Advertisement
-ಬಾಲ್ಯದಲ್ಲೂ ನೀವು ಇಷ್ಟೇ ಮಾತಾಡುತ್ತಿದ್ರಾ? ಬಾಲ್ಯದ ದಿನಗಳನ್ನು ಮೆಲುಕು ಹಾಕುವುದಾದರೆ…ನಾನು ಬೆಳೆದಿದ್ದೆಲ್ಲಾ ಚಿಕ್ಕಮಗಳೂರಿನಲ್ಲಿ. ಚಿಕ್ಕ ಮಗಳೂರು ಆಗ ತುಂಬಾ ಸಣ್ಣ ಪಟ್ಟಣ. ಬಾಲ್ಯದಲ್ಲಿ ನನ್ನನ್ನು ಲಂಗ ತೊಟ್ಟಿರುವ ರೌಡಿ ಅಂತಲೇ ಕರೆಯುತ್ತಿದ್ದರು. ಅಷ್ಟು ಜೋರಿದ್ದೆ. ಒಮ್ಮೆ ಆಟವಾಡುವಾಗ ನಮ್ಮ ನೆರೆಮನೆ ಹುಡುಗ, ನನ್ನಣ್ಣನಿಗೆ ಹೊಡೆದ ಎಂದು ನಾನು ನನ್ನ ಅಜ್ಜನ ಊರುಗೋಲು ತೆಗೆದುಕೊಂಡು ಹೋಗಿ ಅವನ ಕೈ ಮುರಿಯುವಂತೆ ಹೊಡೆದಿದ್ದೆ. ನಮ್ಮ ಮನೆಯಿಂದ 5 ನಿಮಿಷದ ಹಾದಿ ಅಪ್ಪನ ಕಚೇರಿಗೆ. ಅದರೆದುರೇ ಶಾಲೆ ಇತ್ತು. ಶಾಲೆಯಲ್ಲಿ ಬ್ರೇಕ್ ಸಿಕ್ಕ ಕೂಡಲೇ ಅಪ್ಪನ ಕಚೇರಿಗೆ ತೆರಳಿ ಬೊಂಬಾಯ್ ಮಿಠಾಯಿ, ಪೆಪ್ಪರ್‌ಮಿಂಟ್ ಕೊಳ್ಳಲು 5 ಪೈಸೆ ನೀಡುವಂತೆ ದುಂಬಾಲು ಬೀಳುತ್ತಿದ್ದೆ. 5 ಪೈಸೆಯ ಬೊಂಬಾಯ್ ಮಿಠಾಯಿ ಕೈಯಲ್ಲಿದ್ದರೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಹುಡುಗರ ಜೊತೆ ಗೋಲಿ, ಬುಗುರಿ ಆಡಲು ಹೋಗುತ್ತಿದ್ದೆ. ಹುಡುಗರು ಸೇರಿಸಿಕೊಳ್ಳುತ್ತಿರಲಿಲ್ಲ. ಕಡೆಗೆ ಅವರ ಮೇಲೇ ಜಗಳವಾಡಿ ಆಟಕ್ಕೆ ಸೇರುತ್ತಿದ್ದೆ. ಸ್ನೇಹಿತರದ್ದು ಒಂದು ಗ್ಯಾಂಗ್ ಇತ್ತು. ನಾನು ಆ ಗ್ಯಾಂಗ್ ಲೀಡರ್.
