರಶ್ನಿಸಿದರೆ ಇದನ್ನು ಇಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಯಯನ್ನು ಪೂರ್ಣಗೊಳಿಸಲು ಹಾಕಲಾಗಿದೆ ಎಂಬ ಉತ್ತರವನ್ನು ನೀಡುತ್ತಾರೆ. ಇದನ್ನು ತುಂಬುವ ಹಾಗೂ ಸುರಿಯುವ ವೇಳೆ ಧೂಳೆಲ್ಲಾ ಕ್ಯಾಂಟೀನ್‌ನ ಒಳಹೊಕ್ಕುತ್ತದೆ. ಇದರಿಂದ ಗ್ರಾಹಕರು ಹಾಗೂ ಇಲ್ಲಿನ ಸಿಬ್ಬಂದಿಗೆ ಕೆಲಸ ಮಾಡಲು ತೊಂದರೆಯಾಗುತ್ತಿದೆ.

ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ: ಕ್ಯಾಂಟೀನ್‌ನ ಕೂಗಳತೆ ದೂರದಲ್ಲೇ ಪಪಂ ಕಟ್ಟಡವಿದೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವ, ಕಳಪೆ ಕಾಮಗಾರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ಸಲ್ಲಿಸಿದ್ದರೂ ಪಪಂ ಎಂಜಿನಿಯರ್‌ ಆಗಲಿ ಅಧಿಕಾರಿ ವರ್ಗವಾಗಲಿ ಕ್ರಮ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಇಂದಿರಾ ಕ್ಯಾಂಟೀನ್‌ನ ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
-ರವಿಕುಮಾರ್‌, ಎಇಇ, ನಗರಾಭಿವೃದ್ಧಿ ಕೋಶ ಇಲಾಖೆ

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next