ಜ್ಯೂರಿಚ್: ವಿಶ್ವದ ಮಾಜಿ ನಂ.3 ಟೆನಿಸಿಗ, ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ ಮುಂಬರುವ ಮಿಯಾಮಿ ಓಪನ್ ಮತ್ತು ಇಂಡಿಯನ್ ವೆಲ್ಸ್ ಪಂದ್ಯಾವಳಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಮೊಣಕಾಲಿನ ನೋವಿನಿಂದ ಚೇತರಿಸದಿರುವುದೇ ಇದಕ್ಕೆ ಕಾರಣ ಎಂದು ವಾವ್ರಿಂಕ ತಿಳಿಸಿದ್ದಾರೆ.
32ರ ಹರೆಯದ ವಾವ್ರಿಂಕ ಕಳೆದ ವರ್ಷದ ಆಗಸ್ಟ್‌ನಲ್ಲಿ ಮೊಣಕಾಲಿನ ನೋವಿಗೆ ಸಿಲುಕಿದ್ದರು. ಜತೆಗೆ ಫಾರ್ಮ್ ಕೂಡ ಕೈಕೊಟ್ಟಿತ್ತು. ಕ್ವೀನ್ಸ್ ಕ್ಲಬ್ ಮತ್ತು ವಿಂಬಲ್ಡನ್‌ನಲ್ಲಿ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಮರಳಿದರೂ ಅಲ್ಲಿ 2ನೇ ಸುತ್ತಿನಲ್ಲೇ ಸೋತು ಹೊರಬೀಳಬೇಕಾಯಿತು. ಬಳಿಕ ಸೋಫಿಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದರೂ ರೋಟರ್‌ಡ್ಯಾಮ್ ಮತ್ತು ಮಾರ್ಸಿಲೆ ಟೆನಿಸ್ ಕೂಟದಲ್ಲಿ ಗಮನ ಸೆಳೆಯಲು ವಿಫಲರಾದರು. ಮಾರ್ಸಿಲೆಯಲ್ಲಿ ಪಂದ್ಯದ ವೇಳೆಯೇ ಗಾಯಾಳಾಗಿ ನಿರ್ಗಮಿಸಬೇಕಾಯಿತು. ಹೀಗಾಗಿ ದೊಡ್ಡ ಪಂದ್ಯಾವಳಿಗಳಲ್ಲಿ ಆಡುವ ಬದಲು ಸೂಕ್ತ ಅಭ್ಯಾಸ ನಡೆಸಿ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುವುದು ವಾವ್ರಿಂಕ ಯೋಜನೆಯಾಗಿದೆ.
ಫ್ರಾನ್ಸ್‌ನ ರಿಚರ್ಡ್ ಗಾಸ್ಕ್ವೆಟ್, ಜೋ ವಿಲ್‌ಫ್ರೆಡ್ ಸೋಂಗ ಮೂಡ ಗಾಯದ ಸಮಸ್ಯೆಯಿಂದಾಗಿ ಇಂಡಿಯನ್ ವೆಲ್ಸ್ ಪಂದ್ಯಾವಳಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇವರ ಬದಲು ಜೆರೆಮಿ ಚಾರ್ಡಿ, ಲಾಸ್ಲೊ ಜೆರೆ ಮತ್ತು ಲುಕಾಸ್ ಲ್ಯಾಕೊ ಮುಖ್ಯ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.