ಕ್ಲಾಸಿನಲ್ಲಿ ಸದಾ ಮಾತಾಡುತ್ತಿರುತ್ತಿದ್ದೆ. ಒಮ್ಮೆ ಚರ್ಚಾಸ್ಪರ್ಧೆ ಆಯೋಜನೆಯಾಗಿತ್ತು. ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಕಳಿಸಬೇಕಿತ್ತು. ಆಗ ಶಿಕ್ಷಕರು, ಈ ಹುಡುಗಿ ಬಾಳ ಮಾತಾಡ್ತಾಳೆ ಇವಳನ್ನೇ ಕಳಿಸುವ ಅಂತ ನನನ್ನು ಆರಿಸಿ, ಸ್ಪರ್ಧೆಗೆ ನನ್ನನ್ನು ತಯಾರು ಮಾಡಿದರು. ಪೋಡಿಯಂ ಕುಟ್ಟಿ ಮಾತನಾಡಬೇಕು ಎಂದು ಅವರು ಹೇಳಿಕೊಟ್ಟಿದ್ದರು. ಚರ್ಚಾಸ್ಪರ್ಧೆ ಅಂದರೆ, ಪೋಡಿಯಂ ಕುಟ್ಟುವುದು ಎಂದೇ ತಿಳಿದಿದ್ದೆ. ಕ್ರಮೇಣ ಚರ್ಚಾಸ್ಪರ್ಧೆ, ಭಾಷಣ ಎಲ್ಲಾ ಹೆಚ್ಚಾದವು. ಅಪ್ಪ ಬರೆದುಕೊಡುತ್ತಿದ್ದರು. ನಾನು ಅಮ್ಮನ ಎದುರು ಅದನ್ನು ಒಪ್ಪಿಸುತ್ತಿದ್ದೆ. ಅಮ್ಮ ನನ್ನ ಹಾವ ಭಾವ, ಧ್ವನಿ ಏರಿಳಿತ ತಿದ್ದುತ್ತಿದ್ದರು. ಮನೆಯಲ್ಲಿ ಕರೆಂಟು ಹೋದರೆ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೆವು. ಆಗ ನಾನು, ಅಣ್ಣ, ತಮ್ಮ, ಅಕ್ಕ ಸೇರಿ ಆರ್ಕೆಸ್ಟ್ರಾದವರ ರೀತಿ ಕಾರ್ಯಕ್ರಮ ಮಾಡುತ್ತಿದ್ದೆವು. ಊದಿನಕಡ್ಡಿಯ ಬಾಕ್ಸ್ ನಮ್ಮ ಮೈಕ್ ಆಗುತ್ತಿತ್ತು. ವೇದಿಕೆ ಹತ್ತಿ ಮಾತನಾಡಲು ಸಂಪೂರ್ಣ ಸಿದ್ಧತೆ ಬಾಲ್ಯದಲ್ಲಿಯೇ ಸಿಕ್ಕಿತ್ತು. -ನಿಮ್ಮದು ಅರೇಂಜ್ಡ್ ಅಥವಾ ಲವ್ ಮ್ಯಾರೇಜ್?
ನಮ್ಮದು ಅಪ್ಪಟ ಅರೇಂಜ್ಡ್ ಮ್ಯಾರೇಜ್. ಎಂಎ ಪರೀಕ್ಷೆ ಮುಗಿಸಿದ್ದೆ ಅಷ್ಟೇ. ನನ್ನನ್ನು ಗಂಡಿನ ಕಡೆಯವರು ನೋಡಿಕೊಂಡು ಹೋದರು. ನಂತರ ನಮಗೆ ಒಪ್ಪಿಗೆಯಾಗಿದೆ ಎಂದು ತಿಳಿಸಿದರು. ಅವರು ಒಪ್ಪಿಕೊಂಡಿದ್ದಾರೆ, ನೀನು ಆ ಹುಡುಗನನ್ನೇ ಮದುವೆಯಾಗು ಎಂದು ಮನೆಯಲ್ಲಿ ಹೇಳಿದರು. ಬೇರೆಯವರಿಗೆ ಕನಿಷ್ಠ ಒಂದೆರಡು ಪ್ರಪೋಸಲ್ ಬಂದಿರುತ್ತದೆ. ಆದರೆ, ನಾನು ನೋಡಿದ ಮೊದಲ ಹುಡುಗನನ್ನೇ ಮದುವೆಯಾದೆ. ನೀವು ನನಗೆ ಆಯ್ಕೆಗಳನ್ನೇ ಕೊಡಲಿಲ್ಲ ಎಂದು ಈಗಲೂ ಪೋಷಕರಿಗೆ ರೇಗಿಸುತ್ತಿರುತ್ತೇನೆ. ಆದರೆ ಇವರನ್ನೇ ಮದುವೆಯಾದ ಬಗ್ಗೆ ಬಹಳ ಸಂತೋಷವಿದೆ. ಅವರು ನನ್ನ ಪ್ರತಿ ಕೆಲಸದಲ್ಲೂ ಹೆಗಲು ಕೊಟ್ಟಿದ್ದಾರೆ. ನನ್ನ ದೊಡ್ಡ ಶಕ್ತಿ ಅವರೇ.
