ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧವಾಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯುವುದು ಅನುಮಾನ ಎನ್ನಲಾಗಿದೆ.
ಚುನಾವಣಾ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಕೌನ್ಸಿಲ್ ಕಾರ್ಯದರ್ಶಿಗಳಿಗೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೆ, ಇತ್ತೀಚೆಗೆ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ವಿ.ಎಸ್. ಉಗ್ರಪ್ಪ ಇನ್ನೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡದ ಕಾರಣ ಅವರಿಗೆ ಮತದಾನ ಅವಕಾಶ ನೀಡಬೇಕೆ, ಬೇಡವೆ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರದಲ್ಲಿ ಕೌನ್ಸಿಲ್ ಕಾರ್ಯದರ್ಶಿಗಳು ವಿಧಾನ ಪರಿಷತ್ ಕಾರ್ಯಾಲಯಕ್ಕೆ ಪತ್ರ ಬರೆದು ಮಾಹಿತಿ ಕೋರಿದ್ದಾರೆ.
ಇದರೊಂದಿಗೆ ಇತ್ತೀಚೆಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ನೀಡುವ ಕುರಿತಂತೆಯೂ ಗೊಂದಲ ಸೃಷ್ಟಿಯಾಗಿದೆ. ಇನ್ನು ಕೆಎಂಸಿ ಕಾಯ್ದೆಯಲ್ಲಿ ವಿಧಾನ ಪರಿಷತ್ತು ಸದಸ್ಯರಿಗೆ ಮತದಾನದ ಅವಕಾಶ ಎಂದು ಮಾತ್ರ ಉಲ್ಲೇಖೀಸಿದ್ದು, ಚುನಾವಣೆ ಮೂಲಕ ಅಥವಾ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಹಕ್ಕು ನೀಡಬೇಕೆ ಎಂಬದು ತಿಳಿಯದಂತಾಗಿದೆ. ಆ ಹಿನ್ನೆಲೆಯಲ್ಲಿ ಆ ಕುರಿತು ಮಾಹಿತಿ ನೀಡುವಂತೆ ವಿಧಾನ ಪರಿಷತ್ ಕಾರ್ಯಾಲಯಕ್ಕೆ ಬುಧವಾರ ಪತ್ರ ಬರೆದಿದ್ದಾರೆ.
ಕೌನ್ಸಿಲ್ ಕಾರ್ಯದರ್ಶಿಗಳ ಪತ್ರಕ್ಕೆ ಉತ್ತರ ಬಂದ ನಂತರ ಅದಕ್ಕೆ ಅನುಸಾರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಿದ್ದಾರೆ. ಅದರಂತೆ ಪ್ರಾದೇಶಿಕ ಆಯುಕ್ತರು ಚುನಾವಣೆ ದಿನಾಂಕವನ್ನು ಘೋಷಣೆ ಮಾಡುತ್ತಾರೆ. ಈ ಎಲ್ಲ ಪ್ರಕ್ರಿಯೆ ನಡೆಯಲು ಕನಿಷ್ಠ ಎರಡು ವಾರಗಳಾಗಬಹುದು ಎಂದು ಅಂದಾಜಿಸಲಾಗಿದ್ದು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಉಪಮೇಯರ್ ಸ್ಥಾನಕ್ಕೆ ತಗ್ಗಿದ ಪೈಪೋಟಿ: ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಪೈಪೋಟಿ ತಗ್ಗಿದೆ ಎನ್ನಲಾಗುತ್ತಿದೆ. ಕಾರಣ ಚುನಾವಣೆ ನಡೆದು ಆಯ್ಕೆಯಾಗಲು ಕನಿಷ್ಠ 15 ದಿನಗಳು ಅಗತ್ಯವಿದೆ. ಇನ್ನು ಕಾವೇರಿಪುರ ವಾರ್ಡ್‌ಗೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೂರು ತಿಂಗಳು ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದಾಗಿ ಆಡಳಿತ ನಡೆಸಲು ದೊರೆಯುವುದು ಕೇವಲ 7 ತಿಂಗಳು ಮಾತ್ರ ಹೀಗಾಗಿ ಈ ಹಿಂದೆ ಉಪಮೇಯರ್ ಸ್ಥಾನದಲ್ಲಿದ್ದ ಕೆಲ ಸದಸ್ಯರು ಪೈಪೋಟಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಮತದಾರರ ಸಂಖ್ಯೆ ಹೆಚ್ಚಿಸಿಕೊಂಡ ಮೈತ್ರಿ
ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ವೇಳೆ ಮತಗಳ ಸಂಖ್ಯೆ ಕೊರತೆಯುಂಟಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೈತ್ರಿ ಆಡಳಿತ ಮತದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದರಂತೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣಾ ಮತದಾರರ ಪಟ್ಟಿಗೆ ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್,ನಸೀರ್ ಅಹಮದ್ ಹಾಗೂ ರಮೇಶ್ ಗೌಡ ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಸಿ.ಎಂ. ಇಬ್ರಾಹಿಂ ಹಾಗೂ ಪ್ರಕಾಶ್ ರಾಥೋಡ್ ಅವರನ್ನು ಸಹ ಪಟ್ಟಿಗೆ ಸೇರಿಸಲು ಉದ್ದೇಶಿಸಲಾಗಿದೆ. ಹೀಗಾಗಿ, ಮುಂದಿನ ಮೇಯರ್ ಚುನಾವಣೆಯಲ್ಲಿ ಮತಗಳ ಕೊರತೆಯಾಗುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರು ಹೇಳುತ್ತಾರೆ.