Advertisement
ಜಂಬೂ ಸವಾರಿಯ ವೇಳೆ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವುದು ಪರಂಪರೆ. ಈ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವುದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೂರು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗುತ್ತದೆ.
Related Articles
Advertisement
ಬೆದರಿದ ಹೊಸ ಆನೆಗಳು: ದಸರಾ ಮಹೋತ್ಸವಕ್ಕೆ ಮೊದಲ ಬಾರಿಗೆ ಬಂದಿರುವ ಈಶ್ವರ, ಲಕ್ಷ್ಮೀ, ಜಯಪ್ರಕಾಶ್, ಎರಡನೇ ಬಾರಿ ಬಂದಿರುವ ಧನಂಜಯ ಹಾಗೂ ದುರ್ಗಾಪರಮೇಶ್ವರಿ ಆನೆಯನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು. ಉಳಿದಂತೆ ಕ್ಯಾಪ್ಟನ್ ಅರ್ಜುನ ಹಾಗೂ ಬಲರಾಮ ನಡುವೆ ಕಾವೇರಿ, ವಿಜಯ, ಗೋಪಿ, ವಿಕ್ರಮ ಆನೆಯನ್ನು ನಿಲ್ಲಿಸಲಾಗಿತ್ತು. ಈ 6 ಆನೆಗಳನ್ನು ಕಟ್ಟಿ ಹಾಕಿರಲಿಲ್ಲ. ಸಾಲಾಗಿ ನಿಲ್ಲಿಸಲಾಗಿತ್ತು. ಮೂರು ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸುವಾಗ ಹಂತ ಹಂತವಾಗಿ ಪಿರಂಗಿಗಳ ಸಮೀಪಕ್ಕೆ ಕರೆತರಲಾಯಿತು. ಈ ಆರು ಆನೆಗಳು ಶಬ್ದಕ್ಕೆ ಬೆದರದೇ ಸುಮ್ಮನಿದ್ದವು.
ಭಾರೀ ಶಬ್ದಕ್ಕೆ ಬೆದರುವುದು ಸಹಜ: ಕಾಡಿನಲ್ಲಿಯೇ ಹುಟ್ಟಿ ಬೆಳೆದಿರುವ ಆನೆಗಳು ಶಬ್ದಕ್ಕೆ ಹೆದರುವುದು ಸಹಜ. ಕಾಡಿನಲ್ಲಿ ವಾಹನಗಳ ಓಡಾಟ, ಶಬ್ದ, ಸಿಡಿಮದ್ದಿನ ಶಬ್ದ ಇರುವುದಿಲ್ಲ. ಇದರಿಂದಲೇ 50 ರಿಂದ 60 ದಿನ ಮೊದಲೇ ಆನೆಗಳನ್ನು ಮೈಸೂರಿಗೆ ಕರೆತಂದು ತಾಲೀಮು ನಡೆಸಲಾಗುತ್ತದೆ. ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಏನೆಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೋ, ಅದೆಲ್ಲವನ್ನು ಕೈಗೊಂಡಿದ್ದೇವೆ. ಶುಕ್ರವಾರ ನಡೆದ ಸಿಡಿಮದ್ದು ಸಿಡಿಸುವ ತಾಲೀಮಿನ ವೇಳೆ ನಾಲ್ಕು ಆನೆಗಳ ಹೆದರಿದ್ದು, ಗಮನಿಸಿದ್ದೇವೆ. ಕಳೆದ ವರ್ಷ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅನುಭವ ಪಡೆದಿರುವ ಧನಂಜಯ ಹೆಚ್ಚು ಹೆದರಿದ್ದಾನೆ. ಹೊಸ ಆನೆಗಳಾದ ಜಯಪ್ರಕಾಶ, ಈಶ್ವರ, ಲಕ್ಷ್ಮೀ ಆನೆಯನ್ನು ಮರಕ್ಕೆ ಕಟ್ಟಿ ಹಾಕಿಲಾಗಿತ್ತು. ಆದರೆ, ಧನಂಜಯನಿಗೆ ಹೋಲಿಸಿದರೆ ಹೊಸ ಮೂರು ಆನೆಗಳು ವರ್ತನೆ ಉತ್ತಮವಾಗಿತ್ತು. ಇನ್ನು ಎರಡು ಬಾರಿ ತಾಲೀಮು ನಡೆಸುವುದರಿಂದ ಹೊಸ ಆನೆಗಳು ಶಬ್ದಕ್ಕೆ ಹೊಂದಿಕೊಳ್ಳುತ್ತವೆ ಎಂದು ಡಿಸಿಎಫ್ ಅಲೆಗ್ಸಾಂಡರ್ ತಿಳಿಸಿದರು.
ಗಜಪಡೆಯ ಮೂರು ಹೊಸ ಆನೆ ಹಾಗೂ ನನಗೂ ಸಿಡಿಮದ್ದಿನ ಅನುಭವ ಹೊಸದು. ಬೇರೆ ಬೇರೆ ಸಿಡಿಮದ್ದಿನ ಶಬ್ದ ಅನುಭವ ಆಗಿದೆ. ದಸರಾ ಪ್ರತೀಕವಾದ ಇದು ಜನರಿಗೂ ಖುಷಿಕೊಟ್ಟಿದೆ. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ವೀಕ್ಷಿಸಿದ್ದಾರೆ. ವಿಶೇಷ ಸಂದರ್ಭ 21 ಕುಶಾಲತೋಪು ಸಿಡಿಸಲಾಗುತ್ತದೆ. ಕೇಂದ್ರ ಗುಪ್ತಚರ ದಳದಿಂದ ಯಾವುದೇ ಬೆದರಿಕೆ ಕುರಿತ ಮಾಹಿತಿ ಬಂದಿಲ್ಲ. ಪ್ರತಿ ವರ್ಷದಂತೆ ಸಂಭ್ರಮವಾಗಿ, ಸುಸೂತ್ರವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಬೇರೆಡೆಯಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಆಗಮಿಸಲಿದ್ದಾರೆ. ಇದಕ್ಕಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ.-ಅಮರ್ ಕುಮಾರ್ ಪಾಂಡೆ, ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