Related Articles
ನಾನು ಟಿ.ವಿ. ನೋಡುವುದು ಬಹಳಾ ಕಡಿಮೆ. ಆದರೆ ಪುಸ್ತಕಗಳನ್ನು ಹೆಚ್ಚು ಓದುತ್ತೇನೆ. ಮನೆಯಲ್ಲಿ ಮಿನಿ ಲೈಬ್ರರಿ ಮಾಡಿದ್ದೇನೆ. ನನ್ನ ವೃತ್ತಿಗೂ ಅದು ಹೆಚ್ಚು ಉಪಯೋಗವಾಗುತ್ತದೆ. ಅಡುಗೆ ಮಾಡುವುದು, ಮನೆ ಅಚ್ಚುಕಟ್ಟು ಮಾಡುವುದೆಂದರೆ ಕಿರಿಕಿರಿ. ಯಾರದ್ದಾದರೂ ಮನೆಗೆ ಹೋದಾಗ ಅವರು ಮನೆಯನ್ನು ಒಪ್ಪವಾಗಿ ಇರಿಸಿಕೊಂಡಿದ್ದರೆ ನನಗೆ ಈಷ್ಯೆìಯಾಗುತ್ತದೆ. ನಾನು ಸದಾ ಹೇಳುತ್ತಿರುತ್ತೇನೆ: ನಾನು ಪಾರ್ಟ್‌ಟೈಮ್ ವೈಫ್, ಪಾರ್ಟ್ ಟೈಮ್ ಮದರ್ ಅಂತ. ನನ್ನ ಮಗಳಿಗೆ ಮತ್ತು ಗಂಡನಿಗೆ ಇದಾವುದರ ಬಗ್ಗೆಯೂ ತಕರಾರಿಲ್ಲ.
Advertisement
-ಬ್ಯುಸಿ ಮಮ್ಮಿಯಾಗಿ ಮಗಳ ಜವಾಬ್ದಾರಿಗಳನ್ನು ಹೇಗೆ ನೆರವೇರಿಸಿದ್ದೀರಿ?ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ 10 ಗಂಟೆಗೆ ಹೋಗಿ 3 ಗಂಟೆಗೆ ವಾಪಸ್ ಬರುತ್ತಿದ್ದೆ. ಆಗೆಲ್ಲಾ ಏನೂ ಸಮಸ್ಯೆ ಎನಿಸಲಿಲ್ಲ. 13 ವರ್ಷಗಳಿಂದ ಹಾಸ್ಯ ಭಾಷಣಕಾರ್ತಿಯಾಗಿ ವೃತ್ತಿ ಸ್ವೀಕರಿಸಿದ ಬಳಿಕ ಮಗಳಿಗೆ ಕ್ವಾಲಿಟಿ ಟೈಮ್ ಕೊಡಲು ಆಗಲಿಲ್ಲ ಎಂದು ಅನಿಸುತ್ತಿದೆ. ಆದರೆ, ಮಗಳು ಅಪೂರ್ವ ಬಹಳ ಇಂಡಿಪೆಂಡೆಂಟ್ ಹುಡುಗಿ. ಈಗ ಕಲರ್ ಕನ್ನಡದಲ್ಲಿ ವೃತ್ತಿ ಮಾಡುತ್ತಿದ್ದಾಳೆ. ಅವಳು ಎಲ್ಲಿಯೂ ನನ್ನ ಹೆಸರನ್ನು ಬಳಸುವುದಿಲ್ಲ. ರಂಗಭೂಮಿಯಲ್ಲಿ ಬಹಳ ಆಸಕ್ತಿ ಅವಳಿಗೆ. -ಹಾಸ್ಯವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಧಾರವನ್ನು ಜನ ಹೇಗೆ ಸ್ವಾಗತಿಸಿದರು?
ನಾನು ಕಾಲೇಜು ಉದ್ಯೋಗ ತೊರೆದು ಸ್ಟಾಂಡ್‌ಅಪ್ ಕಾಮಿಡಿಯನ್ನೇ ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದಾಗ ಬಹಳ ಜನ ಮುಖ್ಯವಾಗಿ ಪುರುಷರು ಧೈರ್ಯಗೆಡಿಸಲು ಪ್ರಯತ್ನ ಮಾಡಿದರು. ಹೆಣ್ಣುಮಗಳಿಂದ ಇದು ಸಾಧ್ಯವೇ ಇಲ್ಲ ಎಂದರು. ಮೇಲ್ ಇಗೋ.. ಅದು ಹಾಗೆಯೇ ಯೋಚಿಸುವುದು. ಆದರೂ ನಾನು ಇದನ್ನೇ ವೃತ್ತಿಯಾಗಿ ತೆಗೆದುಕೊಂಡೆ. 3,500ಕ್ಕಿಂತ ಹೆಚ್ಚು ಶೋಗಳನ್ನು ಕೊಟ್ಟಿದ್ದೇನೆ. 4 ಜನರ ಒಂದು ತಂಡವನ್ನೂ ಕಟ್ಟಿದ್ದೇನೆ. 20ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದೇನೆ. ಹೊರದೇಶಗಳಿಗೆ ಒಬ್ಬಳೇ ಪ್ರಯಾಣಿಸಿದ್ದೇನೆ. ಎಂಥ ಕಷ್ಟದ ಸಂದರ್ಭವನ್ನೂ ಒಬ್ಬಳೇ ನಿಭಾಯಿಸಿದ್ದೇನೆ. ನಾನು ಸೀರೆ, ಬಳೆ ತೊಟ್ಟಿರುವ ಗಂಡು ಅಂತಲೇ ಅನಿಸುತ್ತದೆ ನನಗೆ. -ಹಾಸ್ಯಕ್ಕೆ ಬೇಕಾದ ಸರಕನ್ನು ಎಲ್ಲಿಂದ ಪಡೆಯುತ್ತೀರಿ. ನಿಮ್ಮ ಕಾರ್ಯಕ್ರಮಗಳ ಪೂರ್ವ ತಯಾರಿ ಹೇಗಿರುತ್ತದೆ?
ನಾನು ಸಮಾಜವನ್ನು, ಎಲ್ಲಾ ವಯೋಮಾನದ, ಎಲ್ಲಾ ವರ್ಗಗಳ ಜನರನ್ನು ಆಳವಾಗಿ ಗಮನಿಸುತ್ತಿರುತ್ತೇನೆ. ಅದೇ ನನಗೆ ಮುಖ್ಯ ಸರಕು. ಜೊತೆಗೆ ಈಗಿನ ಟ್ರೆಂಡ್‌ಗೆ ತಕ್ಕಂತೆ ನನ್ನ ನೋಟ, ಚಿಂತನೆಯನ್ನು ಅಪ್‌ಡೇಟ್ ಮಾಡಿಕೊಳ್ಳುತ್ತೇನೆ. ಅದಿಲ್ಲದಿದ್ದರೆ ನಾನು ಇಂದಿನ ಜನರನ್ನು ತಲುಪಲು ಆಗುವುದಿಲ್ಲ. ಕಾರ್ಯಕ್ರಮಕ್ಕೂ ಮೊದಲು ಜನರ ಜೊತೆ ಸ್ವಲ್ಪ ಹೊತ್ತು ಬೆರೆತು ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಮುಖ್ಯವಾಗಿ, ನಾನು ಕಾರ್ಯಕ್ರಮ ನೀಡುತ್ತಿರುವ ಪ್ರೇಕ್ಷಕ ವರ್ಗ ಯಾವುದು, ಯಾವ ಊರಿನ ಜನ ಎಂದು ಗಮನಿಸಿ, ನನ್ನ ಭಾಷಾ ಶೈಲಿ, ಕಾನ್ಸೆಪ್ಟ್ ತಯಾರಿಸಿಕೊಳ್ಳುತ್ತೇನೆ. ಉತ್ತರ ಕರ್ನಾಟಕದಲ್ಲಿ ಮಾತಾಡುವಾಗ ಅಲ್ಲಿನ ಶೈಲಿ, ಮಲೆನಾಡಿನಲ್ಲಿ ಮಲೆನಾಡು ಶೈಲಿ ಬಳಸುತ್ತೇನೆ. ಭಾಷೆಯನ್ನು ಅಚ್ಚುಕಟ್ಟಾಗಿ ಬಳಸುವುದೂ ಒಂದು ಕಲೆ. ನಾನು ಇಂದಿರಾ ಗಾಂಧಿ ಅಂತಿದ್ದೆ!
ನಮ್ಮ ಊರಿನ ಆಜಾದ್ ಪಾರ್ಕ್‌ನಲ್ಲಿ ಪ್ರತಿವರ್ಷ ಚೌತಿಯಲ್ಲಿ ಗಣೇಶನನ್ನು ಕೂರಿಸುತ್ತಿದ್ದರು. ವಾರಗಟ್ಟಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ನಾನು, ಶಾಲೆ ಬಿಟ್ಟ ಕೂಡಲೇ ಪಾರ್ಕ್‌ಗೆ ಹೋಗಿ ಕುಳಿತು ಬಿಡುತ್ತಿದ್ದೆ. ಆಗ ಒಂದೆರಡು ಆರ್ಕೆಸ್ಟ್ರಾ ತಂಡಗಳೂ ಬಂದು ಕಾರ್ಯಕ್ರಮ ನೀಡುತ್ತಿದ್ದವು. ನನ್ನ ಪಾಲಿಗೆ ಆರ್ಕೆಸ್ಟ್ರಾ ಕಲಾವಿದರೆಂದರೆ ಸ್ವರ್ಗದಿಂದ ಭೂಮಿಗೆ ಇಳಿದುಬಂದ ಸೆಲೆಬ್ರಿಟಿಗಳು. ಅವರನ್ನು ವೇದಿಕೆ ಮೇಲೆ ನೋಡುವಾಗಲೆಲ್ಲಾ ನಾನೂ ಒಂದು ದಿನ ಅವರಂತೆಯೇ ವೇದಿಕೆ ಏರಿ ಕಾರ್ಯಕ್ರಮ ನೀಡುವ ಕನಸು ಕಾಣುತ್ತಿದ್ದೆ. ನನಗೆ ವೇದಿಕೆ ಹತ್ತಲು ಪ್ರಮುಖ ಪ್ರೇರಣೆ ಆ ಕಲಾವಿದರು. ನಾನು ಸಣ್ಣವಳಿದ್ದಾಗ ಇಂದಿರಾ ಗಾಂಧಿ ನಮ್ಮ ಊರಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದರು. ಆಗ ಅಪ್ಪ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಭಾಷಣ ತೋರಿಸಿದ್ದರು. ರಾಜಕೀಯ ಪಕ್ಷಗಳ ಬಗ್ಗೆ ಅರಿವೇ ಇರದಿದ್ದ ಸಮಯ ಅದು. ಆದರೆ ಇಂದಿರಾ ಗಾಂಧಿ ಅವರ ಠೀವಿ, ಗತ್ತು, ಮಾತನಾಡುವ ಶೈಲಿ ನನನ್ನು ಬಹುವಾಗಿ ಸೆಳೆದಿತ್ತು. ನನಗೂ ಅವರಂತೆಯೇ ಹೇರ್‌ಕಟ್ ಇತ್ತು. ನಾನು ಇಂದಿರಾ ಗಾಂಧಿಯನ್ನು ನನ್ನೊಳಗೆ ಆವಾಹನೆ ಮಾಡಿಕೊಂಡಿದ್ದೇನೆ ಎಂಬ ಭ್ರಮೆಯಲ್ಲಿರುತ್ತಿದ್ದೆ. ಯಾರಾದರೂ ನಿನ್ನ ಹೆಸರೇನು ಎಂದು ಕೇಳಿದರೆ, “ನಾನು ಇಂದಿರಾ ಗಾಂಧಿ’ ಎಂದು ಉತ್ತರ ಕೊಡುತ್ತಿದ್ದೆ! ಹಾಸ್ಯಕ್ಕೆ ಅಶ್ಲೀಲತೆ ಸೋಂಕಿಸುವ ಅಗತ್ಯವಿಲ್ಲ
ನನಗೇ ಎಷ್ಟೋ ಹಾಸ್ಯ ಕಲಾವಿದರ ಹಾಸ್ಯ ಭಾಷಣಗಳು ಹೇವರಿಕೆ ತರಿಸಿವೆ. ಮಹಿಳೆಯರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿದರೆ, ದ್ವಂದ್ವಾರ್ಥ ಬರುವ ಮಾತುಗಳನ್ನಾಡಿದರೆ ಮಾತ್ರ ಜನರನ್ನು ನಗಿಸಲು ಸಾಧ್ಯ ಎಂದು ಹಲವಾರು ಹಾಸ್ಯ ಭಾಷಣಕಾರರು ತಿಳಿದಿರುತ್ತಾರೆ. ಹೊರದೇಶಗಳಲ್ಲಿ ಮಹಿಳಾ ಸ್ಟಾಂಡ್‌ಅಪ್ ಕಾಮಿಡಿಯನ್‌ಗಳು ಯಾವ ರೀತಿ ಹಾಸ್ಯ ಭಾಷಣ ಮಾಡುತ್ತಾರೆ ಎಂದು ತಿಳಿಯಲು ಯುಟ್ಯೂಬ್‌ನಲ್ಲಿ ವಿಡಿಯೋ ನೋಡುತ್ತಿದ್ದೆ. ಅವರಲ್ಲಿ ಹಲವರು ಮಹಿಳೆಯರ ಒಳಉಡುಪಿನ ಬಗ್ಗೆ ಹಾಸ್ಯ ಮಾಡಿದ್ದರು. ಒಳಉಡುಪಿನ ಕುರಿತು ಮಾತನಾಡಿದ್ದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಹಾಸ್ಯ ಉಕ್ಕಿಸುವ ಸಲುವಾಗಿ ಒಳಉಡುಪಿನ ಉದಾಹರಣೆಗಳಿಗೆ ಅಶ್ಲೀಲತೆ ಸೋಂಕಿಸಿ ಹಾಸ್ಯ ಉಕ್ಕಿಸುವ ಅಗತ್ಯ ಖಂಡಿತಾ ಇಲ್ಲ. ಅಡುಗೆ ಗೊತ್ತಿರೋ ಗಂಡನನ್ನು ಸಂಭಾಳಿಸೋದು ಕಷ್ಟ
ಮನೆಯಲ್ಲಿ ನನ್ನನ್ನು ತುಂಬಾ ಮುದ್ದು ಮಾಡಿ ಬೆಳೆಸಿದ್ದರು. ಮದುವೆಯಾಗಿ ಬಂದಾಗ ನನಗೆ ಸೌಟು ಹಿಡಿಯಲೂ ತಿಳಿದಿರಲಿಲ್ಲ. ನನ್ನ ಗಂಡ, ಶಾಲಾ ದಿನಗಳಿಂದಲೂ ರೂಮು ಮಾಡಿಕೊಂಡು ಅವರೇ ಅಡುಗೆ ತಯಾರಿಸಿಕೊಂಡು ಓದಿದ್ದು. ಹಾಗಾಗಿ ಅವರಿಗೆ ರುಚಿಕಟ್ಟಾಗಿ ಅಡುಗೆ ಮಾಡಲು ಬರುತ್ತಿತ್ತು. ನನಗೆ ಎಲ್ಲಾ ರೀತಿಯ ಅಡುಗೆ ಮಾಡಲು ಅವರೇ ಹೇಳಿಕೊಟ್ಟಿದ್ದು. ನಾನು ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದಾಗ ಇಬ್ಬರೂ ಸೇರಿ ಅಡುಗೆ ಮಾಡುತ್ತಿದ್ದೆವು. ಕೆಲವೊಮ್ಮೆ ಅವರೇ ಅಡುಗೆ ಮಾಡಿಬಿಡುತ್ತಿದ್ದರು. ಆಗೆಲ್ಲಾ ಅಡುಗೆಯ ತಲೆನೋವು ಅಷ್ಟಾಗಿ ಇರಲಿಲ್ಲ. ಆದರೆ ಈಗ ಹೆಚ್ಚಾಗಿ ನಾನೇ ಅಡುಗೆ ಮಾಡುವುದು. ನಾನು ಏನೇ ತಯಾರಿಸಿದರೂ ನನ್ನ ಗಂಡ ಇದಕ್ಕೆ ಒಗ್ಗರಣೆ ಹೆಚ್ಚಾಯಿತು, ಇದು ಇನ್ನೂ ಕುದಿಯಬೇಕಿತ್ತು ಎಂದೆಲ್ಲಾ ಕರೆಕ್ಷನ್‌ಗಳನ್ನು ಹೇಳುತ್ತಲೇ ಇರುತ್ತಾರೆ. ಗಂಡನಿಗೆ ಅಡುಗೆ ಬರುತ್ತದೆ ಎಂದು ಮೊದಲು ಸಂಭ್ರಮಿಸುತ್ತಿದ್ದೆ. ಈಗ, ಏನೇ ಆದರೂ ಗಂಡನಿಗೆ ಅಡುಗೆ ಮಾತ್ರ ತಿಳಿದಿರಬಾರದು ಎಂದುಕೊಳ್ಳುತ್ತೇನೆ. ಚೇತನ ಜೆ.ಕೆ.